ಬೆಂಗಳೂರು: ಬಿಬಿಎಂಪಿಯಲ್ಲಿ ಸರ್ಕಾರ ಮಂಜೂರು ಮಾಡಿದ ಹುದ್ದೆಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿಯಿವೆ. ಇಷ್ಟಾದರೂ ಬಿಬಿಎಂಪಿಗೆ ಹೊಸದಾಗಿ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕರದ್ದಾಗಿದೆ.
ಒಂದೂಕಾಲು ಕೋಟಿಗೂ ಹೆಚ್ಚಿನ ಜನರ ಬೇಕು-ಬೇಡಗಳನ್ನು ಪೂರೈಸುವ, 840 ಚದರ ಕಿ.ಮೀ. ಆಡಳಿತ ವ್ಯಾಪ್ತಿಯನ್ನು ಹೊಂದಿರುವ ಬಿಬಿಎಂಪಿಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಿತ್ಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ, ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಬೇಕಾದ ಅಧಿಕಾರಿಗಳೇ ಇಲ್ಲದಂತಾಗಿದೆ.
ಹೀಗಾಗಿ ಬಿಬಿಎಂಪಿ ತುಂಬೆಲ್ಲ ಎರವಲು ಸೇವೆಯ ಮೇಲೆ ಬಂದ ಅಧಿಕಾರಿ, ಸಿಬ್ಬಂದಿಯೇ ಹೆಚ್ಚಿದ್ದಾರೆ. ರಾಜ್ಯ ಸರ್ಕಾರ ಬಿಬಿಎಂಪಿಗೆ ಈವರೆಗೆ 12,827 ಹುದ್ದೆಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ 7,369 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 8,063 ಹುದ್ದೆಗಳು ಖಾಲಿ ಇವೆ.
ಅದರ ಜತೆಗೆ ಹೊಸ 45 ವಾರ್ಡ್‌ಗಳನ್ನು ಸೃಷ್ಟಿಸಲಾಗಿದ್ದು, ಇಲ್ಲಿ ಕೆಲಸ ಮಾಡಲು ಒಂದೂವರೆ ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಅವಶ್ಯಕತೆಯಿದೆ. ಒಟ್ಟಾರೆ ಸುಮಾರು 9,563 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಆದರೆ, ಇದೀಗ ವಿವಿಧ ಹುದ್ದೆಗಳಿಗೆ ಹೊಸದಾಗಿ 2,850 ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅದರಲ್ಲಿ ಬಹುಪಾಲು ಪೌರಕಾರ್ಮಿಕ ಹುದ್ದೆಯದ್ದಾಗಿದೆ.
Related Articles
2,115 ಪೌರಕಾರ್ಮಿಕರು: ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ವಿವಿಧ ಹುದ್ದೆಗಳ 2,850 ಸಿಬ್ಬಂದಿ ನೇಮಕಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ 2,115 ಹುದ್ದೆಗಳು ಪೌರಕಾರ್ಮಿಕರದ್ದಾಗಿದೆ. ಅದರ ಜತೆಗೆ 150 ಮಂದಿ ಗ್ರೂಪ್ ಡಿ, 39 ಮಂದಿ ಚಾಲಕರು ಹಾಗೂ 90 ಮಂದಿ ಗ್ಯಾಂಗ್‌ಮನ್‌ಗಳಾಗಿರಲಿದ್ದಾರೆ. ಹೀಗೆ ಆಡಳಿತಕ್ಕೆ ಸಂಬಂಧಿಸದ 2,394 ಹುದ್ದೆಗಳನ್ನು ನೇಮಿಸಲು ಬಿಬಿಎಂಪಿ ಮುಂದಾಗಿದೆ.
ಕಂದಾಯ ವಿಭಾಗಕ್ಕೆ ಹೆಚ್ಚು: ಪೌರಕಾರ್ಮಿಕರು ಸೇರಿ ಬಿಬಿಎಂಪಿ ಆಡಳಿತಕ್ಕೆ ನೆರವಾಗದ ಹುದ್ದೆಗಳನ್ನು ಹೊರತುಪಡಿಸಿ 456 ಸಿಬ್ಬಂದಿ ನೇಮಕ ಕುರಿತಂತೆ ಬಿಬಿಎಂಪಿ ಪ್ರಸ್ತಾವನೆಯಲ್ಲಿ ಉಲ್ಲೇಖೀಸಿದೆ. ಪ್ರಮುಖವಾಗಿ ತೆರಿಗೆ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಂತೆ ಕಂದಾಯ ವಿಭಾಗದಲ್ಲಿ 13 ಸಹಾಯಕ ಕಂದಾಯ ಅಧಿಕಾರಿ, 15 ಕಂದಾಯ ಮೌಲ್ಯಮಾಪಕರು, 45 ಆದಾಯ ನಿರೀಕ್ಷಕ, 90 ಕಂದಾಯ ನಿರೀಕ್ಷಕರು ಸೇರಿ ಒಟ್ಟು 163 ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದಂತೆ ಕಾಮಗಾರಿ ವಿಭಾಗಕ್ಕೆ 71, ಸಾಮಾನ್ಯ ಆಡಳಿತಕ್ಕೆ 135, ಆರೋಗ್ಯ ವಿಭಾಗದಲ್ಲಿ ಪೌರಕಾರ್ಮಿಕರು, ಗ್ಯಾಂಗ್‌ಮನ್ ಹೊರತುಪಡಿಸಿ ಹಿರಿಯ ಆರೋಗ್ಯ ನಿರೀಕ್ಷಕ 45 ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳ ನೇಮಕ ಕುರಿತಂತೆ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
97.54 ಕೋಟಿ ರೂ. ಹೊರೆ: ಬಿಬಿಎಂಪಿಗೆ 2,850 ಸಿಬ್ಬಂದಿ ನೇಮಕದಿಂದಾಗಿ ವಾರ್ಷಿಕ 97.54 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಅದರಲ್ಲಿ ಪೌರಕಾರ್ಮಿಕರ ವೇತನಕ್ಕಾಗಿಯೇ ವಾರ್ಷಿಕ 66.52 ಕೋಟಿ ರೂ. ಖರ್ಚಾಗಲಿದೆ. ಅಲ್ಲದೆ ಪೌರಕಾರ್ಮಿಕರೂ ಸೇರಿದಂತೆ ಆರೋಗ್ಯ ವಿಭಾಗಕ್ಕೆ ಒಟ್ಟು 73.41 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗಲಿದೆ. ಸಾಮಾನ್ಯ ಆಡಳಿತ ವಿಭಾಗಕ್ಕೆ 10.44 ಕೋಟಿ ರೂ, ಕಂದಾಯ ವಿಭಾಗಕ್ಕೆ 7.92 ಕೋಟಿ ರೂ., ಕಾಮಗಾರಿ ವಿಭಾಗಕ್ಕೆ 5.77 ಕೋಟಿ ರೂ.
ಹೊರೆ ಬೀಳಲಿದೆ. ಬಿಗಡಾಯಿಸಲಿದೆ ಪರಿಸ್ಥಿತಿ: ಸದ್ಯ ಬಿಬಿಎಂಪಿಗೆ ಭರ್ತಿಯಾಗಿರುವ ಹುದ್ದೆಗಳಿಗಿಂತ ಖಾಲಿ ಇರುವ ಹುದ್ದೆಗಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಬಿಬಿಎಂಪಿ ಆಡಳಿತಕ್ಕೆ ಎರವಲು ಸೇವೆ ಮೂಲಕ ಸಿಬ್ಬಂದಿ, ಅಧಿಕಾರಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಅದರ ನಡುವೆ ಹೊಸದಾಗಿ 45 ವಾರ್ಡ್‌ಗಳನ್ನು ಸೃಷ್ಟಿಸಿ, ಅಲ್ಲಿಗೂ ಸಿಬ್ಬಂದಿ, ಅಧಿಕಾರಿಗಳನ್ನು ನೇಮಿಸಬೇಕಿದೆ. ಆದರೆ, ಹೊಸ ನೇಮಕಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆ ಆಡಳಿತ ಸುಧಾರಣೆಗೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಬಿಬಿಎಂಪಿ ಆಡಳಿತದಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಬಿಬಿಎಂಪಿ ಆಡಳಿತದಲ್ಲಿ ಸುಧಾರಣೆಗೆ 2,850 ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ಕೂಡಲೆ ಭರ್ತಿ ಕಾರ್ಯ ಕ್ರಮ ಕೈಗೊಳ್ಳಲಾಗುವುದು. -ರಂಗಪ್ಪ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ)
-ಗಿರೀಶ್ ಗರಗ