ಬೆಂಗಳೂರು: ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೇಳಲು ನಿರ್ಧರಿಸಲಾಗಿದೆ. ಮಾಮೂಲಿಯಂತೆ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿಗೆ 3ರಿಂದ 3,500 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆದರೆ, ಈ ಬಾರಿ 7 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವುದು ಸೇರಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಬಜೆಟ್ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಸಿದ್ಧತೆ ನಡೆಸಿದೆ. ಈಗಾಗಲೇ ವಿಭಾಗವಾರು ಬೇಡಿಕೆ ಪಡೆದು ಸಭೆ ನಡೆಸಲಾಗುತ್ತಿದೆ. ಸದ್ಯದ ಮಟ್ಟಿಗೆ ಬಿಬಿಎಂಪಿಯ ವಿವಿಧ ವಿಭಾಗಗಳಿಂದ ನಿರ್ವಹಣಾ ಕಾಮಗಾರಿಗಳಿಗಷ್ಟೇ ಅನುದಾನ ಕೋರಲಾಗಿದೆ. ಅದರ ಪ್ರಕಾರ 5ರಿಂದ 6 ಸಾವಿರ ಕೋಟಿ ರೂ. ಮೊತ್ತ ಬೇಕಾಗಲಿದೆ. ಅದರ ಜತೆಗೆ ಹೆಚ್ಚುವರಿಯಾಗಿ ಈಗಾಗಲೇ ಆರಂಭಿಸಲಾಗಿರುವ ಕಾಮಗಾರಿಗಳಿಗಾಗಿ ಅಂದಾಜು 7 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಬೇಕಾಗಲಿದೆ. ಆ ಹಣವನ್ನು ರಾಜ್ಯ ಸರ್ಕಾರದಿಂದ ಪಡೆಯಲು ಬಿಬಿಎಂಪಿ ನಿರ್ಧರಿಸಿದ್ದು, ಅದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.
ಬಿಬಿಎಂಪಿಗೆ ಆಸ್ತಿ ತೆರಿಗೆ ಮಾತ್ರ ಅತಿದೊಡ್ಡ ಆದಾಯದ ಮೂಲವಾಗಿದೆ. ಪ್ರಸಕ್ತ ಸಾಲಿನಲ್ಲಿ (2022-23) 10943.54 ಕೋಟಿ ರೂ. ಬಜೆಟ್ ಮಂಡಿಸಿ, 4,200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಈವರೆಗೆ 2,900 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಆದಾಯದಿಂದ ಬಾಕಿ ಬಿಲ್‌ಗಳ ಪಾವತಿ ಸೇರಿ ಇನ್ನಿತರ ವೆಚ್ಚಗಳನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆಯುವುದು ಅನಿವಾರ್ಯವಾಗಿದೆ.
10 ಸಾವಿರ ಕೋಟಿ ರೂ. ಬಾಕಿ ಬಿಲ್: ಸದ್ಯ ಅಮೃತ ನಗರೋತ್ಥಾನ ಅನುದಾನದ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಸಾವಿರ ಕೋಟಿ ರೂ. ಗೂ ಹೆಚ್ಚಿನ ಕಾಮಗಾರಿ ನಡೆಸಲಾಗುತ್ತಿದೆ. ಅದರ ಜತೆಗೆ ಬಾಕಿ ಬಿಲ್ 3 ಸಾವಿರ ಕೋಟಿ ರೂ.ಗೂ ಹೆಚ್ಚಿದೆ. ಒಟ್ಟಾರೆ ಬಿಬಿಎಂಪಿಯ ಹೊಣೆಗಾರಿಕೆ 10 ಸಾವಿರ ಕೋಟಿ ರೂ. ದಾಟಲಿದೆ. ಅಮೃತ ನಗರೋತ್ಥಾನದ ಅನುದಾನದಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ 3 ಸಾವಿರ ಕೋಟಿ ರೂ. ಅನುದಾನ ನೀಡಿದೆ.
Related Articles
ಹೀಗಾಗಿ ಅಮೃತ ನಗರೋತ್ಥಾನ ಅನುದಾನದ ಬಾಕಿ ಮೊತ್ತ 3 ಸಾವಿರ ಕೋಟಿ ರೂ. ಇನ್ನೂ ನೀಡಬೇಕಿದೆ. ಅದರ ಜತೆಗೆ ಈ ವರ್ಷದ ಕಾಮಗಾರಿಗಳಿಗಾಗಿ ಹಾಗೂ ಬಾಕಿ ಬಿಲ್ ಪಾವತಿಗಾಗಿ ಹೆಚ್ಚುವರಿಯಾಗಿ 4 ಸಾವಿರ ಕೋಟಿ ರೂ.ಗಳು ಸೇರಿ 7 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸುವಂತೆ ಬಿಬಿಎಂಪಿ ಕೋರಲಿದೆ.
ಬಜೆಟ್ ಸಭೆ ವೇಳೆ ಪ್ರಸ್ತಾಪ: ಫೆ. 17ರಂದು ರಾಜ್ಯ ಬಜೆಟ್ ಮಂಡನೆ ಮಾಡುವ ಸಾಧ್ಯತೆಗಳಿವೆ. ಅದಕ್ಕೆ ಆರ್ಥಿಕ ಇಲಾಖೆ ಈಗಾಗಲೆ ಸಿದ್ಧತೆಯನ್ನೂ ಮಾಡಿಕೊಂಡಿದೆ. ಇಲಾಖಾವಾರು ಸಭೆಗಳನ್ನು ನಡೆಸಿ ಬೇಡಿಕೆ ಹಾಗೂ ಯೋಜನೆಗಳ ಪ್ರಸ್ತಾವನೆಯನ್ನು ಪಡೆಯಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯಲ್ಲಿಯೇ ಆರ್ಥಿಕ ಇಲಾಖೆ ಇರುವ ಕಾರಣ ಅವರ ನೇತೃತ್ವದಲ್ಲಿಯೇ ಬಜೆಟ್ ಸಿದ್ಧಗೊಳ್ಳುತ್ತಿದೆ. ಇನ್ನೊಂದು ವಾರದಲ್ಲಿ ಬಿಬಿಎಂಪಿ ಸೇರಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ಸಭೆ ನಡೆಯಲಿದೆ.
ಈ ವೇಳೆ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ, 2023-24ನೇ ಸಾಲಿಗೆ ಬೇಕಾಗುವ ಅನುದಾನ, ರಾಜ್ಯ ಬಜೆಟ್‌ನಲ್ಲಿ ಘೋಷಿಸಬಹು ದಾದ ಯೋಜನೆಗಳ ಕುರಿತಂತೆ ಪಟ್ಟಿಯನ್ನು ಬಿಬಿಎಂಪಿ ಅಧಿಕಾರಿಗಳು ಸಲ್ಲಿಸಲಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಬಾರಿ 3 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ಬಿಬಿಎಂಪಿಗೆ ನೀಡುತ್ತಿದೆ. ಆದರೆ, 2023-24ನೇ ಸಾಲಿನಲ್ಲಿ 7 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೋರಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯ ಬಜೆಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. -ಜಯರಾಂ ರಾಯಪುರ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)
-ಗಿರೀಶ್ ಗರಗ