Advertisement

10 ದಿನಗಳಲ್ಲಿ ಪಾಲಿಕೆ ಬಜೆಟ್‌ ಸಾಧ್ಯತೆ

01:00 PM Feb 20, 2023 | Team Udayavani |

ಬೆಂಗಳೂರು: ರಾಜ್ಯ ಬಜೆಟ್‌ ಬೆನ್ನಲ್ಲೇ ಈಗ ಬಿಬಿಎಂಪಿ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದೆ. ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 9,698 ಕೋಟಿ ರೂ. ಅನುದಾನ ಘೋಷಿಸಿದೆ. ಅದರಲ್ಲಿ 6 ಸಾವಿರ ಕೋಟಿ ರೂ.ಗೂ ಹೆಚ್ಚಿನದ್ದು ಬಿಬಿಎಂಪಿ ಪಾಲಾಗಿದ್ದು, ಅದರ ಆಧಾರದಲ್ಲಿ ಬಜೆಟ್‌ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಮುಂದಾಗಿದೆ.

Advertisement

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವುದು ಸೇರಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಬಜೆಟ್‌ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಸಿದ್ಧತೆ ನಡೆಸಿದೆ.

ಈಗಾಗಲೇ ವಿಭಾಗವಾರು ಬೇಡಿಕೆ ಪಡೆಯಲಾಗಿದೆ. ಅದರ ಜತೆಗೆ ಕಳೆದ ಶುಕ್ರವಾರ ಸರ್ಕಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ 9,698 ಕೋಟಿ ರೂ. ಅನುದಾನ ಘೋಷಿಸಿದೆ. ಅದರಲ್ಲಿ ಬಿಬಿಎಂಪಿ ಸುಪರ್ದಿಯಲ್ಲಿಯೇ 6 ಸಾವಿರ ಕೋಟಿ ರೂ.ಗೂ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗುತ್ತದೆ. ಹೀಗಾಗಿ ಅಷ್ಟು ಮೊತ್ತ ಹಾಗೂ ಆ ಯೋಜನೆಗಳು ಬಿಬಿಎಂಪಿ ಬಜೆಟ್‌ನಲ್ಲೂ ಸೇರ್ಪಡೆಯಾಗಲಿದೆ.

ಸದ್ಯ ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ಬಿಬಿಎಂಪಿ ಬಜೆಟ್‌ನಲ್ಲಿ ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಅಂದರೆ ಫೆ. 24ರ ಒಳಗೆ ಪಾಲಿಕೆಗೆ ರಾಜ್ಯ ಬಜೆಟ್‌ ನ ಯೋಜನೆಗಳನ್ನು ಸೇರಿಸಿ ನಗರಾಭಿವೃದ್ಧಿಗೆ ಬಜೆಟ್‌ ಪ್ರತಿ ಸಲ್ಲಿಸಲಾಗುತ್ತದೆ. ಅಲ್ಲಿಂದ ಯಾವುದಾದರೂ ಬದಲಾವಣೆಗಳಿದ್ದರೆ, ಅದನ್ನು ಸರಿಪಡಿಸುವ ಕಾರ್ಯವನ್ನು ಬಿಬಿಎಂಪಿ ಹಣಕಾಸು ವಿಭಾಗ ಮಾಡಲಿದೆ. 9 ಸಾವಿರ ಕೋಟಿ ರೂ. ಬಜೆಟ್‌? 2022-23ನೇ ಸಾಲಿನ ಅಮೃತ ನಗರೋತ್ಥಾನ ಅನುದಾನದಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಸಾವಿರ ಕೋಟಿ ರೂ.ಗೂ ಹೆಚ್ಚಿನ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ಬಾಕಿ ಬಿಲ್‌ 3 ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ಒಟ್ಟಾರೆ ಬಿಬಿಎಂಪಿಯ ಹೊಣೆಗಾರಿಕೆ 10 ಸಾವಿರ ಕೋಟಿ ರೂ. ದಾಟಲಿದೆ.

ಅದರಲ್ಲಿ ಅಮೃತ ನಗರೋತ್ಥಾನ ಅನುದಾನದ ಮುಂದುವರಿದ ಕಾಮಗಾರಿಗಳು, 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ ಅನುದಾನ, ಯೋಜನೆಗಳನ್ನು ಸೇರಿಸಿ ಬಿಬಿಎಂಪಿ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ. ಇದೆಲ್ಲವನ್ನೂ ಸೇರಿಸಿದರೆ 2023-24ನೇ ಸಾಲಿಗೆ ಬಿಬಿಎಂಪಿ 9 ಸಾವಿರ ಕೋಟಿಯಿಂದ 10 ಕೋಟಿ ರೂ. ಒಳಗಿನ ಮೊತ್ತದ ಆಯವ್ಯಯ ಮಂಡಿಸಲಿದೆ.

Advertisement

ಬಿಬಿಎಂಪಿಗೆ ಆಸ್ತಿ ತೆರಿಗೆ ಮಾತ್ರ ಅತಿದೊಡ್ಡ ಆದಾಯದ ಮೂಲ. ಪ್ರಸಕ್ತ ಸಾಲಿನಲ್ಲಿ (2022-23) 10943.54 ಕೋಟಿ ರೂ. ಬಜೆಟ್‌ ಮಂಡಿಸಿ, 4,200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟ. ಹೀಗಾಗಿ ಪ್ರತಿಯೊಂದಕ್ಕೂ ರಾಜ್ಯ ಸರ್ಕಾರ ನೀಡುವ ಅನುದಾನ ಅವಲಂಬಿಸಬೇಕಾದ ಪರಿಸ್ಥಿತಿ ಬಿಬಿಎಂಪಿಗಿದೆ. ಹೀಗಾಗಿ ಬಜೆಟ್‌ ಅನ್ನು ಕೂಡ ರಾಜ್ಯ ಸರ್ಕಾರದ ಅನುದಾನದ ಆಧಾರದಲ್ಲಿಯೇ ಸಿದ್ಧಪಡಿಸಲಾಗುತ್ತಿದೆ.

ಫೆಬ್ರವರಿ ಅಂತ್ಯ, ಮಾರ್ಚ್‌ ಆರಂಭಕ್ಕೆ ಬಜೆಟ್‌ : ರಾಜ್ಯ ಸರ್ಕಾರ ಘೋಷಿಸಿರುವ ಅನುದಾನದಂತೆ ಬಿಬಿಎಂಪಿ ಬಜೆಟ್‌ ಸಿದ್ಧಪಡಿಸಲಾಗುತ್ತಿದೆ. ಅದಕ್ಕೆ ನಗರಾಭಿವೃದ್ಧಿಯಿಂದ ಒಪ್ಪಿಗೆ ಸಿಗಬೇಕಿದೆ. ಜತೆಗೆ ಬಜೆಟ್‌ ಪುಸ್ತಕ ಮುದ್ರಣ ಸೇರಿ ಇನ್ನಿತರ ತಯಾರಿ ಮಾಡಬೇಕಿದೆ. ಹೀಗಾಗಿ ಬಜೆಟ್‌ ಸಿದ್ಧಪಡಿಸಲು ಕನಿಷ್ಠ 7ರಿಂದ 8 ದಿನಗಳು ಬೇಕಾಗಲಿದೆ. ಅದಾದ ನಂತರವಷ್ಟೇ ಬಜೆಟ್‌ ಮಂಡಿಸಲು ಸಾಧ್ಯವಾಗಲಿದೆ. ಮೂಲಗಳ ಪ್ರಕಾರ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ಬಾರ ಬಿಬಿಎಂಪಿ ಬಜೆಟ್‌ ಮಂಡನೆಯಾಗುವ ಸಾಧ್ಯತೆಗಳಿವೆ.

3ನೇ ಬಾರಿ ಅಧಿಕಾರಿಗಳ ಮಂಡನೆ : ಬಿಬಿಎಂಪಿ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಈವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಚುನಾಯಿತಿ ಪ್ರತಿನಿಧಿಗಳಿಲ್ಲದಂತಾಗಿದ್ದು, ಅಧಿಕಾರಿಗಳೇ ಬಜೆಟ್‌ ಮಂಡಿಸಬೇಕಿದೆ. 2015ರಲ್ಲಿ ಬಿಬಿಎಂಪಿ ಅವಧಿ ಮುಕ್ತಾಯಗೊಳ್ಳುವುದಕ್ಕೆ ಮುಂಚೆಯೇ ಜನಪ್ರತಿನಿಧಿಗಳು ಬಜೆಟ್‌ ಮಂಡಿಸಿದ್ದರು. ಅದಾದ ನಂತರ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್‌ ಬಜೆಟ್‌ ಪರಿಷ್ಕರಿಸಿದ್ದು ಬಿಟ್ಟರೆ ಮರುಮಂಡನೆ ಮಾಡಿರಲಿಲ್ಲ. ಆದರೆ, 2020ರಿಂದ ಈಚೆಗೆ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳೇ ಬಜೆಟ್‌ ಮಂಡಿಸುತ್ತಿದ್ದಾರೆ. 2021-22 ಮತ್ತು 2022-23ನೇ ಸಾಲಿನ ಬಜೆಟ್‌ ಅನ್ನು ಅಧಿಕಾರಿಗಳು ಮಂಡಿಸಿದ್ದರು. ಅದರಲ್ಲೂ 2022-23ನೇ ಸಾಲಿನ ಬಜೆಟ್‌ ಅನ್ನು 2022ರ ಮಾರ್ಚ್‌ 31ರಂದು ರಾತ್ರಿ 11 ಗಂಟೆಗೆ ಮಂಡಿಸಲಾಗಿತ್ತು. ಇದೀಗ ಬಿಬಿಎಂಪಿ ರಚನೆ ನಂತರ ಮೂರನೇ ಬಾರಿಗೆ ಅಧಿಕಾರಿಗಳೇ ಬಜೆಟ್‌ ಮಂಡಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next