ಬೆಂಗಳೂರು: ಯ 2020- 21ನೇ ಸಾಲಿನ ಬಜೆಟ್ ಏ.20ರಂದು ಮಂಡನೆಯಾಗಲಿದ್ದು, ಆರ್ಥಿಕ ಸುಧಾರಣೆಗೆ ಒತ್ತು ನೀಡುವ ಸಾಧ್ಯತೆ ಇದೆ. ಈ ಹಿಂದೆ ಕಾಲರಾ ಸೋಂಕು ವ್ಯಾಪಕ ವಾಗಿದ್ದಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ ಮಾಡಲಾಗಿತ್ತು. ಕೋವಿಡ್ 19 ಹಿನ್ನೆಲೆ ಮತ್ತೂಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆಯಾಗಲಿದೆ.
ಕೋವಿಡ್ 19 ಸೋಂಕಿನಿಂದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಕುಸಿದಿದ್ದು, ಆದಾಯ ಸಂಗ್ರಹಿಸುವ ಉದ್ದೇಶದಿಂದ “ಬಿ’ ಖಾತೆ ಹೊಂದಿದವರಿಗೆ “ಎ’ ಖಾತೆ ನೀಡುವಂತಹ ಯೋಜನೆ ಪರಿಚಯಿಸುವ ಸಾಧ್ಯತೆ ಇದೆ. ಮುಂದಿನ ಪಾಲಿಕೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಅಕ್ರಮ- ಸಕ್ರಮ ಯೋಜನೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿರುವ ಮಧ್ಯೆ “ಬಿ’ ಖಾತಾಗಳನ್ನು “ಎ’ ಖಾತಾಗಳನ್ನಾಗಿ ಪರಿವರ್ತಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.
ನಗರದಲ್ಲಿ 1430 ರೆವಿನ್ಯೂ ಬಡಾವಣೆ ಗಳಿದ್ದು, ಇಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ರೆವಿನ್ಯೂ ನಿವೇಶನದಾರರಿಗೆ ಈ ತೀರ್ಮಾನ ವರದಾನವಾಗ ಲಿದೆ. ಈ ಬಾರಿ ದಿ. ಅನಂತಕುಮಾರ್ ಹೆಸರಿನಲ್ಲಿ 65 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ವಿತರಣೆ, 8 ವಲಯಗಳಲ್ಲಿ ಸುಷ್ಮಾಸ್ವರಾಜ್ ಹೆಸರಿನಲ್ಲಿ ಹೈಟೆಕ್ ಆ್ಯಂಬುಲೆನ್ಸ್ ಸೇವೆ ಒದಗಿಸುವುದು, ದೀನದಯಾಳ್ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಆರಂಭಿಸುವ ಚಿಂತನೆಗಳು ಬಜೆಟ್‌ನಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ನಗರದ 4 ದಿಕ್ಕುಗಳಲ್ಲಿ ಐಸಿಯು ಒಳಗೊಂಡ 4 ಬೀದಿನಾಯಿಗಳ ಕೆನಲ್ ಸ್ಥಾಪಿಸಲು, 4 ದಿಕ್ಕಿನಲ್ಲಿ ನಾಲ್ಕು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವ ಬಿಬಿಎಂಪಿ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಲು, ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು, ಕಸದ ಸಮಸ್ಯೆ ನಿವಾರಣೆಗೆ ಹಾಗೂ ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವರ್ಗದವರ ಒಂಟಿ ಮನೆ ನಿರ್ಮಾಣ, 75 ವರ್ಷ ಮೇಲ್ಪಟ್ಟ ಆಸಕ್ತ ಕಲಾವಿದರಿಗೆ ಸಹಾಯಧನ ನೀಡುವ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಉಳಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳ ಲಾಗಿದೆ ಎನ್ನಲಾಗಿದೆ.
ಬಜೆಟ್ ಮುಖ್ಯಾಂಶಗಳು :
- ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ.
- ಕೋವಿಡ್ 19 ತಡೆಗೆ ಪ್ರತಿ ವಾರ್ಡ್‌ಗೆ ಅನುದಾನ. ಇದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲು. ಬಿಬಿಎಂಪಿಯ ಶಾಲೆಗಳನ್ನು ದೆಹಲಿ ಅಥವಾ ಸ್ಮಾರ್ಟ್‌ಸಿಟಿ ಮಾದರಿಯಲ್ಲಿ ಅಭಿವೃದ್ಧಿ. ಪಾಲಿಕೆ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪರಿಚಯ, ಸ್ಮಾರ್ಟ್ ಕ್ಲಾಸ್‌ಗೆ ಒತ್ತು.
- ಪ್ರತಿ ವಲಯಕ್ಕೆ ಒಂದು ಆಂಬುಲೆನ್ಸ್ ಸೇವೆ. ಎಲ್ಲ ವಲಯದಲ್ಲೂ ಡಯಾಲಿಸಸ್ ಸೆಂಟರ್.
- ಪಾಲಿಕೆ ಆಸ್ತಿ ಗುರುತು ಹಾಗೂ ಕೆರೆಗಳ ರಕ್ಷಣೆಗೆ ಒತ್ತು.
ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ವಾಸ್ತವಿಕವಾಗಿರಲಿದ್ದು, ಈ ಬಾರಿ ಬಜೆಟ್ ಗಾತ್ರ 11 ಸಾವಿರ ಕೋಟಿ ರೂ. ಮೀರುವುದಿಲ್ಲ.
– ಎಲ್. ಶ್ರೀನಿವಾಸ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ