ಕಲಬುರಗಿ: ರಾಜ್ಯದಲ್ಲಿ ಶೀಘ್ರವೇ ಬಿಬಿಎಂಪಿ ಸೇರಿದಂತೆ 10 ಮಹಾನಗರ ಪಾಲಿಕೆಗಳ ಪೌರ ಕಾರ್ಮಿಕ ಮಹಿಳಾ ಸಿಬ್ಬಂದಿಗೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ 15 ದಿನದೊಳಗೆ ಎಲ್ಲ ಪಾಲಿಕೆಗಳ ಮಹಿಳಾ ಪೌರ ಕಾರ್ಮಿಕರಿಗೆ ವಿತರಣೆ ಮಾಡಲಾಗುವುದು. ಅಲ್ಲದೇ, ಸಫಾಯಿ ಕರ್ಮಚಾರಿ ಕುಟುಂಬದಲ್ಲಿರುವ 8ನೇ ತರಗತಿಯಿಂದ ಪದವಿ ವರೆಗಿನ ವ್ಯಾಸಂಗ ಮಾಡುವ ವಿದ್ಯಾಥಿಗಳಿಗೆ 11 ಸಾವಿರ ಮುಖಬೆಲೆಯ ಟ್ಯಾಬ್ ನೀಡಲಾಗುವುದು. ಕಳೆದ ಬಾರಿ ಸಹ 2000 ಎರಡು ಸಾವಿರ ಟ್ಯಾಬ್ ವಿತರಿಸಲಾಗಿತ್ತು ಎಂದ ಅವರು, ವಿದ್ಯಾವಂತ ನಿರುದ್ಯೋಗಿಗಳಿಗೂ ಸ್ವಯಂ ಉದ್ಯೋಗ ಕೈಗೊಳ್ಳಲು 30ಲಕ್ಷ ರೂ.ವರೆಗೆ ಸಾಲ-ಸಹಾಯಧನ ಸೌಲಭ್ಯ ಸಿಗಲಿವೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರ ಮರು ಸರ್ವೇ ಮಾಡಿ
ರಾಜ್ಯದಲ್ಲಿ ಸಫಾಯಿ ಕರ್ಮಚಾರಿ, ಸ್ಕ್ಯಾವೆಂಜರ್ ಗುರುತಿಸಲು ಮತ್ತೂಮ್ಮೆ ಮರು ಸರ್ವೇ ಮಾಡಲಾಗುತ್ತಿದೆ. ಈಗ ರಾಜ್ಯದಲ್ಲಿ 1.43 ಲಕ್ಷ ಜನರಿದ್ದಾರೆ. ಇದು 2011ರ ಸಮೀಕ್ಷೆ ವರದಿ. ನಗರಸಭೆ, ಪಟ್ಟಣ ಪಂಚಾಯಿತಿ, ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಬಸ್ ನಿಲ್ದಾಣ ಹೀಗೆ ಎಲ್ಲ ಕಡೆ ಗುರಿಯಾಗಿಸಿಕೊಂಡು ಸರ್ವೇ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಮೈಸೂರು, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸರ್ವೇ ನಡೆಸಲಾಗುವುದು ಎಂದರು.
ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಐದು ಲಕ್ಷ ಸಫಾಯಿ ಕರ್ಮಚಾರಿಗಳಿದ್ದರೆ, 10 ಸಾವಿರ ಸ್ಕ್ಯಾವೆಂಜರ್ಗಳಿದ್ದಾರೆ ಎಂಬ ಮಾಹಿತಿ ಇದೆ. ಮೂರು ತಿಂಗಳಯೊಳಗಾಗಿ ಸರ್ವೇ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳು ದೊರೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು. ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಗೀತಾ ಆರ್. ವಾಡೇಕರ್, ವಿಜಯಕುಮಾರ ಆಡಕಿ ಇದ್ದರು.