Advertisement

ಚುನಾವಣೆಗಿದ್ದ ಅಡ್ಡಿಯಲ್ಲಿ ಅರ್ಧ ನಿವಾರಣೆ

01:15 PM Sep 17, 2022 | Team Udayavani |

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಅರ್ಜಿದಾರರಿಗೆ ಹಿನ್ನಡೆಯಾಗಿದ್ದು, ನಗರದ ಕೆಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ತಕರಾರು ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಆ ಮೂಲಕ ಬಿಬಿಎಂಪಿ ಚುನಾವಣೆಗೆ ಇದ್ದ ಅಡ್ಡಿಯಲ್ಲಿ ಅರ್ಧ ನಿವಾರಣೆಯಾದಂತಾಗಿದೆ. ವಾರ್ಡ್‌ ಮರುವಿಂಗಡಣೆ ಅಧಿಸೂಚನೆ ರದ್ದು ಕೋರಿ ಶಾಸಕರಾದ ಸೌಮ್ಯಾರೆಡ್ಡಿ, ಜಮೀರ್‌ ಅಹಮದ್‌ ಮತ್ತಿತರರು ಸಲ್ಲಿಸಿದ್ದ 14 ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಗಳನ್ನು ವಜಾಗೊಳಿಸಿ ಶುಕ್ರವಾರ ಆದೇಶಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ, ವಾರ್ಡ್‌ ಮರುವಿಂಗಡಣೆ ಮಾಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಅರ್ಜಿಗಳನ್ನು ಸೆ.13ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಾರ್ಡ್‌ ಮರು ವಿಂಗಡಣೆ ಸಂಕೀರ್ಣವಾದ ಕೆಲಸ. ವಿಸ್ತಾರವಾದ ಪ್ರದೇಶಗಳನ್ನು ಹಲವು ಅಂಶಗಳ ಆಧಾರದಲ್ಲಿ ವಿಂಗಡಿಸಬೇಕಾಗುತ್ತದೆ. ಅದಕ್ಕಾಗಿ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಲಾಗಿರುತ್ತದೆ. ಎಲ್ಲ ವಾರ್ಡ್‌ಗಳನ್ನೂ ಸಮಾನವಾಗಿ ವಿಂಗಡಿಸುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸುವುದು ಸಹಜ.

ಆದ್ದರಿಂದ, ಸಣ್ಣಪುಟ್ಟ ಲೋಪಗಳಿದ್ದರೆ ನ್ಯಾಯಾಲಯ ಮಧ್ಯ ಪ್ರವೇ ಶಿಸುವುದಿಲ್ಲ. ಗಂಭೀರ ಲೋಪಗಳು ಕಂಡುಬಂದರೆ ಮಾತ್ರ ಮಧ್ಯಪ್ರವೇಶಿಸಲಾಗುವುದು ಎಂದು ಮೌಖೀಕವಾಗಿ ಹೇಳಿದ್ದು ಗಮನಾರ್ಹ.

ಆಯೋಗದ ಮನವಿ: 2011ರ ಜನಗಣತಿ ಆಧರಿಸಿಯೇ ವಾರ್ಡ್‌ ಮರು ರಚಿಸಲಾಗಿದೆ. ವಾರ್ಡ್‌ ವಿಂಗಡಣೆ ಮಾಡುವಾಗ ಕೇವಲ ಜನಸಂಖ್ಯೆಯಷ್ಟೇ ಅಲ್ಲ, ಭೌಗೋಳಿಕ ವಿಸ್ತೀರ್ಣ ಮತ್ತಿತರ ಅಂಶಗಳನ್ನೂ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದ್ದರಿಂದ, ಅರ್ಜಿದಾರರ ವಾದ ಪರಿಗಣಿಸದೆ, ಚುನಾವಣೆಗೆ ಅವಕಾಶ ಮಾಡಿಕೊಡಬೇಕು. ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್‌ ಗಡುವು ನೀಡಿದೆ.

Advertisement

ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲ. ಸಮಯಬದ್ಧವಾಗಿ ಚುನಾವಣೆ ನಡೆಸುವ ಸಾಂವಿಧಾನಿಕ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಈ ಅಂಶಗಳನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಆಯೋಗ ಮನವಿ ಮಾಡಿತ್ತು.

ಸೆ. 21ಕ್ಕೆ ಮೀಸಲಾತಿ ನಿರ್ಧಾರ: ವಾರ್ಡ್‌ ಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಈಗಾಗಲೇ ಪೂರ್ಣಗೊಳಿಸಿರುವ ಹೈಕೋರ್ಟ್‌ ಏಕಸದಸ್ಯ ಪೀಠ ಸೆ. 21ಕ್ಕೆ ಅಂತಿಮ ತೀರ್ಪು ನೀಡಲಿದೆ.

ಮೇಲ್ಮನವಿ ಸಲ್ಲಿಸಿದರೆ ಮತ್ತೆ ವಿಳಂಬ ಸಾಧ್ಯತೆ : ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಈಗಾಗಲೇ ಬಹುತೇಕ ಅಂತಿಮಗೊಂಡಿದ್ದು, ಸೆ.22ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಅದಾದ ನಂತರ ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಿಸಲಿದೆ. ಅಷ್ಟರೊಳಗೆ ನ್ಯಾಯಾಲಯದಲ್ಲಿನ ಎಲ್ಲ ಅರ್ಜಿಗಳು ಇತ್ಯರ್ಥವಾಗಬೇಕಿದೆ. ಸದ್ಯ ವಾರ್ಡ್‌ ಮರುವಿಂಗಡಣೆಗೆ ಸಂಬಂಧಿಸಿದ ಅರ್ಜಿಗಳ ವಜಾ ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದರೆ ಚುನಾವಣೆ ದಿನಾಂಕ ಘೋಷಣೆ ಮತ್ತೆ ಮುಂದಕ್ಕೆ ಹೋಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next