Advertisement

5 ಸಾವಿರ ಕೋಟಿ ರೂ. ಬಿಬಿಎಂಪಿ ಬಜೆಟ್‌?

11:47 AM Dec 13, 2022 | Team Udayavani |

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನು ಮೂರೂವರೆ ತಿಂಗಳು ಮಾತ್ರ ಉಳಿದಿವೆ. ಅಷ್ಟರೊಳಗೆ 2023-24ನೇ ಸಾಲಿನ ಬಜೆಟ್‌ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಸಿದ್ಧತೆ ನಡೆಸಿದ್ದು, ಈ ಬಾರಿ ಬಜೆಟ್‌ ಗಾತ್ರ 5,500 ಕೋಟಿ ರೂ.ಗೆ ನಿಗದಿ ಮಾಡಲು ಚರ್ಚಿಸಲಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳು, ನಿರ್ವಹಣಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ 2023-24ನೇ ಸಾಲಿನ ಬಜೆಟ್‌ ಸಿದ್ಧಪಡಿಸಲು ಸಿದ್ಧತೆ ನಡೆಸಲಾಗಿದೆ. ಸದ್ಯ ವಿವಿಧ ವಿಭಾಗಗಳಿಂದ ಮುಂದಿನ ವರ್ಷ ಕೈಗೊಳ್ಳಬೇಕಾದ ಯೋಜನೆಗಳು, ಅದಕ್ಕಾಗುವ ವೆಚ್ಚಗಳ ಕುರಿತಂತೆ ಮಾಹಿತಿ ನೀಡುವಂತೆ ಹಣಕಾಸು ವಿಭಾಗ ಕೋರಿದೆ.

ಅದರ ಜತೆಗೆ ಬಜೆಟ್‌ ಗಾತ್ರ ಎಷ್ಟಿರಬೇಕು ಎಂಬುದರ ಕುರಿತು ಹಣಕಾಸು ವಿಭಾಗದ ಅಧಿಕಾರಿಗಳು ಈಗಾಗಲೇ ಚರ್ಚೆ ನಡೆಸಿದ್ದು, ಸರ್ಕಾರಗಳ ಅನುದಾನ ಹೊರತುಪಡಿಸಿ ಬಿಬಿಎಂಪಿ ಆದಾಯಕ್ಕೆ ತಕ್ಕಂತೆ ಬಜೆಟ್‌ ಗಾತ್ರ ನಿಗದಿ ಮಾಡಲು ನಿರ್ಧರಿಸಲಾಗಿದೆ.ಅದರಂತೆ ಸದ್ಯ 5ರಿಂದ 5,500 ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆಗೆ ಚಿಂತನೆ ನಡೆಸಲಾಗಿದೆ.

5 ಸಾವಿರ ಕೋಟಿ ರೂ. ಆದಾಯ: ಬಿಬಿಎಂಪಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಅತಿ ದೊಡ್ಡ ಆದಾಯದ ಮೂಲ. ಪ್ರಸಕ್ತ ಸಾಲಿನಲ್ಲಿ 4 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗುವ ಕುರಿತು ಗುರಿ ಹೊಂದಲಾಗಿದೆ. ಆದರೆ, ಈವರೆಗೆ 2,600 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗಿದೆ. ಅದನ್ನು ಗಮನಿಸಿ 2023-24ನೇ ಸಾಲಿಗೂ 4 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿಕೊಳ್ಳಲಾಗುತ್ತಿದೆ. ಅದರ ಜತೆಗೆ ಮಾರುಕಟ್ಟೆ ಶುಲ್ಕ, ಅಭಿವೃದ್ಧಿ ಶುಲ್ಕ ಸೇರಿ ಇನ್ನಿತರ ಮೂಲಗಳಿಂದ 1 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆ ಹೊಂದಲಾಗಿದೆ.

ನಿರ್ವಹಣೆಗಷ್ಟೇ ಬಜೆಟ್‌ ಮೀಸಲು: ಬಿಬಿಎಂಪಿಯ ಆದಾಯ 5 ಸಾವಿರ ಕೋಟಿ ರೂ. ಮೀರದ ಕಾರಣ, ಹೆಚ್ಚುವರಿ ಆದಾಯದ ನಿರೀಕ್ಷೆಯನ್ನಿಟ್ಟುಕೊಳ್ಳದೇ ಬಜೆಟ್‌ ಗಾತ್ರ ನಿಗದಿ ಮಾಡಲು ನಿರ್ಧರಿಸಲಾಗಿದೆ. ಅದರ ಪ್ರಕಾರ ಆದಾಯಕ್ಕೆ ತಕ್ಕಂತೆ 5,500 ಕೋಟಿ ರೂ. ಮೊತ್ತದ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ದುರಸ್ತಿ, ಅಭಿವೃದ್ಧಿ, ವೇತನ ಪಾವತಿ ಸೇರಿ ಇನ್ನಿತರ ನಿರ್ವಹಣಾ ಕಾಮಗಾರಿ, ವೆಚ್ಚವನ್ನು ಮಾತ್ರ ಬಜೆಟ್‌ನಲ್ಲಿ ಸೇರಿಸಲಾಗುತ್ತದೆ.

Advertisement

ಹೊಸ ಯೋಜನೆಗಳಿಗೆ ಸರ್ಕಾರದ ಅನುದಾನ: ಬಿಬಿಎಂಪಿ ಹಣಕಾಸು ವಿಭಾಗ 2023-24ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದಿರುವ ಬಗ್ಗೆಯೂ ಚರ್ಚಿಸಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ಅನುದಾನ ನೀಡಿದರಷ್ಟೇ ಹೊಸ ಯೋಜನೆ ಘೋಷಿಸುವ ಕುರಿತು ನಿರ್ಧರಿಸಲಾಗಿದೆ. ಅಲ್ಲದೆ, 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗಾಗಿಯೇ 6 ಸಾವಿರ ಕೋಟಿ ರೂ. ಅಮೃತ ನಗರೋತ್ಥಾನ ಅನುದಾನ ನೀಡಿದೆ.

ಹೀಗಾಗಿ 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 500ರಿಂದ 1 ಸಾವಿರ ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಹೊಂದಲಾಗಿದೆ. ಅದರಲ್ಲಿ ಬೀದಿ ದೀಪ ನಿರ್ವಹಣೆಗೆ 80 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 150 ಕೋಟಿ ರೂ. ನೀಡಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ನೀಡುವ ಅನುದಾನ ನಿರ್ವಹಣಾ ವೆಚ್ಚಕ್ಕಷ್ಟೇ ಮೀಸಲಾಗುತ್ತದೆ. ಒಂದು ವೇಳೆ ಹೊಸ ಯೋಜನೆಗಳನ್ನು ಘೋಷಿಸಬೇಕೆಂದರೆ ಸರ್ಕಾರ ಹೆಚ್ಚುವರಿ ಅನುದಾನ ನೀಡಿದರಷ್ಟೇ ಮುಂದಿನ ಯೋಚನೆ ಮಾಡಲು ನಿರ್ಧರಿಸಲಾಗಿದೆ.

ಈ ಬಾರಿಯ ಬಜೆಟ್‌ ಸಿದ್ಧಪಡಿಸುವ ವೇಳೆ ಹಾಸಿಗೆ ಇದ್ದಷ್ಟು ಕಾಲು ಚಾಚಲು ನಿರ್ಧರಿಸಲಾಗಿದೆ. ಹೀಗಾಗಿ ಬಿಬಿಎಂಪಿ ಆದಾಯಕ್ಕೆ ತಕ್ಕಂತೆ ಬಜೆಟ್‌ ಗಾತ್ರ ನಿಗದಿ ಮಾಡಲಾಗುವುದು. ಸದ್ಯ ಬಿಬಿಎಂಪಿಗೆ 4ರಿಂದ 4,500 ಕೋಟಿ ರೂ. ಆದಾಯವಿದೆ. ಅದರಂತೆ 5ರಿಂದ 5,500 ಕೋಟಿ ರೂ. ಬಜೆಟ್‌ ಗಾತ್ರ ನಿಗದಿ ಮಾಡಲಾಗುವುದು. ಜತೆಗೆ ಹೊಸ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ನೀಡಿದರಷ್ಟೇ ಬಜೆಟ್‌ನಲ್ಲಿ ಘೋಷಿಸಲಾಗುವುದು. – ಜಯರಾಮ್‌ ರಾಯಪುರ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)

Advertisement

Udayavani is now on Telegram. Click here to join our channel and stay updated with the latest news.

Next