ಹೆಂಚು ಮಣ್ಣಿನ ಲಾರಿಗಳು “ರೊಂ…ಯ್ಯೋ…’ ಎಂದು ಸದ್ದು ಮಾಡುತ್ತಾ ಕಾಲುದಾರಿಯನ್ನೇ ರಸ್ತೆಯಾಗಿಸಿಕೊಂಡು ಆ ಊರಿಗೆ ಬಂದಿಳಿದಾಗ ಮನುಷ್ಯರೂ ಸೇರಿ ಸಕಲ ಪ್ರಾಣಿವರ್ಗದವರೂ ಬೆಚ್ಚಿಬಿದ್ದರು. ಜೀವನದಲ್ಲಿ ಒಮ್ಮೆಯೂ ವಾಹನಗಳನ್ನೇ ನೋಡದ ಮುದುಕಿಯರಂತೂ ಲಾರಿಯನ್ನು ಕಂಡು ಥೇಟ್ ಯಮನ ವಾಹನವೇನೋ ಎಂಬಂತೆ ಭಯಗೊಂಡರು. ಊರ ಗಂಡುಗಳೆಲ್ಲ ಗದ್ದೆಯ ಮಣ್ಣನ್ನು ಮಾರಿ ದಿಢೀರನೆ ದುಡ್ಡು ಗಳಿಸುವ ಕನಸಿನಲ್ಲಿ ತೇಲುತ್ತಿದ್ದರೆ, ನಡುವಯಸ್ಕರು ಎಲ್ಲಿ ಜಮೀನು ಕೈತಪ್ಪುವುದೋ ಎಂಬ ಆತಂಕದಲ್ಲಿದ್ದರು. “ಭೂತಾಯಿಯ ಎದೆ ಬಗೆಯಬೇಡಿರೋ’ ಎಂಬ ವೃದ್ಧರ ಕ್ಷೀಣ ಕೂಗು ಲಾರಿಯ ಶಬ್ದದಲ್ಲಿ ಯಾರ ಕಿವಿಗೂ ಬೀಳಲಿಲ್ಲ. ಏಜೆಂಟರು ಗಂಡಾಳುಗಳ ಜೊತೆಗೆ ತಮಗೆ ಮಣ್ಣನ್ನು ಸಾಗಿಸಲು ಹೆಣ್ಣಾಳುಗಳೂ ಬೇಕೆಂದಾಗ ಮಾತ್ರ ಊರಿನವರೆಲ್ಲರ ಎದೆಯೊಳಗೆ ಸಣ್ಣಗೆ ಅವಲಕ್ಕಿ ಕುಟ್ಟಿದಂತಾಯಿತು. ಇದುವರೆಗೆ ಕೇವಲ ಮನೆಗೆಲಸ, ಹೊಲದ ಕೆಲಸ ಮಾಡಿಕೊಂಡು ಹೇಳಿದಂತೆ ಕೇಳಿಕೊಂಡಿರುತ್ತಿದ್ದ ಹೆಣ್ಣುಗಳು ತಮ್ಮದೇ ಕಮಾಯಿ ಸಿಕ್ಕಿ ಕೈತಪ್ಪಿ ಹೋದರೆ ಎಂಬ ಭಯ ವಯಸ್ಸನ್ನು ಮೀರಿ ಎಲ್ಲ ಗಂಡಸರನ್ನೂ ಕಾಡಿತು.
ಹೆಣ್ಣುಮಕ್ಕಳು ಬಾಗಿಲ ಸಂದಿಯಿಂದಲೇ ಈ ವಿಷಯವನ್ನು ಕೇಳಿ, ಮನಸ್ಸಿದ್ದರೂ ಮನೆಯವರೇನೆಂದುಕೊಳ್ಳುತ್ತಾರೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದರೆ, ಮೇಲಿನ ಮನೆಯ ಮಂಜಿ ಮಾತ್ರ ತಾನು ಕೆಲಸಕ್ಕೆ ನಾಳೆಯೇ ಬರುವುದಾಗಿ ಘಂಟಾಘೋಷವಾಗಿ ಘೋಷಿಸಿಬಿಟ್ಟಳು. ಒಂದೆರಡು ದಿನ ಅವಳೊಬ್ಬಳೇ ಗಂಡಸರೊಂದಿಗೆ ಕೆಲಸ ಮಾಡಿದಳಾದರೂ ಮರುದಿನ ಇನ್ನೂ ನಾಲ್ಕಾರು ಮನೆಯವರು ತಮ್ಮ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಧೈರ್ಯ ಮಾಡಿದರು. ಸಹಜವಾಗಿಯೇ ಮೊದಲು ಕೆಲಸಕ್ಕೆ ಸೇರಿದ ಮಂಜಿ ಇವರೆಲ್ಲರಿಗೂ ನಾಯಕಿಯಾಗಿದ್ದಳು. ಮೇಸ್ತ್ರಿಯ ಕಣ್ಣುತಪ್ಪಿಸಿ ಆಗಾಗ ಗದ್ದೆಯಂಚಿನ ಪೇರಲೆ ಹಣ್ಣು ತಿನ್ನಲು ಹೋಗುವುದು, ನೀರು ಕುಡಿವ ನೆವದಲ್ಲಿಯಾದರೂ ಸ್ವಲ ವಿಶ್ರಾಂತಿ ತೆಗೆದುಕೊಳ್ಳುವುದು, ನಗುನಗುತ್ತ ಮಾತನಾಡಿ ಮೇಸ್ತ್ರಿಯನ್ನು ಯಾಮಾರಿಸುವುದು ಎಲ್ಲವನ್ನೂ ಅವಳೇ ಇವರೆಲ್ಲರಿಗೆ ಹೇಳಿಕೊಡುತ್ತಿದ್ದಳು. ಮೊದಲ ವಾರದ ಸಂಬಳ ಕೈಗೆ ಬಂದಾಗ ದೊಡ್ಡ ನೋಟುಗಳನ್ನು ಕಂಡೇ ಇರದ ಅವರಿಗಾದ ರೋಮಾಂಚನವನ್ನು ವರ್ಣಿಸಲು ಪದಗಳಿರಲಿಲ್ಲ. ಬಂದ ಸಂಬಳವನ್ನೆಲ್ಲ ಮನೆಯವರ ಕೈಗಿಡುವ ಮೊದಲೇ ಮಂಜಿ ತನ್ನ ಪಟಾಲಂನ್ನು ಕಟ್ಟಿಕೊಂಡು ಹತ್ತಿರದ ಸಂತೆಗೆ ಹೋಗಿ ಅವರಿಗೆಲ್ಲ ಬೇಕಾದ ಬಳೆ, ರಿಬ್ಬನ್‌ಗಳನ್ನಷ್ಟಲ್ಲದೇ ಪೌಡರ್ ಡಬ್ಬವನ್ನು ಕೊಡಿಸಿದಳು. ತಮ್ಮ ಮಕ್ಕಳನ್ನೆಲ್ಲ ಕೆಡಿಸುತ್ತಿದ್ದಾಳೆಂದು ಊರ ಹೆಂಗಸರ ಆಪಾದನೆಗೂ ಗುರಿಯಾಗಿದ್ದಳು.
ಹೀಗೆ, ಹೆಣ್ಣುಮಕ್ಕಳು ತಮ್ಮದೇ ಹಣದಲ್ಲಿ ಪುಡಿಗಾಸನ್ನು ಉಳಿಸಿ ಏನೇನನ್ನೋ ಕೊಳ್ಳುತ್ತ, ಆಗಾಗ ಹೆಂಚಿನ ಮಣ್ಣನ್ನು ಇಳಿಸಲೆಂದು ಮಣ್ಣು ತುಂಬಿದ ಲಾರಿಯ ಹಿಂದೆ ನಿಂತು ಫ್ಯಾಕ್ಟರಿಯವರೆಗೂ ಹೋಗುತ್ತ, ಹಾಗೆ ಹೋಗುವಾಗ ನಗರದ ಬೆಡಗನ್ನು ಕಣ್ತುಂಬಿಕೊಳ್ಳುತ್ತ ಹೊಸದೊಂದು ಲೋಕಕ್ಕೆ ತೆರೆದುಕೊಳ್ಳತೊಡಗಿದರು. ಆಗಲೇ ಬೇರೆ ಊರಿನಿಂದ ಬಂದ ಕೆಲಸದ ಮೇಸ್ತ್ರಿಗೂ ಮಂಜಿಗೂ ಭಾರೀ ಸಲುಗೆಯೆಂಬ ವಿಷಯವೊಂದು ರೆಕ್ಕೆಪುಕ್ಕ ಪಡೆದುಕೊಂಡು ಊರಿಡೀ ಹಾರಾಡತೊಡಗಿತು. ಒಂದೆರಡು ಮನೆಯವರು ಅವಳೊಂದಿಗೆ ತಮ್ಮ ಮನೆಯ ಹೆಣ್ಣುಗಳನ್ನು ಸೇರಿಸಲಾರೆವೆಂಬ ಮಡಿವಂತಿಕೆಯಿಂದ ಕೆಲಸ ಬಿಡಿಸಿದ ವಿದ್ಯಮಾನವೂ ನಡೆಯಿತು.
ಮಂಜಿ ಮಾತ್ರ ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಮೊದಲಿನಂತೆಯೇ ಕುಲುಕುಲು ನಗುತ್ತ, ಸುತ್ತಲಿನವರನ್ನೂ ನಗಿಸುತ್ತ ತನ್ನ ಸಂಬಳವನ್ನೆಲ್ಲ ತಾನೇ ಒಂದು ಹುಂಡಿಯೊಳಗೆ ಜೋಪಾನವಾಗಿಡುತ್ತಿದ್ದಳು. ಅದೊಂದು ದಿನ ಕೆಲಸದ ಮೇಸ್ತ್ರಿ ಊರಿನಿಂದ ಮಾಯವಾದಾಗ ಮಂಜಿಯ ಪ್ರಕರಣಕ್ಕೆ ಇನ್ನೊಂದು ತಿರುವು ಬಂದೊದಗಿತ್ತು. ಮಂಜಿಯೀಗ ಗರ್ಭಿಣಿಯೆಂದೂ, ಊರಿನವರು ಮದುವೆ ಮಾಡಿಸುವರೆಂಬ ಭೀತಿಯಿಂದ ವಿವಾಹಿತನಾದ ಮೇಸ್ತ್ರಿ ಓಡಿಹೋದನೆಂದು ಜನ ಆಡಿಕೊಳ್ಳತೊಡಗಿದರು. ಇನ್ನು ಸುಮ್ಮನಿದ್ದರೆ ಊರಿನ ಮರ್ಯಾದಿ ಹೋಗುವುದು ಖಚಿತವೆಂದು ಮಂಜಿಯ ತಾಯಿಯ ಬಳಿ ಊರ ಹಿರಿಯರು ಇದನ್ನು ಪ್ರಸ್ತಾಪಿಸಿದರು. ಅವಳ್ಳೋ ಏನೊಂದನ್ನೂ ಅರಿಯದ ಮುಗ್ದೆ. ತನ್ನ ಮಗಳು ತಪ್ಪು ಮಾಡಿದ್ದರೆ ಶಿಕ್ಷಿಸಲು ಅಭ್ಯಂತರವಿಲ್ಲ ಎಂದು ತಲೆ ತಗ್ಗಿಸಿದಳು.
ಅಂತೂ ಒಂದು ನಿಗದಿತ ದಿನದಂದು ಊರ ನಾಲ್ಕಾರು ಹಿರಿಯರು ಮಂಜಿಯನ್ನು ವಿಚಾರಿಸಲಿಕ್ಕಾಗಿ ಅವಳ ಮನೆಗೆ ಹೋದರು. ಅವಳ ಅಪರಾಧವೇನಾದರೂ ಸಾಬೀತಾದರೆ ಅವರನ್ನು ಊರಿನಿಂದ ಬಹಿಷ್ಕರಿಸುವುದೆಂಬ ತೀರ್ಮಾನವನ್ನೂ ಮಾಡಿಕೊಂಡಿದ್ದರು. ಒಬ್ಬೊಬ್ಬರಾಗಿ ಮಂಜಿಯ ಕೋಣೆಯೊಳಗೆ ಹೋಗಿ ಅವಳನ್ನು ವಿಚಾರಿಸಿ ಬರುತ್ತಿದ್ದರು. ಹೊರಬಂದವರೇ ಇನ್ನುಳಿದವರಿಗೆ, “ಕೆಟ್ಟ ಹಟ ಅವಳಿಗೆ. ಬಾಯೇ ಬಿಡುತ್ತಿಲ್ಲ’ ಎನ್ನುತ್ತಿದ್ದರು. ಎಲ್ಲರ ಸರದಿ ಮುಗಿದ ಮೇಲೆ, ಎಲ್ಲರೂ ಸೇರಿ ಮಂಜಿಯ ಅಮ್ಮನಿಗೆ ಆದಷ್ಟು ಬೇಗ ಅವಳನ್ನು ಮದುವೆ ಮಾಡುವಂತೆ ತಿಳಿಸಿ ಹೋದರು. ಪಂಚಾಯ್ತಿಯಿಂದ ದೊಡ್ಡ ದಂಡವನ್ನೇ ನಿರೀಕ್ಷಿಸಿದ್ದ ಅಮ್ಮನಿಗೆ ಅವರ ನಿರ್ಣಯವನ್ನು ಕೇಳಿ ಆಶ್ಚರ್ಯವಾಯಿತು. ಈ ಕುರಿತು ಮಗಳನ್ನು ವಿಚಾರಿಸಿದಳು. ಮಂಜಿಯ ಉತ್ತರ ಅಮ್ಮನಿಗೂ ಒಮ್ಮೆ ನಗು ತರಿಸಿತು. ಬಂದೇಬಿಟ್ರಾ, ಬಡವರ ಮಗಳು ಬಸುರಿಯಾದ್ಲು ಅಂದ ಕಂಡು. ಒಬ್ಬೊಬ್ಬರಾಗಿ ಬಂದು “ಯಾರು ಹೀಗೆ ಮಾಡಿದ್ದು ಹೇಳು’ ಅಂದಾಗೆಲ್ಲ ಅವರ ಮಗನ ಹೆಸರನ್ನೇ ಹೇಳಿದೆ ನೋಡು. ಬಾಲ ಮುಚ್ಕೊಂಡು ಹೊರಟೋದ್ರು. “ಬೇರೆಲ್ಲೂ ಹೇಳಬೇಡ ಮಾರಾಯ್ತಿ’ ಅಂತ ಬೇಡಿಕೊಂಡ್ರು ಎಂದು ಕಿಲಕಿಲನೆ ನಕ್ಕಳು.
ಅದಾದ ತಿಂಗಳಿನಲ್ಲಿಯೇ ಮಂಜಿ ತಾಳಿಗೆ ಕೊರಳೊಡ್ಡಿದಳು. ಹೆಣ್ಣು ದಿಕ್ಕಿಲ್ಲದ ಮನೆಗೆ ಮೊದಲ ಸೊಸೆಯಾಗಿ ಹೋದಳು. ತಾನುಳಿಸಿದ ಪುಡಿಗಾಸಿನಲ್ಲಿ ಕಿತ್ತುಹೋದ ಮನೆಯನ್ನೆಲ್ಲ ರಿಪೇರಿ ಮಾಡಿಸಿದಳು. ಹಡೀಲು ಬಿಟ್ಟ ಹೊಲವನ್ನು ತಾನೇ ಮುಂದೆ ನಿಂತು ಉಳುಮೆ ಮಾಡಿಸಿ, ಹಸಿರು ಹೊದಿಕೆ ಹೊದೆಸಿದಳು. ಮನೆಯ ಮೈದುನ-ನಾದಿನಿಯರಿಗೆಲ್ಲ ಮುದ್ದಿನ ಅತ್ತಿಗೆಯೆನಿಸಿದಳು. ಲಕ್ವಾ ಹೊಡೆದ ಮಾವನನ್ನು ಆರೈಕೆ ಮಾಡಿ ದೊಣ್ಣೆಯೂರಿ ನಡೆಯುವಂತೆ ಮಾಡಿದಳು. ಆಡಿಕೊಳ್ಳುವ ಜನರು ಮಾತ್ರ ಅವಳ ಹೆರಿಗೆಯ ದಿನವನ್ನು ಕಾಯತೊಡಗಿದರು. ಇದ್ಯಾವುದಕ್ಕೂ ಕ್ಯಾರೆ ಅನ್ನದ ಮಂಜಿ ಮದುವೆಯಾಗಿ ಎಂಟು ತಿಂಗಳಿಗೆ ಮುದ್ದಾದ ಗಂಡು ಮಗುವೊಂದನ್ನು ಹೆತ್ತಳು. ಒಂಬತ್ತು ತಿಂಗಳ ಚರ್ಚೆಯಿನ್ನೂ ಆರಂಭಗೊಳ್ಳುವ ಮೊದಲೇ ಅವಳಿಗೆ ಹೆರಿಗೆ ಮಾಡಿಸಿದ ದೇವಿರಮ್ಮ ಅವಳ ಗಂಡನಿಗೆ, “ಇಕಾ ಬಸ್ವಾ, ಅವರಿವರ ಮಾತ ಕೇಳಿ ಮುತ್ತಂತ ಮಗುನಾ, ಹೊನ್ನಂತ ಹೆಣಿ¤àನಾ ನೋಯಿಸಬೇಡ. ಕೆಲವರ ಬಸಿರಿಗೆ ಸೂರ್ಯನ ತಿಂಗಳು, ಇನ್ನು ಕೆಲವರಿಗೆ ಚಂದ್ರನ ತಿಂಗಳು. ಚಂದ್ರನ ತಿಂಗಳಿಗೆ ಸರಿಯಾಗಿ ಹೆತ್ತವಳೆ ನಿನ್ನ ಹೆಂಡತಿ. ಅದಕ್ಕೇ ನೋಡು ಚಂದ್ರಮನಂತದೆ ಮಗು’ ಎಂದು ಮನದಟ್ಟು ಮಾಡಿದಳು. ಮಂಜಿಯನ್ನು ಬಿಟ್ಟು ಮನೆಯನ್ನು ಸಂಭಾಳಿಸಲು ಸಾಧ್ಯವಿಲ್ಲವೆಂಬ ಸತ್ಯ ತಿಳಿದಿದ್ದ ಬಸವ ಅಡ್ಡಡ್ಡ ತಲೆ ಅಲ್ಲಾಡಿಸಿದ್ದ. ಮಂಜಿ ದೇವೀರಮ್ಮನಿಗೆ ವಂದಿಸಿ ಮಗುವನ್ನು ತೊಟ್ಟಿಲಿನಲ್ಲಿಟ್ಟು ಲಾಲಿಹಾಡಿದಳು.
ಸುಧಾ ಆಡುಕಳ