Advertisement

ಕಿವೀಸ್‌ಗೆ ತಲೆನೋವು ತಂದ ಹೆಡ್‌-ಪೇನ್‌

10:01 AM Dec 29, 2019 | Team Udayavani |

ಮೆಲ್ಬರ್ನ್: ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಟ್ರ್ಯಾವಿಸ್‌ ಹೆಡ್‌ ಬಾರಿಸಿದ ಆಕರ್ಷಕ ಶತಕ ಹಾಗೂ ಟಿಮ್‌ ಪೇನ್‌ ಅವರ ಕಪ್ತಾನನ ಆಟದ ನೆರವಿನಿಂದ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ಹಿಡಿತ ಸಾಧಿಸಿದೆ. ಪ್ರವಾಸಿ ನ್ಯೂಜಿಲ್ಯಾಂಡ್‌ ಆರಂಭಿಕ ಕುಸಿತಕ್ಕೆ ಸಿಲುಕಿದೆ.

Advertisement

ಟೆಸ್ಟ್‌ ಪಂದ್ಯದ ದ್ವಿತೀಯ ದಿನವಾದ ಶುಕ್ರವಾರ ಇನ್ನಿಂಗ್ಸ್‌ ಮುಂದುವರಿಸಿದ ಕಾಂಗರೂ ಪಡೆ 467 ರನ್‌ ಪೇರಿಸಿದರೆ, ಕಿವೀಸ್‌ ಆರಂಭಿಕರಿಬ್ಬರನ್ನು ಕಳೆದುಕೊಂಡು 44 ರನ್‌ ಮಾಡಿದೆ.

ಚಹಾ ವಿರಾಮದ ವೇಳೆ 5ಕ್ಕೆ 431 ರನ್‌ ಗಳಿಸಿದ್ದ ಆಸೀಸ್‌ ಇನ್ನೂ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದರೆ ಮುಂದಿನ 9 ಓವರ್‌ಗಳಲ್ಲಿ ಕೇವಲ 36 ರನ್‌ ಮಾಡುವಷ್ಟರಲ್ಲಿ ಆಲೌಟ್‌ ಆಯಿತು.

ಹೆಡ್‌ ಸೆಂಚುರಿ ಸಂಭ್ರಮ
ಆಸ್ಟ್ರೇಲಿಯ 4ಕ್ಕೆ 257 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆಗ ಸ್ಮಿತ್‌ 77, ಹೆಡ್‌ 25 ರನ್‌ ಮಾಡಿ ಆಡುತ್ತಿದ್ದರು. ಸ್ಮಿತ್‌ ಮೆಲ್ಬರ್ನ್ನಲ್ಲಿ ಸತತ 5ನೇ ಶತಕ ಬಾರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಅವರ ಆಟ 85 ರನ್ನಿಗೆ ಮುಗಿಯಿತು. ಹೆಡ್‌ ಬ್ಯಾಟಿಂಗ್‌ ವಿಸ್ತರಿಸಿ ಶತಕ ಸಂಭ್ರಮವನ್ನಾಚರಿಸಿದರು.
ಒಟ್ಟು 234 ಎಸೆತಗಳನ್ನು ನಿಭಾಯಿಸಿದ ಹೆಡ್‌ 12 ಬೌಂಡರಿ ನೆರವಿನಿಂದ 114 ರನ್‌ ಬಾರಿಸಿದರು. ಇದು 16ನೇ ಟೆಸ್ಟ್‌ನಲ್ಲಿ ಹೆಡ್‌ ಬಾರಿಸಿದ 2ನೇ ಶತಕ. “ಬಾಕ್ಸಿಂಗ್‌ ಡೇ ಹಂಡ್ರೆಡ್‌ ಭಾರೀ ಸಂತಸ ತಂದಿದೆ’ ಎಂಬುದು 25ರ ಹರೆಯದ ಟ್ರ್ಯಾವಿಸ್‌ ಹೆಡ್‌ ಪ್ರತಿಕ್ರಿಯೆ.

ಟಿಮ್‌ ಪೇನ್‌ ಕಪ್ತಾನನ ಆಟವಾಡಿ 79 ರನ್‌ ಕೊಡುಗೆ ಸಲ್ಲಿಸಿದರು (138 ಎಸೆತ, 9 ಬೌಂಡರಿ). ಸ್ಮಿತ್‌ ನಿರ್ಗಮನದ ಬಳಿಕ ಹೆಡ್‌-ಪೇನ್‌ ಜೋಡಿ 6ನೇ ವಿಕೆಟಿಗೆ ಭರ್ತಿ 150 ರನ್‌ ಒಟ್ಟುಗೂಡಿಸಿತು.

Advertisement

ನ್ಯೂಜಿಲ್ಯಾಂಡ್‌ ಪರ ವ್ಯಾಗ್ನರ್‌ 4, ಸೌಥಿ 3, ಗ್ರ್ಯಾಂಡ್‌ಹೋಮ್‌ 2 ವಿಕೆಟ್‌ ಉರುಳಿಸಿ ಕೊನೆಯಲ್ಲಿ ಕಾಂಗರೂ ಓಟಕ್ಕೆ ಬ್ರೇಕ್‌ ಹಾಕಿದರು. ಆದರೆ ಕಿವೀಸ್‌ ಆರಂಭ ಮಾತ್ರ ಆಘಾತಕಾರಿಯಾಗಿತ್ತು. ಈಗಾಗಲೇ ಬ್ಲಿಂಡೆಲ್‌ (15) ಮತ್ತು ನಾಯಕ ವಿಲಿಯಮ್ಸನ್‌ (9) ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಕಮಿನ್ಸ್‌, ಪ್ಯಾಟಿನ್ಸನ್‌ ಈ ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-467 (ಹೆಡ್‌ 114, ಸ್ಮಿತ್‌ 85, ಪೇನ್‌ 79, ಲಬುಶೇನ್‌ 63, ವಾರ್ನರ್‌ 41, ವ್ಯಾಗ್ನರ್‌ 83ಕ್ಕೆ 4, ಸೌಥಿ 103ಕ್ಕೆ 3, ಗ್ರ್ಯಾಂಡ್‌ಹೋಮ್‌ 68ಕ್ಕೆ 2). ನ್ಯೂಜಿಲ್ಯಾಂಡ್‌-2 ವಿಕೆಟಿಗೆ 44 (ಬ್ಲಿಂಡೆಲ್‌ 15, ವಿಲಿಯಮ್ಸನ್‌ 9, ಲ್ಯಾಥಂ ಬ್ಯಾಟಿಂಗ್‌ 9, ಡೇಲರ್‌ ಬ್ಯಾಟಿಂಗ್‌ 2).

Advertisement

Udayavani is now on Telegram. Click here to join our channel and stay updated with the latest news.

Next