Advertisement

ಗುತ್ತಿಗೆ ಬಿಲ್‌ ಪಾವತಿಗೆ ಸರ್ಕಾರದ ಮೊರೆ

12:51 PM Dec 20, 2022 | Team Udayavani |

ಬೆಂಗಳೂರು: ಸದ್ಯದ ಮಟ್ಟಿಗೆ ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಆಸ್ತಿಗಳನ್ನು ಅಡವಿಟ್ಟು ಪಡೆಯಲಾಗಿದ್ದ ಎಲ್ಲ ಸಾಲವನ್ನು ತೀರಿಸಲಾಗಿದೆ. ಆದರೂ, ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ರಾಜ್ಯ ಸರ್ಕಾರದಿಂದ ಅನುದಾನ ಕೋರಿ ಪತ್ರ ಬರೆಯಲಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅದರ ಜತೆಗೆ ಬಾಕಿ ಬಿಲ್‌ಗ‌ಳ ಮೊತ್ತ 3 ಸಾವಿರ ಕೋಟಿ ರೂ.ಗಳಿದ್ದು, ಮುಂದೆ ಕೈಗೊಳ್ಳಬೇಕಾದ ಕಾಮಗಾರಿಗಳ ಮೊತ್ತ 5 ಸಾವಿರ ಕೋಟಿ ರೂ. ದಾಟಲಿದೆ. ಒಟ್ಟಾರೆ ಬಿಬಿಎಂಪಿ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಹೊಣೆಗಾರಿಕೆಯನ್ನು ಹೊಂದಿದೆ. ಚಾಲ್ತಿ ಕಾಮಗಾರಿಗಳ ಪೈಕಿ ಶೇ. 90 ಕಾಮಗಾರಿಗಳು ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವಂತಹದ್ದಾಗಿದೆ. ಉಳಿದ ಕಾಮಗಾರಿಗಳನ್ನು ಬಿಬಿಎಂಪಿ ಆದಾಯದಲ್ಲಿ ಪಾವತಿಸಬೇಕಿದೆ. ಹಾಗೆಯೇ, ಈಗಾಗಲೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಹಣ ನೀಡಬೇಕಿದೆ. ಹೀಗಾಗಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು 750 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರವನ್ನು ಕೋರಿದೆ.

ರಾಜ್ಯ ಸರ್ಕಾರದ ಅನುದಾನವೇ ಆಧಾರ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಮತ್ತು ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಲ್ಲಿ ಬಹುತೇಕವು ರಾಜ್ಯ ಸರ್ಕಾರದ ಅನುದಾನವನ್ನು ನೆಚ್ಚಿಕೊಂಡಿರುವಂತಹವಾಗಿವೆ. ಹೀಗಾಗಿ ಪ್ರತಿ ಬಾರಿ ಬಿಲ್‌ ಪಾವತಿ ವೇಳೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಅನುದಾನಕ್ಕಾಗಿ ಮನವಿ ಸಲ್ಲಿಸುತ್ತದೆ. ಅಲ್ಲದೆ, ರಾಜ್ಯ ಸರ್ಕಾರ ಕೂಡ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಪ್ರತಿವರ್ಷ ಕನಿಷ್ಠ 3 ಸಾವಿರ ಕೋಟಿ ರೂ. ಅನುದಾನ ನೀಡುತ್ತದೆ. ಅದು ಕೂಡ 4 ಕಂತುಗಳಲ್ಲಿ ನೀಡಲಿದ್ದು, ಈ ಬಾರಿ ಈಗಾಗಲೇ 3 ಕಂತಿನಲ್ಲಿ ತಲಾ 750 ಕೋಟಿ ರೂ. ನೀಡಲಾಗಿದೆ. ಇದೀಗ ಕೊನೆಯ ಕಂತನ್ನು ನೀಡುವಂತೆ ಬಿಬಿಎಂಪಿ ಕೋರಿದೆ. ಒಂದು ವೇಳೆ ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ತಡ ಮಾಡಿದರೆ ಗುತ್ತಿಗೆದಾರರಿಗೆ ಬಿಲ್‌ ನೀಡುವಲ್ಲಿಯೂ ವಿಳಂಬವಾಗಲಿದೆ.

2 ವರ್ಷದ ಬಿಲ್‌ ಬಾಕಿ: ಬಿಬಿಎಂಪಿಯಲ್ಲಿ ಸದ್ಯ ಹಿರಿತನದ ಆಧಾರದಲ್ಲಿ ಬಿಲ್‌ ಪಾವತಿಸಲಾಗುತ್ತಿದೆ. ಯಾವ ಕಾಮಗಾರಿ ಮೊದಲು ಪೂರ್ಣಗೊಂಡಿದೆ, ಯಾವ ಗುತ್ತಿಗೆದಾರರು ಮೊದಲು ಬಿಲ್‌ಗ‌ಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಆಧರಿಸಿ ಬಿಲ್‌ಗ‌ಳ ಹಿರಿತನವನ್ನು ನಿಗದಿ ಮಾಡಲಾಗುತ್ತದೆ. ಅದರ ಜತೆಗೆ 2 ವರ್ಷಗಳ ಹಿಂದಿನ ಬಿಲ್‌ಗ‌ಳಿಗಷ್ಟೇ ಹಣವನ್ನು ಪಾವತಿಸುವ ವ್ಯವಸ್ಥೆಯನ್ನೂ ಬಿಬಿಎಂಪಿ ಅನುಷ್ಠಾನಕ್ಕೆ ತಂದಿದೆ. ಹೀಗಾಗಿ 2020ರ ನವೆಂಬರ್‌ ಅಂತ್ಯದವರೆಗಿನ ಬಿಲ್‌ಗ‌ಳನ್ನು ಈಗಾಗಲೇ ಪಾವತಿಸಲಾಗಿದೆ. 2020ರ ಡಿಸೆಂಬರ್‌ನ ನಂತರದ ಬಿಲ್‌ಗ‌ಳನ್ನು ಈಗ ಪಾವತಿಸಬೇಕಿದ್ದು, ಅವುಗಳ ಮೊತ್ತ 3 ಸಾವಿರ ಕೋಟಿ ರೂ.ಗಳಷ್ಟಾಗಿದೆ. ಅಲ್ಲದೆ, ಮುಂದಿನ ಎರಡ್ಮೂರು ತಿಂಗಳಲ್ಲಿ 750 ಕೋಟಿ ರೂ. ಬಿಲ್‌ಗ‌ಳನ್ನು ಪಾವತಿಸಬೇಕಾದ ಹೊಣೆಗಾರಿಕೆ ಬಿಬಿಎಂಪಿ ಮೇಲಿದೆ.

ಬಿಲ್‌ ಪಾವತಿಗೆ ಹೊಸ ವ್ಯವಸ್ಥೆ : ಬಾಕಿ ಬಿಲ್‌ ಪಾವತಿಗೆ ಸರ್ಕಾರದ ನೆರವು ಕೋರಿರುವ ಬಿಬಿಎಂಪಿ, ಅದರ ಜತೆಗೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಅದರ ಪ್ರಕಾರ ಗುತ್ತಿಗೆದಾರರು 2 ವರ್ಷದ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ಪಾವತಿಸಿ ಕಾಮಗಾರಿ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಬಹು ದಾಗಿದೆ. ಅದಕ್ಕೆ ಬಿಬಿಎಂಪಿಯಿಂದ ಖಾತರಿ ನೀಡಲಾಗುತ್ತದೆ. ತುರ್ತು ಹಣದ ಅಗತ್ಯ ಇರುವ ಗುತ್ತಿಗೆದಾರರು ಈ ವ್ಯವಸ್ಥೆಯಂತೆ 15 ದಿನಗಳಲ್ಲಿ ಕಾಮಗಾರಿ ಮೊತ್ತದ ಹಣವನ್ನು ಪಡೆಯಬಹುದಾಗಿದೆ. ಇದರಿಂದ ಬಿಲ್‌ ಪಾವತಿಗಾಗಿ 2 ವರ್ಷಗಳವರೆಗೆ ಕಾಯುವ ಸ್ಥಿತಿ ಇಲ್ಲದಂತಾಗಲಿದೆ.

Advertisement

ಈ ಕುರಿತು ಬಿಬಿಎಂಪಿ ಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ಅನುಮೋದನೆ ನೀಡಿದರೆ ಮುಂದಿನ ಆರ್ಥಿಕ ವರ್ಷದಿಂದ ನೂತನ ವ್ಯವಸ್ಥೆ ಜಾರಿಯಾಗಲಿದೆ.

ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅನುದಾನ ಕೋರಲಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ಹಣ ನೀಡಿದ ಕೂಡಲೇ ಬಿಲ್‌ ಪಾವತಿಯನ್ನು ಮತ್ತೆ ಆರಂಭಿಸಲಾಗುವುದು. ಜತೆಗೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಜಯರಾಂ ರಾಯಪುರ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next