ಸಿರುಗುಪ್ಪ: ಜಿಲ್ಲೆಯಲ್ಲಿ ಗಂಡು ಮೆಟ್ಟಿನ ಕಲೆಯಾದ ಬಯಲಾಟ ಕಲೆಯನ್ನು ನಂಬಿಕೊಂಡು ಬದುಕುತ್ತಿರುವ ಒಂದು ಸಾವಿರಕ್ಕೂ ಹೆಚ್ಚು ಬಯಲಾಟದ ಕಲಾವಿದರ ಬದುಕು ಕೊರೊನಾದಿಂದಾಗಿ ಬಯಲಾಟಗಳು ಸ್ಥಗಿತಗೊಂಡಿದ್ದು, ಈ ಕಲೆಯನ್ನೇ ನಂಬಿದ ಕಲಾವಿದರು ತಮ್ಮ ಜೀವನ ನಿರ್ವಹಣೆಗೆ ಒದ್ದಾಡುವ ಪರಿಸ್ಥಿತಿ ಬಂದಿದೆ.
ಯಾವುದೇ ಆಸ್ತಿಯಿಲ್ಲದೆ ಕಲೆಯನ್ನೆ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೆ ಕೋವಿಡ್ 2ನೇ ಅಲೆಯು ತೀವ್ರ ಹೊಡೆತ ನೀಡಿದೆ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹಳ್ಳಿಗಳಲ್ಲಿ ಜಾತ್ರೆ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗ್ರಾಮಸ್ಥರು ಬಯಲಾಟ ತಂಡಗಳನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಬಯಲಾಟ ಪ್ರದರ್ಶನಗಳು ನಿಂತುಹೋಗಿವೆ.
ಮತ್ತೂಂದು ಕಡೆ ಸರ್ಕಾರ ಯಾವುದೇ ಜಾತ್ರೆ, ಹಬ್ಬ ಹರಿದಿನಗಳನ್ನು ಮನೆಯಲ್ಲಿಯೇ ಆಚರಿಸಿಕೊಳ್ಳ ಬೇಕೆಂದು ನಿರ್ಬಂಧ ಹಾಕಿರುವುದರಿಂದ ಯಾವುದೇ ಹಳ್ಳಿಗಳಲ್ಲಿ ಬಯಲಾಟ ಪ್ರದರ್ಶನ ನಡೆಯುತ್ತಿಲ್ಲ. ಬಯಲಾಟ ಪ್ರದರ್ಶನ ನಡೆದರೆ ಮಾತ್ರ ಬಯಲಾಟ ಕಲಾವಿದರ ಬದುಕಿನ ನಿರ್ವಹಣೆಗೆ ಅನುಕೂಲ ವಾಗುತ್ತಿತ್ತು. ಆದ್ದರಿಂದ ಸರ್ಕಾರದ ವಿವಿಧ ಯೋಜನೆಗಳ ಪ್ರಚಾರ, ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಬೀದಿ ನಾಟಕ, ಕಲಾತಂಡಗಳು ದುಡಿಯುತ್ತಿದ್ದವು. ಸರ್ಕಾರಿ ಕಾರ್ಯಕ್ರಮಗಳು ನಿಂತು ಹೋಗಿರುವುದರಿಂದ ಬೀದಿ ನಾಟಕ ಕಲಾ ತಂಡಗಳು ಬೀದಿ ಪಾಲಾಗಿವೆ.
ಆದ್ದರಿಂದ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡಲು ಬಯಲಾಟ ಕಲಾವಿದರನ್ನು ಸರ್ಕಾರ ಬಳಸಿಕೊಳ್ಳಬೇಕು. ಬಯಲಾಟ ಅಕಾಡೆಮಿಯಿಂದ ಮುಂಬರುವ ದಿನಗಳಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳಿಗೆ ಬಯಲಾಟ ಕಲಾವಿದರನ್ನು ಬಳಸಿಕೊಂಡರೆ, ಬಯಲಾಟ ನಂಬಿದ ಕಲಾವಿದರ ಬದುಕಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ.
ಜಿಲ್ಲೆಯಲ್ಲಿ ಬಯಲಾಟ ಕ್ಷೇತ್ರದಲ್ಲಿ ಹಾರ್ಮೋನಿಯಮ್ ನುಡಿಸುವ ಕಲಾವಿದರು, ತಾಳ ಮದ್ದಲೆ ನುಡಿಸುವ ಕಲಾವಿದರು, ಹಾಡುಗಾರಿಕೆ ಕಲಾವಿದರು, ಬಣ್ಣ ಹಚ್ಚುವವರು, ಸ್ತ್ರೀವೇಶಧಾರಿ ಪಾತ್ರ ಮಾಡುವವರು, ಸಾರಥಿ ಪಾತ್ರ ನಿರ್ವಹಿಸುವವರು, ಬಯಲಾಟ ಸಾಮಾನುಗಳ ಬಾಡಿಗೆ ಕೊಡುವವರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಬಯಲಾಟ ಕಲೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಇದರಲ್ಲಿ ಕೇವಲ ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ಸರ್ಕಾರದಿಂದ ಮಾಸಾಶನ ದೊರೆಯುತ್ತಿದ್ದು, ಇನ್ನುಳಿದವರಿಗೆ ಮಾಸಾಶನವೂ ಇಲ್ಲ, ಪ್ರದರ್ಶನಕ್ಕೆ ಅವಕಾಶವಿಲ್ಲದಂತಾಗಿದ್ದು, ಆರ್ಥಿಕವಾಗಿ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಬಯಲಾಟ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವನ್ನು ಘೋಷಣೆ ಮಾಡಬೇಕು. ಈಗ ಸರ್ಕಾರ ಪ್ಯಾಕೇಜ್ ಅಡಿಯಲ್ಲಿ ಘೋಷಣೆ ಮಾಡಿರುವ ಪರಿಹಾರದ ಹಣವು ಬಯಲಾಟ ಕಲಾವಿದರಿಗೆ ದೊರೆಯುತ್ತಿಲ್ಲ ಎಂಬ ಅಳಲನ್ನು ಬಯಲಾಟ ಕಲಾವಿದರು ತೋಡಿಕೊಂಡಿದ್ದಾರೆ. ಬಯಲಾಟ ಕಲಾವಿದರಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಕೆಲವು ಕಲಾವಿದರಿಗೆ ಬರುತ್ತಿದ್ದ ಮಾಸಾಶನವು ಬಂದಿಲ್ಲ, ಮಾಸಾಶನ ಪಡೆಯುತ್ತಿರುವ ಕಲಾವಿದರೂ ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಬಯಲಾಟ ಕಲೆ ನಂಬಿಕೊಂಡು ಜಿಲ್ಲೆಯಲ್ಲಿ ಸಾವಿರಕ್ಕೂ ಅ ಧಿಕ ಕಲಾವಿದರು ಬದುಕುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಕೊರೊನಾ ಕಾಟದಿಂದಾಗಿ ಯಾವುದೇ ಪ್ರದರ್ಶನಗಳಿಗೆ ಅವಕಾಶವಿಲ್ಲದಂತಾಗಿತ್ತು. ಈ ಕಲೆಯನ್ನೆ ನಂಬಿದ ಕಲಾವಿದರ ಬದುಕು ಬೀದಿಗೆ ಬಂದು ಬಿದ್ದಿದೆ. ಸರ್ಕಾರ ಕಲಾವಿದರಿಗೆ ಘೋಷಣೆ ಮಾಡಿರುವ ಲಾಕ್‌ಡೌನ್ ಪರಿಹಾರ ನಿಧಿ ರೂ.3 ಸಾವಿರ ನಮ್ಮ ಬಹುತೇಕ ಕಲಾವಿದರಿಗೆ ತಾಂತ್ರಿಕ ಸಮಸ್ಯೆಯಿಂದ ದೊರೆಯುತ್ತಿಲ್ಲ, ಆದ್ದರಿಂದ ಜಿಲ್ಲೆಯ ಬಯಲಾಟ ಕಲಾವಿದರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಪ್ರತಿಯೊಬ್ಬ ಕಲಾವಿದರಿಗೂ 10 ಸಾವಿರ ರೂ. ಪರಿಹಾರ ನೀಡಬೇಕು. ಜಿ.ವೀರನಗೌಡ, ಹಿರಿಯ ಕಲಾವಿದರು.