Advertisement

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

12:53 PM Dec 06, 2021 | Team Udayavani |

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾದದ್ದು.ಹೊಸ ಕಾನೂನುಗಳು, ಆದೇಶಗಳನ್ನು ಜಾರಿ ಮಾಡಲು ಅಧಿಕಾರಿಗಳು ಎಷ್ಟು ಮುಖ್ಯವೋ ಅದನ್ನು ಜನರ ಬಳಿಗೆ ಕೊಂಡೊಯ್ಯಲು ಮತ್ತು ಅರ್ಹ ಫ‌ಲಾನುಭವಿಗಳಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಮಹತ್ತರವಾಗಿದೆ.

Advertisement

ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರ ಮತ್ತು ಜನರ ಸೇತುವೆಯಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಆಡಳಿತ ವ್ಯವಸ್ಥೆಗೆ ವೇಗ ನೀಡಲು ಸ್ಥಾಯಿ ಸಮಿತಿಗಳು ಕಾರ್ಯ ನಿರ್ವಹಿಸುತ್ತವೆ. ಅದರಲ್ಲಿ ಸಾರ್ವಜನಿಕರ ತೆರಿಗೆಹಣ ಪೋಲಾಗದಂತೆ ತಡೆಗಟ್ಟುವುದು, ಸಾರ್ವಜನಿಕರ ಆರೋಗ್ಯ, ನಗರಾಭಿವೃದ್ಧಿ, ಕಾಮಗಾರಿಗಳು, ಶಿಕ್ಷಣ, ಸಾಮಾಜಿಕ ನ್ಯಾಯ, ಮಾರುಕಟ್ಟೆವ್ಯವಸ್ಥೆ ಮತ್ತು ಆಡಳಿತ ಸುಧಾರಣೆ ಸೇರಿದಂತೆವಿವಿಧ ಹಂತಗಳಲ್ಲಿ ಪ್ರತಿನಿಧಿಗಳು ಇದ್ದಾಗ ಮಾತ್ರ ಆಡಳಿತದ ರಥ ಸುಸೂತ್ರವಾಗಿ ಸಾಗಲಿದೆ ಎನ್ನುತ್ತಾರೆ ಮಾಜಿ ಜನಪ್ರತಿನಿಧಿಗಳು.

ಅಧಿಕಾರಿಗಳ ಆಡಳಿತದಲ್ಲಿ ಹೆಚ್ಚಾದ ಭ್ರಷ್ಟಾಚಾರ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಮುಗಿದು 15 ತಿಂಗಳಾಗಿದೆ. ಈಗ ಪಾಲಿಕೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳು ತಾವು ಹೇಳಿದ್ದೇ ವೇದ ವಾಕ್ಯವಾ ಗಿದೆ.ನಗರದ ರಸ್ತೆ ಕಾಮಗಾರಿಗಳು, ಸೌಲಭ್ಯ ಕಲ್ಪಿಸುವಲ್ಲಿ ವಿಫ‌ಲರಾಗಿದ್ದು, ಜನರಿಗೆ ಅಧಿಕಾರಿಗಳುಸಿಗದಂತಾಗಿದ್ದಾರೆ.

ಶಾಸಕರಿಗೆ ಬೇಕಿಲ್ಲ ಚುನಾವಣೆ ?: ಬೆಂಗಳೂರಿನ ಎಲ್ಲಾ ಪಕ್ಷದ ಶಾಸಕರು ಈಗ ಪಕ್ಷಭೇದ ಮರೆತು ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಕಾರ್ಪೋರೇಟರ್‌ಗಳು ಇಲ್ಲದಿರುವುದರಿಂದ ಜನರು ತಮ್ಮ ಮನೆ ಬಳಿಬರಬೇಕು ಎಂಬುದು ಅವರ ಆಶಯವಾಗಿದೆ. ಹೀಗಾಗಿ, ನಗರದ 28 ಶಾಸಕರ ಪೈಕಿಯಾರೊಬ್ಬರಿಗೂ ಚುನಾವಣೆ ಬೇಡವಾಗಿದೆ. ಈಕಾರಣದಿಂದಲೇ ಚುನಾವಣೆಯನ್ನು ಮುಂದೂ ಡುತ್ತಲೇ ಇದ್ದಾರೆ ಎಂಬುದು ಚುನಾವಣಾ ಆಕಾಂಕ್ಷಿಗಳ ಆರೋಪವಾಗಿದೆ. ಬಿಬಿಎಂಪಿ ಎಂದರೆ ನೇರವಾಗಿ ಮೂಲ ಸೌಕರ್ಯ ಸಾರ್ವಜನಿಕರಿಗೆ ಕೊಡುವ ಸಂಸ್ಥೆಯಾಗಿದೆ. ಪ್ರಜಾಪ್ರತಿನಿಧಿಗಳು ಇಲ್ಲದೆ, ಯಾವುದೇ ಕೆಲಸಗಳು ನಡೆಯುವುದಿಲ್ಲ. ಅಧಿಕಾರಿಗಳು ಸಮಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೆ. ನಾಗರಿಕರಿಗೆ ಸೌಲಭ್ಯ ಕಲ್ಪಿಸು ವಲ್ಲಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಸ್ಥಳೀಯ ಸಮಸ್ಯೆ

ಅರ್ಥ ಮಾಡಿಕೊಂಡು ವಾರ್ಡ್‌ ಮಟ್ಟದಲ್ಲಿಯೇ ಬಗೆಹರಿಸಿದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂಬ ಆರೋಪ ಕೇಳಿ ಬಂದಿದೆ.

Advertisement

ಬಿಬಿಎಂಪಿಗೆ 25 ಸಾವಿರ ಕೋಟಿ ಹೊರೆ: ಪಾಲಿಕೆ ಆಡಳಿತದಲ್ಲಿ ವರ್ಷದ ಹಿಂದೆ ಸುಮಾರು 15ರಿಂದ 16 ಸಾವಿರ ಇದ್ದ ಆರ್ಥಿಕ ಹೊರೆ, ಈಗ 25 ಸಾವಿರ ಕೋಟಿಗೆ ರೂ.ಗಳಿಗೆ ಏರಿಕೆಯಾಗಿದೆ. ಆರ್ಥಿಕ ಶಿಸ್ತುಕಾಪಾಡಿಕೊಳ್ಳದಿರುವುದರಿಂದ ಮತ್ತು ಅಧಿಕಾರಿಗಳು ಮನ ಬಂದಂತೆ ಬಿಲ್‌ಗ‌ಳನ್ನು ಹಾಕುವುದನ್ನು ಯಾರೊಬ್ಬರು ಕೇಳಲು ಅಧಿಕಾರ ಇಲ್ಲದಿರುವುದರಿಂದ ನಗರದ ಜನರ ತೆರಿಗೆ ಹಣ ಪೋಲಾಗುತ್ತಿದೆ ಎನ್ನುತ್ತಾರೆ ಪಾಲಿಕೆ ಮಾಜಿ ಸದಸ್ಯ ಎಂ. ಶಿವರಾಜು.

ಕೊರೊನಾ ವೇಳೆ ಪಾಲಿಕೆ ಸದಸ್ಯರು ಇರಬೇಕಿತ್ತು:

ಕೊರೊನಾ ಎರಡನೇ ಅಲೆ ವೇಳೆ ಬೆಂಗಳೂರು ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ. ಸ್ಮಶಾನಗಳಲ್ಲಿ ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೂ ಸಾಲುಗಟ್ಟಿ ನಿಂತಿದ್ದ ದೃಶ್ಯಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಪಾಲಿಕೆ ಸದಸ್ಯರು ಇದ್ದಿದ್ದರೆ, ಅಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆಯಾ ವಾರ್ಡ್‌ ಮಟ್ಟದಲ್ಲಿ ಪಾಲಿಕೆ ಸದಸ್ಯರು, ಸೋಂಕು ನಿಯಂತ್ರಣ ಮಾಡುವುದು, ಆಕ್ಸಿಜನ್‌ ಸಮಸ್ಯೆ ಇದ್ದರೆ, ಅದನ್ನು ತಕ್ಷಣವೇ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸು ತ್ತಿದ್ದರು ಎನ್ನುತ್ತಾರೆ ಮಾಜಿ ಮೇಯರ್‌ ಪದ್ಮಾವತಿ.

ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ  :  ಜನಪ್ರತಿನಿಧಿಗಳ ಆಡಳಿತದಲ್ಲಿ ಸ್ಥಳೀಯ ಸಂಸ್ಥೆ ಏನು ಮಾಡುತ್ತಿದೆ. ಯಾವ ರೀತಿಯಲ್ಲಿ ಆಡಳಿತ ಯಂತ್ರ ಸಾಗುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿತ್ತು.ಆದರೆ, ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಆಡಳಿತದಲ್ಲಿ ಯಾವುದೇ ತಪ್ಪುಗಳು, ಭ್ರಷ್ಟಾಚಾರ,ಮಂದಗತಿಯ ಆಡಳಿತ ನಡೆದರೂ ಜನರಿಗೆ ತಿಳಿಯದಂತಾಗಿದೆ. ಒಟ್ಟಾರೆ ಬಿಬಿಎಂಪಿ ನಿಷ್ಕ್ರಿಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌ ಟೀಕಿಸಿದರು.

ಕಾರ್ಪೋರೇಟರ್‌ಗಳು ಇಲ್ಲದಿರುವುದರಿಂದ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಹಾಗೂ ತಮ್ಮ ಸಮಸ್ಯೆ ಪರಿಹರಿಸಲು ಯಾರನ್ನು ಭೇಟಿಯಾಗಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಇದರಿಂದ ವಾರ್ಡ್‌ಗಳಲ್ಲಿ ಸಣ್ಣ-ಪುಟ್ಟ ಕೆಲಸಗಳು ಕೂಡ ನಡೆಯುತ್ತಿಲ್ಲ. ಮೂಲ ಸೌಕರ್ಯ ಪಡೆಯುವುದಕ್ಕಾಗಿಯೇ ಜನರು ಪರದಾಡುವಂತಾಗಿದೆ. -ಡಿ. ವೆಂಕಟೇಶ್‌ ಮೂರ್ತಿ, ಮಾಜಿ ಮೇಯರ್‌

ಪ್ರಮುಖವಾಗಿ ಜನರಿಗೆ ಬೇಕಾಗಿರುವುದು ಕುಡಿಯುವ ನೀರು, ರಸ್ತೆ, ಬೀದಿ ದೀಪ,ಚರಂಡಿ, ಒಳಚರಂಡಿ ವ್ಯವಸ್ಥೆಗಳನ್ನು ಸರಿಪಡಿಸುವುದು. ಈ ಕೆಲಸ ಮಾಡುವವರು ಪಾಲಿಕೆ ಸದಸ್ಯರೇ ಹೊರತು ಅಧಿಕಾರಿಗಳಲ್ಲ. ಪಾಲಿಕೆ ಸದಸ್ಯರು ಇಲ್ಲದಿದ್ದರೆ, ಬಿಬಿಎಂಪಿ ಶೂನ್ಯ. -ಪದ್ಮಾವತಿ, ಮಾಜಿ ಮೇಯರ್‌

ಜನಪ್ರತಿನಿಧಿಗಳ ಮನವಿಗಳನ್ನೇ ಸಮರ್ಪಕವಾಗಿ ಸ್ವೀಕರಿಸದ ಅಧಿಕಾರಿಗಳು ಇನ್ನು ಜನಸಾಮಾನ್ಯರ ಬಳಿ ಹೋಗಿ ಕೆಲಸ ಮಾಡುತ್ತಾರಾ? ಸಾಮಾನ್ಯ ಜನರು ಅಧಿಕಾರಿ ವರ್ಗವನ್ನು ಪ್ರಶ್ನಿಸಿದಾಗ ಎಷ್ಟರ ಮಟ್ಟಿಗೆ ಉತ್ತರ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. -ಎಂ. ಶಿವರಾಜು, ಮಾಜಿ ಪಾಲಿಕೆ ಸದಸ್ಯ

ಪಾಲಿಕೆ ಸದಸ್ಯರಿದ್ದರೆ ನಾಗರಿಕರಿಗೆ ಬಹಳ ಸುಲಭವಾಗಿ ಕೈಗೆ ಸಿಗುತ್ತಿದ್ದರು. ತಮ್ಮಸಮಸ್ಯೆಗಳು ಹಾಗೂ ಸೌಲಭ್ಯಗಳನ್ನು ಕೇಳಲುಸಾಧ್ಯವಾಗುತ್ತಿತ್ತು. ಆದರೆ, ಈಗ ಅಧಿಕಾರಿಗಳ ಆಡಳಿತ ಇರುವುದರಿಂದ ಜನರು ತಮ್ಮದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಶಾಸಕರನ್ನುಭೇಟಿಯಾಗಬೇಕಿದೆ. ಪಾಲಿಕೆ ಸದಸ್ಯರಿದ್ದರೆ, ಹೆಚ್ಚಿನ ಅನುದಾನ ತಂದು ವಾರ್ಡ್‌ ಅಭಿವೃದ್ಧಿ ಮಾಡುತ್ತಿದ್ದರು. -ಎಸ್‌.ಕೆ. ನಟರಾಜ್‌, ಮಾಜಿ ಮೇಯರ್‌

-ಎನ್‌. ಎಲ್‌. ಶಿವಮಾದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next