Advertisement

ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ, ಅಧಿಕಾರಿಗಳ ಆಡಳಿತ

05:50 PM Dec 04, 2021 | Team Udayavani |

ಬೆಂಗಳೂರು: ವಿಕೇಂದ್ರೀಕರಣ ವ್ಯವಸ್ಥೆಗಾಗಿ ರಾಜ್ಯದಲ್ಲಿ ಮೊದಲು ಕಾರ್ಪೊರೇಷನ್‌ ಅಸ್ತಿತ್ವಕ್ಕೆ ಬಂದಿದ್ದು ರಾಜಧಾನಿ ಬೆಂಗಳೂರಿನಲ್ಲಿ. ಆದರೆ, ಈ ಕಾರ್ಪೊರೇಷನ್‌ ಅನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದು ಹೆಚ್ಚು!

Advertisement

1950ರಲ್ಲಿ ಬೆಂಗಳೂರು ಪಾಲಿಕೆ ಅಸ್ತಿತ್ವಕ್ಕೆ ಬಂದಿತ್ತು, ಅಲ್ಲಿಂದ ಇದುವರೆಗೆ ಅಂದರೆ ಏಳು ದಶಕಗಳಲ್ಲಿ ಹೆಚ್ಚು-ಕಡಿಮೆ ಎರಡು ದಶಕಗಳ ಕಾಲ ಅಧಿಕಾರಿಗಳೇ ಪಾಲಿಕೆಯನ್ನು ಆಳಿದ್ದಾರೆ. ಪ್ರತಿ ಬಾರಿ ಜನಪ್ರತಿನಿಧಿಗಳ ಅವಧಿ ಮುಗಿಯುತ್ತಿದ್ದಂತೆ ಇಲ್ಲಿ ಅಧಿಕಾರಿಗಳ ಅವಧಿ ಶುರುವಾಗುತ್ತದೆ. ಈ ಮಧ್ಯೆ ಯಾರಾದರೂ ಕೋರ್ಟ್‌ ಮೆಟ್ಟಿಲೇರಿದಾಗ, ಮತ್ತೆ ಜನಪ್ರತಿನಿಧಿಗಳ
ಆಡಳಿತ ಅಸ್ತಿತ್ವಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಇದೊಂದು ಸಂಪ್ರದಾಯವಾಗಿ ಬೆಳೆದುಬರುತ್ತಿದೆ. ಅತಿ ಹೆಚ್ಚು ಅವಧಿ ಆಡಳಿತಾಧಿಕಾರಿಗಳು ಆಡಳಿತ ನಡೆಸಿದ್ದು ಎರಡು ಸಂದರ್ಭಗಳಲ್ಲಿ ಒಂದು 1975ರಿಂದ 1983 ಮತ್ತೂಂದು 2006ರಿಂದ 2010. ಈ ಎರಡೂ ಅವಧಿ ಸೇರಿ 10 ವರ್ಷ ಆಗುತ್ತದೆ. ಉಳಿದಂತೆ 60ರ ದಶಕದಿಂದಲೂ ಒಂದಲ್ಲ ಒಂದು
ಕಾರಣಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ನಡೆದಿದೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಕೊರತೆ ಜತೆಗೆ ಶಾಸಕರ ಹಿತಾಸಕ್ತಿಯೂ ಕಾರಣವಾಗಿದೆ. ಇದೆಲ್ಲದರ ಪರಿಣಾಮವನ್ನು ನಗರದ ಜನ ಅನುಭವಿಸುವಂತಾಗಿದೆ.

1975-1983ರವರೆಗೆ ಒಟ್ಟಾರೆ 13 ಜನ ಐಎಎಸ್‌ ಅಧಿಕಾರಿಗಳು ಪಾಲಿಕೆಗೆ ಆಡಳಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ 3 ಮುಖ್ಯಮಂತ್ರಿಗಳೂ ಬಂದು ಹೋಗಿದ್ದಾರೆ.
(1972-1978ರಲ್ಲಿ ಎರಡು ಬಾರಿ ದೇವರಾಜ ಅರಸು ಹಾಗೂ 1980-1983 ಆರ್‌. ಗುಂಡೂ ರಾವ್‌). ಆದರೆ, ಸ್ಥಳೀಯ ಸಂಸ್ಥೆಗೆ ಚುನಾವಣೆ ಮಾತ್ರ ನಡೆಯಲಿಲ್ಲ. ಇನ್ನು 2006ರಲ್ಲಿ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯು ದುಪ್ಪಟ್ಟಾಗಿ, ಬಿಬಿಎಂಪಿಯಾಗಿ ಪರಿವರ್ತನೆ ಯಾಯಿತು. ಇದಾದ ನಂತರ ನಾಲ್ಕು ವರ್ಷ ಅಂದರೆ 2006ರಿಂದ 2010 ರವರೆಗೆ ಕೂಡ
ಮೂವರು ಮುಖ್ಯ ಮಂತ್ರಿಗಳು (ಒಮ್ಮೆ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎರಡು ಬಾರಿ ಬಿ.ಎಸ್‌. ಯಡಿಯೂರಪ್ಪ) ಹಾ ಗೂ 2 ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಟ್ಟಿತು. ಈ ಗದ್ದಲದ ನಡುವೆ ಬಿಬಿಎಂಪಿ ಚುನಾವಣೆ ಮರೆತುಹೋಯಿತು.

“ಈ ನಡುವೆ 1992ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿದ ಆರು ತಿಂಗಳಲ್ಲಿ ಕಡ್ಡಾಯವಾಗಿ ಚುನಾವಣೆ ನಡೆಸಬೇಕು ಎಂದು ಹೇಳಲಾಯಿತು. ಆದರೆ, ಇದು ರಾಜ್ಯದಲ್ಲಿ ಜಾರಿಗೆ ಬಂದಿದ್ದು 1995-96ರಲ್ಲಿ. ಚುನಾವಣೆ ನಡೆಸುವ ಸಂಬಂಧ ಆಗಲೂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ
ಅಂದಿನ ಸರ್ಕಾರ ಚುನಾವಣೆ ಘೋಷಿಸಿತು. ಇದಾದ ಮೇಲೆ ಸಂವಿಧಾನಕ್ಕೆ ತಿದ್ದುಪಡಿ ನಂತರವೂ 2006ರಲ್ಲಿ ಉದಾಸೀನ ಪುನರಾವರ್ತನೆ ಆಯಿತು. ಆಗ ನಾನು ಕೋರ್ಟ್‌ ಮೊರೆಹೋದೆ. 2010ರಲ್ಲಿ ಅಂತಿಮವಾಗಿ ಚುನಾವಣೆ ನಡೆಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ಚುನಾವಣೆ ನಡೆಸದಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ’ ಎಂದು ವಿಧಾನ ಪರಿಷತ್‌ಸದಸ್ಯ ಪಿ.ಆರ್‌. ರಮೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.

ಪರಿಣಾಮಗಳೇನು?
ನಿಯಮಿತವಾಗಿ ಚುನಾವಣೆ ನಡೆಸದೆ, ಆಡಳಿತಾಧಿಕಾರಿಗಳಿಂದ ಪಾಲಿಕೆ ಆಡಳಿತ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಉದಾಹರಣೆಗೆ ವಾರ್ಡ್‌ ಸಮಿತಿಗಳ ಸಭೆ ನಡೆಯುವುದಿಲ್ಲ. ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆದರೂ ಅದರಲ್ಲಿ ಜನರ ಸಹಭಾಗಿತ್ವ ಪರಿಣಾಮಕಾರಿ ಆಗಿರುವುದಿಲ್ಲ. ಹಾಗೆ ನೋಡಿದರೆ, ಚುನಾಯಿತ ಪ್ರತಿನಿಧಿಗಳಿದ್ದಾಗ ಮಾತ್ರ ವಾರ್ಡ್‌ ಸಮಿತಿ ಸಭೆ ನಡೆಸಬೇಕು ಎಂಬ ನಿಯಮ ಇದೆ. ಅದೇ ರೀತಿ, ಶಾಸಕರ ಹಸ್ತಕ್ಷೇಪ ಹೆಚ್ಚಾಗಿ, ಸ್ಥಳೀಯ ನಾಯಕತ್ವ ನಶಿಸಲು ಇದು ಕಾರಣವಾಗುತ್ತದೆ ಎಂದೂ ಪಿ.ಆರ್‌.ರಮೇಶ್‌ ಸ್ಪಷ್ಟಪಡಿಸುತ್ತಾರೆ.

Advertisement

ಈಗ ಅಗತ್ಯತೆ ಹೆಚ್ಚಿತ್ತು: ವಾರ್ಡ್‌ನ ಯಾವುದಾದರೂ ಏರಿಯಾದಲ್ಲಿ ಕರೆಂಟ್‌ ಹೋದರೂ ಮೊದಲು ಅಲ್ಲಿನ ನಿವಾಸಿಗಳಿಂದ ಫೋನ್‌ ಕರೆ ಬರುವುದು ಸ್ಥಳೀಯ ಕಾರ್ಪೊರೇಟರ್‌ಗೆ. ಅಷ್ಟರಮಟ್ಟಿಗೆ ಪಾಲಿಕೆ ಸದಸ್ಯರು ಮತ್ತು ಜನರ ನಡುವೆ ಸಂಪರ್ಕ  ಬೆಸೆದುಕೊಂಡಿರುತ್ತದೆ. ಅದ ರಲ್ಲೂ ಪ್ರಸ್ತುತ ಸಂದರ್ಭದಲ್ಲಿ ಸದಸ್ಯರ ಅಗತ್ಯತೆ ಹೆಚ್ಚಿತ್ತು. ಉದಾಹರಣೆಗೆ ನಿರಂತರ ಸೃಷ್ಟಿಸಿದ ಅವಾಂ ತರ, ರಸ್ತೆಗುಂಡಿಗಳನ್ನು ಮುಚ್ಚಿಸುವುದು, ಕೊರೊನಾ ಲಸಿಕೆ ಹಾಕಿಸುವುದು ಮತ್ತಿತರ ಕಾರ್ಯಗಳು ಸುಲಭ ವಾಗಿ ನಡೆಯುತ್ತಿದ್ದವು. ಇವು ಸಣ್ಣಪುಟ್ಟ ಆಗಿದ್ದರೂ, ಜನರಿಗೆ ಇವುಗಳ ಅವಶ್ಯಕತೆ ಹೆಚ್ಚು’ ಎಂದು ಮಾಜಿ ಉಪ ಮೇಯರ್‌ ಎಸ್‌. ಹರೀಶ್‌ ತಿಳಿಸುತ್ತಾರೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next