Advertisement

ನಾಳೆ ಬಿಬಿಎಂಪಿ ಬಜೆಟ್‌ ಮಂಡನೆ? 

02:09 PM Mar 01, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ಮಾಹಿತಿಯಂತೆ ಮಾ.2ರಂದು 9ರಿಂದ 10 ಸಾವಿರ ಕೋಟಿ ರೂ. ಗಾತ್ರದ 2023-24ನೇ ಸಾಲಿನ ಬಜೆಟ್‌ ಮಂಡಿಸಲಾಗುತ್ತಿದೆ.

Advertisement

ಬೆಂಗಳೂರಿನಲ್ಲಿ ಮೂಲಸೌಕರ್ಯ, ಹೊಸ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ 2023-24ನೇ ಸಾಲಿಗೆ 6 ಸಾವಿರ ಕೋಟಿ ರೂ. ಗೂ ಹೆಚ್ಚಿನ ಅನುದಾನ ಘೋಷಿಸಿದೆ. ಈ ಅನುದಾನದ ಜತೆಗೆ ಬಿಬಿಎಂಪಿಯ ಆದಾಯದ ಮೂಲಗಳಿಂದ 5 ಸಾವಿರ ಕೋಟಿ ರೂ. ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯನ್ನಿಟ್ಟುಕೊಂಡು ಬಿಬಿಎಂಪಿ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ. ಮಾಹಿತಿಯಂತೆ 2023-24ನೇ ಸಾಲಿಗೆ ಬಿಬಿಎಂಪಿ 9 ರಿಂದ 10 ಸಾವಿರ ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಲಿದೆ. ಬಿಬಿಎಂಪಿ ಹಣಕಾಸು ವಿಭಾಗದಿಂದ ಈಗಾಗಲೇ ಹಲವು ಸಭೆ ನಡೆಸಿ ಬಜೆಟ್‌ ಸಿದ್ಧಪಡಿಸಲಾಗಿದ್ದು, ಬಜೆಟ್‌ನ ಕರಡು ಪ್ರತಿಗೆ ನಗರಾಭಿವೃದ್ಧಿ ಇಲಾಖೆಯಿಂದಲೂ ಅನುಮೋದನೆ ದೊರೆತಿದೆ. ಬುಧವಾರ ಬಜೆಟ್‌ ಪುಸ್ತಕವನ್ನು ಮುದ್ರಣಕ್ಕೆ ನೀಡಲಾಗುತ್ತಿದ್ದು, ಗುರುವಾರ ಬೆಳಗ್ಗೆ ಪುರಭವನ ದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಬಜೆಟ್‌ ಮಂಡಿಸಲಿದ್ದಾರೆ.

ತಗ್ಗಲಿಗೆ ಬಜೆಟ್‌ ಗಾತ್ರ?: 2022-23ನೇ ಸಾಲಿನಲ್ಲಿ ಬಿಬಿಎಂಪಿ 10,943.54 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಲಾಗಿತ್ತು. ಅದರಲ್ಲಿ ರಾಜ್ಯ ಸರ್ಕಾರ ಅಮೃತ ನಗರೋತ್ಥಾನ ಅಡಿಯಲ್ಲಿ ಘೋಷಿಸಿದ 6,500 ಕೋಟಿ ರೂ. ಸೇರಿ ಇನ್ನಿತರ ಅನುದಾನಗಳು ಹಾಗೂ ಬಿಬಿಎಂಪಿ ಆಸ್ತಿ ತೆರಿಗೆಯಿಂದ 4,200 ಕೋಟಿ ರೂ. ಸಂಗ್ರಹದ ಗುರಿಯನ್ನು ಆದಾಯದ ಮೂಲವನ್ನಾಗಿಸಿಕೊಳ್ಳಲಾಗಿತ್ತು. 2023-24ನೇ ಸಾಲಿಗೆ ಬಿಬಿಎಂಪಿ 5 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಗುರಿಯನ್ನಿಟ್ಟುಕೊಳ್ಳುವ ನಿರೀಕ್ಷೆಯಿದೆ. ಅದರ ಜತೆಗೆ ರಾಜ್ಯ ಸರ್ಕಾರದಿಂದ ಘೋಷಿಸಲಾಗಿರುವ 6 ಸಾವಿರ ಕೋಟಿ ರೂ. ಅನುದಾನವನ್ನು ಸೇರಿಸಿ ಬಜೆಟ್‌ ಗಾತ್ರ ನಿಗದಿಪಡಿಸಲಾಗಿದೆ. 2022- 23ನೇ ಸಾಲಿನ ಬಜೆಟ್‌ ಗಾತ್ರದ ಆಸುಪಾಸಿನಲ್ಲಿಯೇ 2023-24ನೇ ಸಾಲಿನ ಆಯವ್ಯಯ ನಿಗದಿ ಮಾಡಲಾಗುತ್ತಿದೆ.

ಇಂದಿರಾ ಕ್ಯಾಂಟೀನ್‌ಗೆ ಅನುದಾನ: 2017ರಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ಗೆ ಕಳೆದ ಕೆಲ ವರ್ಷಗಳಿಂದ ಅನುದಾನದ ಕೊರತೆ ಉಂಟಾಗುವಂತಾಗಿದೆ. ಹೀಗಾಗಿ ಗುತ್ತಿಗೆದಾರರು ಕ್ಯಾಂಟೀನ್‌ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಈ ಬಾರಿ ಬಿಬಿಎಂಪಿ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಗಾಗಿ 50 ಕೋಟಿ ರೂ. ಮೀಸಲಿಡಲಿದೆ. ಅದರ ಜತೆಗೆ ರಾಜ್ಯದ ಗ್ರಾಮಾಂತರ ಪ್ರದೇಶಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಯುವತಿ ಹಾಗೂ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್‌ ವ್ಯವಸ್ಥೆ ಹಾಗೂ ನಿರಾಶ್ರಿತ ವೃದ್ಧರಿಗೆ ಶ್ರವಣ ಕುಮಾರ ಹೆಸರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಘೋಷಿಸುವ ಸಾಧ್ಯತೆ ಇದೆ.

ಚುನಾವಣಾ ಬಜೆಟ್‌ : ಇನ್ನು ಎರಡ್ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಾದ ನಂತರ ವರ್ಷಾಂತ್ಯದಲ್ಲಿ ಬಿಬಿಎಂಪಿಗೂ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಚುನಾವ ಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಸೂಚನೆ ಹಾಗೂ ಮಾರ್ಗದರ್ಶನದಂತೆ ಬಿಬಿಎಂಪಿ ಬಜೆಟ್‌ ಸಿದ್ಧಪಡಿಸಲಾಗಿದೆ. ಅದರಲ್ಲೂ ನಗರದಲ್ಲಿ ಮೂಲಸೌಕರ್ಯ ಒದಗಿಸುವುದು, ಅಶಕ್ತರಿಗೆ ನೆರವಾಗುವಂತಹ ಯೋಜನೆಗಳನ್ನು ಘೋಷಿಸುವತ್ತ ಗಮನ ಹರಿಸಲಾಗುತ್ತಿದೆ.

Advertisement

ಕಳೆದ ಬಾರಿ ತಡರಾತ್ರಿ ಬಜೆಟ್‌ ಮಂಡನೆ : ಬಿಬಿಎಂಪಿ ಕಾಯ್ದೆ ಪ್ರಕಾರ ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಮಂಡಿಸಬೇಕು. ಅದಾದ 3 ವಾರಗಳಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು, ಏಪ್ರಿಲ್‌ 1ರಿಂದ ಬಜೆಟ್‌ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಆದರೆ, ಕಳೆದ ವರ್ಷ ಬಜೆಟ್‌ ರೂಪಿಸುವ ವಿಚಾರದಲ್ಲಿ ಅಧಿಕಾರಿಗಳ ನುಡುವೆ ಸಮನ್ವಯದ ಕೊರತೆ ಉಂಟಾಗಿ ಆರ್ಥಿಕ ವರ್ಷದ ಕೊನೆಯ ದಿನವಾದ ಮಾ. 31ರ ತಡರಾತ್ರಿ ವಿಕಾಸಸೌಧದಲ್ಲಿ ಬಜೆಟ್‌ ಮಂಡಿಸಲಾಗಿತ್ತು.

3ನೇ ಬಾರಿ ಅಧಿಕಾರಿಗಳಿಂದ ಮಂಡನೆ : ಬಿಬಿಎಂಪಿ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಈವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಚುನಾಯಿತಿ ಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳೇ ಬಜೆಟ್‌ ಮಂಡಿಸಬೇಕಿದೆ. 2021-22 ಮತ್ತು 2022-23ನೇ ಸಾಲಿನ ಬಜೆಟ್‌ನ್ನು ಅಧಿಕಾರಿಗಳು ಮಂಡಿಸಿದ್ದರು. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ಮಂಡಿಸಲಿದ್ದಾರೆ. ಬಿಎಂಪಿಯಿಂದ ಬಿಬಿಎಂಪಿಯಾಗಿ ಮೇಲ್ದರ್ಜೆಗೇರಿದ ನಂತರ ಅಧಿಕಾರಿಗಳು ಮಂಡಿಸಿರುವ ಮೂರನೇ ಬಜೆಟ್‌ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next