Advertisement
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವುದು ಸೇರಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಬಜೆಟ್ ಸಿದ್ಧಪಡಿಸಲು ಬಿಬಿಎಂಪಿ ಹಣಕಾಸು ವಿಭಾಗ ಸಿದ್ಧತೆ ನಡೆಸಿದೆ. ಈಗಾಗಲೇ ವಿಭಾಗವಾರು ಬೇಡಿಕೆ ಪಡೆದು ಸಭೆ ನಡೆಸಲಾಗುತ್ತಿದೆ. ಸದ್ಯದ ಮಟ್ಟಿಗೆ ಬಿಬಿಎಂಪಿಯ ವಿವಿಧ ವಿಭಾಗಗಳಿಂದ ನಿರ್ವಹಣಾ ಕಾಮಗಾರಿಗಳಿಗಷ್ಟೇ ಅನುದಾನ ಕೋರಲಾಗಿದೆ. ಅದರ ಪ್ರಕಾರ 5ರಿಂದ 6 ಸಾವಿರ ಕೋಟಿ ರೂ. ಮೊತ್ತ ಬೇಕಾಗಲಿದೆ. ಅದರ ಜತೆಗೆ ಹೆಚ್ಚುವರಿಯಾಗಿ ಈಗಾಗಲೇ ಆರಂಭಿಸಲಾಗಿರುವ ಕಾಮಗಾರಿಗಳಿಗಾಗಿ ಅಂದಾಜು 7 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಬೇಕಾಗಲಿದೆ. ಆ ಹಣವನ್ನು ರಾಜ್ಯ ಸರ್ಕಾರದಿಂದ ಪಡೆಯಲು ಬಿಬಿಎಂಪಿ ನಿರ್ಧರಿಸಿದ್ದು, ಅದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.
Related Articles
Advertisement
ಬಜೆಟ್ ಸಭೆ ವೇಳೆ ಪ್ರಸ್ತಾಪ: ಫೆ. 17ರಂದು ರಾಜ್ಯ ಬಜೆಟ್ ಮಂಡನೆ ಮಾಡುವ ಸಾಧ್ಯತೆಗಳಿವೆ. ಅದಕ್ಕೆ ಆರ್ಥಿಕ ಇಲಾಖೆ ಈಗಾಗಲೆ ಸಿದ್ಧತೆಯನ್ನೂ ಮಾಡಿಕೊಂಡಿದೆ. ಇಲಾಖಾವಾರು ಸಭೆಗಳನ್ನು ನಡೆಸಿ ಬೇಡಿಕೆ ಹಾಗೂ ಯೋಜನೆಗಳ ಪ್ರಸ್ತಾವನೆಯನ್ನು ಪಡೆಯಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯಲ್ಲಿಯೇ ಆರ್ಥಿಕ ಇಲಾಖೆ ಇರುವ ಕಾರಣ ಅವರ ನೇತೃತ್ವದಲ್ಲಿಯೇ ಬಜೆಟ್ ಸಿದ್ಧಗೊಳ್ಳುತ್ತಿದೆ. ಇನ್ನೊಂದು ವಾರದಲ್ಲಿ ಬಿಬಿಎಂಪಿ ಸೇರಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ಸಭೆ ನಡೆಯಲಿದೆ.
ಈ ವೇಳೆ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ, 2023-24ನೇ ಸಾಲಿಗೆ ಬೇಕಾಗುವ ಅನುದಾನ, ರಾಜ್ಯ ಬಜೆಟ್‌ನಲ್ಲಿ ಘೋಷಿಸಬಹು ದಾದ ಯೋಜನೆಗಳ ಕುರಿತಂತೆ ಪಟ್ಟಿಯನ್ನು ಬಿಬಿಎಂಪಿ ಅಧಿಕಾರಿಗಳು ಸಲ್ಲಿಸಲಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಬಾರಿ 3 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ಬಿಬಿಎಂಪಿಗೆ ನೀಡುತ್ತಿದೆ. ಆದರೆ, 2023-24ನೇ ಸಾಲಿನಲ್ಲಿ 7 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೋರಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯ ಬಜೆಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. -ಜಯರಾಂ ರಾಯಪುರ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)
-ಗಿರೀಶ್ ಗರಗ