Advertisement

ರಸ್ತೆಗಿಳಿಯಲು ಬ್ಯಾಟರಿ ಚಾಲಿತ ಇ-ರಿಕ್ಷಾ ಸಿದ್ಧ

10:19 AM Jun 03, 2019 | Team Udayavani |

ತುಮಕೂರು: ನಗರದ ರಸ್ತೆಗಿಳಿಯಲು ಪರಿಸರ ಸ್ನೇಹಿ, ಬ್ಯಾಟರಿ ಚಾಲಿತ ಇ-ರಿಕ್ಷಾಗಳು ಸಿದ್ಧವಾಗಿವೆ. ಹೊಗೆ ರಹಿತವಾಗಿ ರಸ್ತೆಯಲ್ಲಿ ಸಂಚಾರ ಮಾಡುವ ಇ-ರಿಕ್ಷಾಗಳು ದೇಶದ ಹಲವು ರಾಜ್ಯಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಹೊಸ ದೆಹಲಿ, ಕೋಲ್ಕತ್ತ, ಗುಜರಾತ್‌, ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ ಇ-ರಿಕ್ಷಾಗಳು ಬಳಕೆಯಲ್ಲಿದೆ. ತುಮಕೂರು ಸ್ಮಾರ್ಟ್‌ ಸಿಟಿ ಸಂಸ್ಥೆಯು ಪರಿಸರ ಸ್ನೇಹಿ, ಬ್ಯಾಟರಿ ಚಾಲಿತ ಇ-ರಿಕ್ಷಾಗಳನ್ನು ನಗರದ ರಸ್ತೆಗಿಳಿಸಲು ಅಣಿಯಾಗುತ್ತಿದೆ.

Advertisement

ಪೆಟ್ರೋಲ್ ಮತ್ತು ಡಿಸೇಲ್ ಚಾಲಿತ ವಾಹನಗಳು ಹೊರ ಬಿಡುವ ಹೊಗೆಯಿಂದಾಗಿ ಪರಿಸರ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪರಿಸರ ಸ್ನೇಹಿ ಇ-ರಿಕ್ಷಾಗಳಿಗೆ ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಚಾಲನೆ ನೀಡಲಾಗುತ್ತಿದೆ.

20ಕ್ಕೂ ಹೆಚ್ಚು ಆಟೋಗಳು ಸಿದ್ಧ: ನಗರದಲ್ಲಿ ಇ-ರಿಕ್ಷಾಗಳನ್ನು ಅರ್ಹ ನಿರುದ್ಯೋಗಿ ಮಹಿಳೆಯರಿಗೆ ನೀಡಿ ಉದ್ಯೋಗ ಒದಗಿಸಲು ತುಮಕೂರು ಸ್ಮಾರ್ಟ್‌ಸಿಟಿ ಸಂಸ್ಥೆ ಹೆಜ್ಜೆಯಿಟ್ಟಿದೆ. ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಇ-ರಿಕ್ಷಾದ ದರದಲ್ಲಿ ಶೇ.75ರಷ್ಟು ದರವನ್ನು ಸಹಾಯಧನ ಆಧಾರದಲ್ಲಿ ಹಾಗೂ ಉಳಿದ ಶೇ.25ರಷ್ಟು ದರವನ್ನು ಮಾತ್ರ ವಿಧಿಸಿ ವಿತರಿಸಲು 20ಕ್ಕೂ ಹೆಚ್ಚು ಆಟೋಗಳನ್ನು ಸಿದ್ಧವಾಗಿಟ್ಟುಕೊಂಡಿದೆ.

ಆಸಕ್ತ ಮಹಿಳಾ ಫ‌ಲಾನುಭವಿಯು ತಮ್ಮ ವಿಳಾಸ ದೃಢೀಕರಣ, ಜಾತಿ, ಆದಾಯ, ಬಿ.ಪಿ.ಎಲ್. ಕಾರ್ಡ್‌, ಜನನ ಪ್ರಮಾಣ ಪತ್ರ ಮತ್ತು ಎರಡು ಭಾವಚಿತ್ರಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ತ್ರಿಚಕ್ರ ವಾಹನ ನಡೆಸುವ ಸಾಮರ್ಥ್ಯವುಳ್ಳವರಾಗಿದ್ದು, ಚಾಲನಾ ಪರವಾನಗಿ ಹೊಂದಿರಬೇಕು. ಚಾಲನಾ ಪರವಾನಗಿ ಹೊಂದಿರುವ ಮಹಿಳಾ ಅರ್ಜಿದಾರರು ಲಭ್ಯವಿಲ್ಲದಿದ್ದ ಪಕ್ಷದಲ್ಲಿ, ಆಸಕ್ತ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಸೂಕ್ತ ಅಭ್ಯರ್ಥಿಗಳಿಗೆ ಇ-ರಿಕ್ಷಾಗಳನ್ನು ವಿತರಿಸಲಾಗುವುದು. ಪರವಾನಗಿ ಹೊಂದಿರುವ ಮಹಿಳಾ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗುವುದು.

ನಾಳೆ ಇ-ರಿಕ್ಷಾ ಪ್ರಾತ್ಯಕ್ಷಿಕೆ:ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ 21ರಿಂದ 45 ವರ್ಷ ವಯೋಮಿತಿಯೊಳಗಿರಬೇಕು. ಕಡ್ಡಾಯವಾಗಿ ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಆಸಕ್ತರು ಜೂ.4ರೊಳಗಾಗಿ ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಾಯೋಗಿಕ ಚಾಲನೆ ಹಾಗೂ ಇ-ರಿಕ್ಷಾ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಜ್ಞರಿಂದ ಪಡೆಯಲಿಚ್ಛಿಸುವವರಿಗಾಗಿ ನಗರದಲ್ಲಿ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಜೂ.3ರಂದು ಮಧ್ಯಾಹ್ನ 3 ಗಂಟೆಗೆ ಇ-ರಿಕ್ಷಾ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಅಟೋ-ರಿಕ್ಷಾ ಚಾಲಕರು ಭಾಗವಹಿಸಿ, ಈ ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

Advertisement

ಇಂದು ಚಾಲನೆ:ತುಮಕೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಗಾಜಿನ ಮನೆಯಲ್ಲಿ ಜೂ.3 ರಂದು ಮಧ್ಯಾಹ್ನ 3 ಗಂಟೆಗೆ ಪರಿಸರ ಸ್ನೇಹಿ, ಬ್ಯಾಟರಿ ಚಾಲಿತ ಇ-ರಿಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಇ-ರಿಕ್ಷಾ ತಜ್ಞರು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಿದ್ದು, ಆಟೋ ರಿಕ್ಷಾ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ವಿಠಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next