ಕನ್ನಡ ಚಿತ್ರರಂಗದಲ್ಲಿ ಈಗ ಡಬ್ಬಿಂಗ್ ಹಕ್ಕುಗಳು ಸಖತ್ ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರಗಳ ಡಬ್ಬಿಂಗ್ ರೈಟ್ಸ್‌ಗಳು ಹಿಂದಿಗೆ ಒಳ್ಳೆಯ ಬೆಲೆಗೆ ಮಾರಾಟವಾಗು ಮೂಲಕ ನಿರ್ಮಾಪಕರಿಗೆ ವ್ಯವಹಾರದ ಹೊಸ ಬಾಗಿಲು ತೆರೆದಿದೆ. ಈಗಾಗಲೇ ಅನೇಕ ಕನ್ನಡ ಚಿತ್ರಗಳ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದ್ದು, ಆ ಸಾಲಿಗೆ ಹೊಸ ಸೇರ್ಪಡೆ “ಬಜಾರ್’. ಸುನಿ ನಿರ್ದೇಶನದ “ಬಜಾರ್’ ಚಿತ್ರದ ಡಬ್ಬಿಂಗ್ ರೈಟ್ಸ್ ಹಿಂದಿಗೆ ಒಂದು ಕೋಟಿ ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಒಬ್ಬ ಹೊಸ ಹುಡುಗನ ಮೊದಲ ಚಿತ್ರಕ್ಕೆ ಈ ಮೊತ್ತ ಸಿಕ್ಕಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಆದಿತ್ಯ ಎನ್ನುವವರು ಹಿಂದಿ ಡಬ್ಬಿಂಗ್ ಹಕ್ಕನ್ನು ಖರೀದಿಸಿದ್ದಾರೆ. ಚಿತ್ರದಲ್ಲಿ ಆರು ಫೈಟ್‌ಗಳಿದ್ದು, ಮಾಸ್ ಪ್ರಿಯರು ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ಸುನಿಗಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ದರ್ಶನ್ ಬಿಡುಗಡೆ ಮಾಡಿದ್ದು, ಹಾಡುಗಳಿಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ಬಜಾರ್’ ಚಿತ್ರದ ಮೂಲಕ ಧನ್ವೀರ್ ಲಾಂಚ್ ಆಗುತ್ತಿದ್ದಾರೆ.
ಚಿತ್ರದ ಹಾಡು ಹಾಗೂ ಫೈಟ್‌ಗಾಗಿ ಧನ್ವೀರ್ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಮಾಡಿ, ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಚಿತ್ರದಲ್ಲೇ ಭರ್ಜರಿಯಾಗಿ ಎಂಟ್ರಿಕೊಡಲು ಧನ್ವೀರ್ ರೆಡಿಯಾಗಿದ್ದಾರೆ. ಇಲ್ಲಿ ಲವ್‌ಸ್ಟೋರಿ ಜೊತೆಗೆ ಪಾರಿವಾಳ ರೇಸ್ ಕೂಡಾ ಈ ಚಿತ್ರದ ಹೈಲೈಟ್. ಪಾರಿವಾಳ ರೇಸ್ ಅನ್ನು ಮೂಲವಾಗಿಟ್ಟುಕೊಂಡು “ಬಜಾರ್’ ಚಿತ್ರದ ಕಥೆ ಸಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ಸುನಿ, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಮರ್ಷಿಯಲ್ ಆಗಿ ಏನೇನು ಬೇಕೋ, ಅವೆಲ್ಲವನ್ನು ಸೇರಿಸಿದ್ದೇವೆ. ಈಗ ಡಬ್ಬಿಂಗ್ ರೈಟ್ಸ್ ಕೂಡಾ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಈ ಸಿನಿಮಾ ಪಾರಿವಾಳ ರೇಸ್ ಜೊತೆಗೆ ಸಾಗುತ್ತದೆ. ಸುಮಾರು 500ಕ್ಕೂ ಹೆಚ್ಚು ಪಾರಿವಾಳಗಳಿರುವ ಪ್ರಕಾಶ್ ನಗರ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ.
ಈ ಚಿತ್ರದಲ್ಲಿ ರೇಸ್ ಜೊತೆಗೆ ರೌಡಿಸಂ, ಲವ್ ಕೂಡಾ ಇದೆ. ಧನ್ವೀರ್ ತುಂಬಾ ಚೆನ್ನಾಗಿ ನಟಿಸಿದ್ದು, ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಸುನಿ. “ಬಜಾರ್’ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.