Advertisement

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

01:59 PM May 16, 2022 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ತಕ್ಷಣ ಚುನಾವಣೆ ನಡೆದರೆ, ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ ಎಂಬ ಕೂಗು ಕೇಳಿಬರುತ್ತಿದೆ. ಆ “ಅನ್ಯಾಯ’ ಸರಿಪಡಿಸಲು ರಾಜಕೀಯ ಪಕ್ಷಗಳು ಮುಂದಾದರೂ ಹಿಂದುಳಿದ ವರ್ಗಗಳು ಹಿಂದೇಟು ಹಾಕುತ್ತಿವೆ!

Advertisement

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಒಂದೆಡೆ ಸರ್ಕಾರವು ಮೇಲ್ಮನವಿ ಅಥವಾ ಮರುಪರಿಶೀಲನೆಗೆ ಇರುವ ಮಾರ್ಗೋಪಾಯಗಳ ಹುಡುಕಾಟ ನಡೆಸಿ ದ್ದರೆ, ಮತ್ತೂಂದೆಡೆ ರಾಜಕೀಯ ಪಕ್ಷಗಳು ತೆರೆಮರೆ ಯಲ್ಲಿ ತಮ್ಮ ಹಿಂದುಳಿದ ವರ್ಗಗಳ ಸ್ಥಳೀಯ ನಾಯಕರನ್ನು ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜುಗೊಳಿಸುವ ಪ್ರಯತ್ನವನ್ನೂ ನಡೆಸಿವೆ. ತಕ್ಷಣಕ್ಕೆ ಚುನಾವಣೆ ನಡೆದಲ್ಲಿ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಸಾಧ್ಯವಾದಷ್ಟು ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ಆಗಬಹುದಾದ ಅನ್ಯಾಯ ಸರಿಪಡಿಸಲಾಗುವುದು ಎಂದು ಭರವಸೆ ನೀಡುತ್ತಿವೆ.

ಆದರೆ, ರಾಜಕೀಯ ಪಕ್ಷಗಳು ನೀಡುತ್ತಿರುವ ಭರವಸೆಗಳ ಮೇಲೆ ಒಬಿಸಿಗಳಿಗೆ ಸಂಪೂರ್ಣ ನಂಬಿಕೆಯೂ ಇಲ್ಲ; ಪ್ರಾಯೋಗಿಕವಾಗಿ ಆ ಕೊರತೆ ನೀಗಿಸಲು ಕಷ್ಟಸಾಧ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಒಂದು ವೇಳೆ ಈ ಕಗ್ಗಂಟು ಬಗೆ ಹರಿಯದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೂಡ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವಿವಿಧ ರಾಜಕೀಯ ಪಕ್ಷಗಳು ಈಗ ಇಕ್ಕಟ್ಟಿಗೆ ಸಿಲುಕಿವೆ.

ಪ್ರಾಯೋಗಿಕವಾಗಿ ಕಷ್ಟ’: “ಪಕ್ಷವು ಹಿಂದುಳಿದ ವರ್ಗಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಸಾಮಾನ್ಯ ಕೆಟಗರಿಯಲ್ಲೇ ಹೆಚ್ಚು ಜನರಿಗೆ ಟಿಕೆಟ್‌ ನೀಡುತ್ತದೆ ಎಂದುಕೊಳ್ಳೋಣ. ಎದುರಾಳಿ ಪಕ್ಷಗಳಲ್ಲೂ ಅದೇ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಉತ್ತಮ. ಒಂದು ವೇಳೆ ಅಲ್ಲಿ ಹೆಚ್ಚು ಪ್ರಾಬಲ್ಯ ಇರುವ ಬೇರೆ ಯಾವುದಾದರೂ ಸಮುದಾಯದ ವ್ಯಕ್ತಿಯನ್ನು ಕಣಕ್ಕಿಳಿಸಿದರೆ, ಆಗ ನಮಗೆ ಕಷ್ಟವಾಗುತ್ತದೆ. ಹಾಗಾಗಿ, ಇದೆಲ್ಲವೂ ಎದುರಾಳಿ ಪಕ್ಷಗಳು ಕಣಕ್ಕಿಳಿಸುವ ಅಭ್ಯರ್ಥಿ ಯನ್ನು ಆಧರಿಸಿವೆ’ ಎಂದು ಬಿಜೆಪಿಯ ಹಿಂದುಳಿದ ವರ್ಗದ ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ತಿಳಿಸುತ್ತಾರೆ. “ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಈಗಾಗಲೇ ಒಬಿಸಿಗಳಿಗೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವು ದಿಲ್ಲ. ಈ ಹಿಂದೆ ನೀಡಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಆದರೆ ಪ್ರತಿಸ್ಪರ್ಧಿಯು ಸಮುದಾಯ ಸೇರಿ ಎಲ್ಲ ರೀತಿಯಿಂದಲೂ ಹೆಚ್ಚು ಪ್ರಬಲನಾಗಿದ್ದರೆ, ಆಗ ಎದುರಿಸಲು ಕಷ್ಟವಾಗುತ್ತದೆ. ಇದನ್ನು ಸ್ವತಃ ನಾನು ಎದುರಿಸಿದ್ದೇನೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಬಿಸಿಗಳಿಗೆ ಕಷ್ಟವಾಗಲಿದೆ. ಆದ್ದರಿಂದ ಸಾಧ್ಯವಾದಷ್ಟು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು. ಮತ್ತೂಂದೆಡೆ ಕಾಂತರಾಜ್‌ ನೇತೃತ್ವದ ಆಯೋಗ ಸಲ್ಲಿಸಿದ ವರದಿಯ ಅಂಶಗಳನ್ನೂ ಪರಿಗಣಿಸಬೇಕು. ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿ, ಮನವರಿಕೆ ಮಾಡಿಕೊಡಬೇಕು’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಅಭಿಪ್ರಾಯಪಡುತ್ತಾರೆ.

Advertisement

ಜಾತಿ ಆಧಾರದ ಮೇಲೆ ಚುನಾವಣೆ ಕಡಿಮೆ : “ಸಾಮಾನ್ಯವಾಗಿ ಬಿಬಿಎಂಪಿ ಚುನಾವಣೆಗಳು ಜಾತಿ ಆಧಾರದ ಮೇಲೆ ನಡೆಯುವುದು ತುಂಬಾ ಕಡಿಮೆ. ಇಲ್ಲಿ ಅಭ್ಯರ್ಥಿ ಸೇವೆ, ಅಭಿವೃದ್ಧಿ ಯೋಜನೆಗಳು, ಎಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಅದೇನೇ ಇರಲಿ ಈಗಲೇ ಚುನಾವಣೆ ಘೋಷಣೆಯಾದರೆ, ಸಾಮಾನ್ಯ ಕೆಟಗರಿಯಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಲಾಗುವುದು. ನಗರದ ಯಾವ ಭಾಗದಲ್ಲಿ ಹೆಚ್ಚು ಹಿಂದುಳಿದ ವರ್ಗದವರಿದ್ದಾರೆ ಎಂಬುದನ್ನು ಸಮೀಕ್ಷೆ ನಡೆಸಿ, ಆಯಾ ಸಮುದಾಯದ ಮುಖಂಡರನ್ನು ಕಣಕ್ಕಿಳಿಸಲಾಗುವುದು’ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಹೇಳುತ್ತಾರೆ.

ನ್ಯಾ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ : ಒಬಿಸಿಯಲ್ಲಿ 101 ಜಾತಿಗಳಿದ್ದರೂ ಬೆರಳೆಣಿಕೆಯಷ್ಟು ಸಮುದಾಯಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿದೆ ಎಂಬ ಆರೋಪ ಇದೆ. ಇನ್ನೂ ಅನೇಕ ಸಮುದಾಯಗಳಿಗೆ ಆದ್ಯತೆ ಸಿಕ್ಕಿಲ್ಲ. ಆಯಾ ಪ್ರದೇಶಗಳಲ್ಲಿ ಪ್ರಾಬಲ್ಯ ಇರುವ ಸಮುದಾಯಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ಲೆಕ್ಕಾಚಾರ ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿಯೇ ನ್ಯಾಯಮೂರ್ತಿ ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ.

ವಿಜಯಕುಮಾರ್‌ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next