ಬೆಂಗಳೂರು: ನೆಲದ ಬಾಡಿಗೆ, ಪರವಾನಿಗೆ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ಪರಿಶೀಲನಾ ಶುಲ್ಕಹಾಗೂ ಭದ್ರತಾ ಠೇವಣಿಗಳನ್ನು ವಿಧಿಸುವ ಅಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಗೆ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ವಿಚಾರವಾಗಿ ಸುಂದರ ಶೆಟ್ಟಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಮಹತ್ವದ ಆದೇಶ ನೀಡಿದ್ದು, ಅರ್ಜಿಗಳನ್ನು ಮಾನ್ಯ ಮಾಡಿದೆ.
ಅಲ್ಲದೇ ಹಾಲಿ ಇರುವ ಕಾನೂನಿನಲ್ಲಿ ಆ ರೀತಿಯ ಶುಲ್ಕಗಳನ್ನು ಸಾರ್ವಜನಿಕರ ಮೇಲೆ ಹೇರಲು ಪಾಲಿಕೆಗೆ ಅವಕಾಶವಿಲ್ಲ.ಬೇಕಿದ್ದರೆ ಬಿಬಿಎಂಪಿ ಮತ್ತು ಸರ್ಕಾರ ಸೂಕ್ತ ಕಾನೂನು ತಿದ್ದುಪಡಿ ಮಾಡಿ ಅದಕ್ಕೆ ಅನುಗುಣವಾಗಿ ನಿಯಮಗಳನ್ನು ರಚಿಸಿಕೊಂಡು ನಂತರ ಶುಲ್ಕಗಳನ್ನು ವಿಧಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಅದೇ ರೀತಿ ಕೆರೆ ನವೀಕರಣ ಶುಲ್ಕ ವಿಧಿಸಲು ಬಿಬಿಎಂಪಿ ಹೊರಡಿಸಿದ್ದ ಆದೇಶ ಸಹ ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಈ ಶುಲ್ಕಗಳನ್ನು ವಿಧಿಸಲು ಕಾಯ್ದೆ ಅಥವಾ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ತಂದಿಲ್ಲ. ಆದ್ದರಿಂದ ಈ ತೀರ್ಪಿನ ಹಿನ್ನೆಲೆಯಲ್ಲಿ, ಶಾಸಕಾಂಗ ಇಂತಹ ಶುಲ್ಕಗಳನ್ನು ವಿಧಿಸಲು ಸೂಕ್ತ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಬೇಕಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅದೇ ರೀತಿ ವೇಲ್‌ಫೇರ್ ಸೆಸ್ ಕಾಯ್ದೆಯಡಿ ಲೇಬರ್ ಸೆಸ್ ವಿಧಿಸಲು ಅಧಿಕಾರವಿದೆ, ಆದರೆ, ಸರ್ಕಾರ 2007ರ ಜ.18 ಹಾಗೂ ಫೆ.28ರಂದು ಎರಡು ಆದೇಶಗಳ ಮೂಲಕ ಲೇಬರ್ ಸೆಸ್ ವಿಧಿಸಿರುವ ರೀತಿ ಸರಿಯಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ:20ನೇ ಸ್ಥಾನಕ್ಕೇರಿದ ಹಾವೇರಿ ಜಿಲ್ಲೆ-ಸ್ನೇಹಾಗೆ 625 ಅಂಕ
ಅರ್ಜಿದಾರರು ನ್ಯಾಯಾಲಯ ಹೊರಡಿಸಿದ ಮಧ್ಯಂತರ ಆದೇಶದಂತೆ ಎಷ್ಟು ಹಣವನ್ನು ಪಾವತಿ ಮಾಡಿದ್ದರೂ ಅದನ್ನು ಹಿಂತಿರುಗಿಸಬೇಕು ಎಂದು ನ್ಯಾಯಪೀಠ ಬಿಬಿಎಂಪಿಗೆ ಆದೇಶ ನೀಡಿದೆ. ಅರ್ಜಿದಾರರು ಹಣ ಮರು ಪಾವತಿಗೆ ಮನವಿ ಸಲ್ಲಿಸಿದರೆ ಆ ಮನವಿ ಪರಿಶೀಲಿಸಿ 12 ವಾರಗಳಲ್ಲಿ ಅಗತ್ಯ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.