Advertisement

ಬೀಮರ್‌ ಎಸೆದು ಚೊಚ್ಚಲ ಶತಕ ಕಸಿದ ಬೌಲರ್‌!

06:00 AM Aug 08, 2018 | Team Udayavani |

ಲಂಡನ್‌: ಗೆಲ್ಲಲು ಐದು ರನ್‌ ಬೇಕು. ಕ್ರೀಸ್‌ನಲ್ಲಿದ್ದ ಆಟಗಾರನ ಶತಕಕ್ಕೆ ಕೇವಲ ಎರಡೇ ರನ್‌ ಸಾಕು. ಕ್ರೀಡಾಸ್ಫೂರ್ತಿಯ ಯಾವ ಆಟಗಾರನಾದರೂ ಶತಕ ನಿರಾಕರಿಸಲಾರ. ಆದರೆ, ಇಲ್ಲಿ ಸಣ್ಣ ಮನಸ್ಸಿನ ಬೌಲರ್‌ ಒಬ್ಬ ಬೀಮರ್‌ ಎಸೆದು ಚೆಂಡನ್ನು ಬೌಂಡರಿಯಾಚೆ ಕಳುಹಿಸಿ, ಪಂದ್ಯವನ್ನೇ ಮುಗಿಸಿದ!

Advertisement

ಇಂತಹ ಘಟನೆ ನಡೆದಿದ್ದು, ಇಂಗ್ಲಂಡ್‌ನ‌ಲ್ಲಿ. ಮೈನ್‌ಹೆಡ್‌ ಸಿಸಿ ತಂಡದ ಆಟಗಾರ ಆ್ಯಂಗಸ್‌ ಮಾರ್ಶ್‌ ಟ್ವಿಟರ್‌ನಲ್ಲಿ ಇದನ್ನು ಬಹಿರಂಗಪಡಿಸಿದ್ದು, ಇದು ತನ್ನ ಕ್ರೀಡಾ ಜೀವನದ ಅತ್ಯಂತ ಕೆಟ್ಟ ಗಳಿಗೆ ಎಂದು ಬರೆದಿದ್ದಾರೆ. ಚೆಂಡು ವಿರೂಪ ಘಟನೆ ಬಳಿಕ ಕ್ರೀಡಾಸ್ಫೂರ್ತಿಯನ್ನು ಹೆಚ್ಚಿಸುವ ಹಾಗೂ ಕ್ರಿಕೆಟ್‌ನ ಘನತೆ ಕಾಪಾಡುವ ನಿಟ್ಟಿನಲ್ಲಿ ಐಸಿಸಿ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊತ್ತಿನಲ್ಲೇ ಇಂತಹ ಸನ್ನಿವೇಶವೊಂದು ನಡೆದಿದೆ.

ಸಾಮರ್ಸೆಟ್‌ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯಲ್ಲಿ ಮೈನ್‌ಹೆಡ್‌ ಕ್ರಿಕೆಟ್‌ ಕ್ಲಬ್‌ ಹಾಗೂ ಪರ್ನೆಲ್‌ ಕ್ರಿಕೆಟ್‌ ಕ್ಲಬ್‌ಗಳು ಮುಖಾಮುಖಿಯಾಗಿದ್ದವು. ಮೈನ್‌ಹೆಡ್‌ ತಂಡದ ಜೇ ಡ್ಯಾರೆಲ್‌ 98 ರನ್‌ ಗಳಿಸಿ ಆಡುತ್ತಿದ್ದರು. ತಮ್ಮ ಚೊಚ್ಚಲ ಶತಕ ಗಳಿಸಲು ಎರಡು ರನ್‌ಗಳು ಬಾಕಿ ಇದ್ದವಷ್ಟೇ. ತಂಡದ ಗೆಲುವಿಗೆ ಐದು ರನ್‌ಗಳು ಬೇಕಿದ್ದವು. ಸಾಕಷ್ಟು ಎಸೆತಗಳೂ ಉಳಿದಿದ್ದವು. ಹೀಗಾಗಿ, ಸುಲಭವಾಗಿ ಶತಕ ಗಳಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಎದುರಾಳಿ ತಂಡದ ಬೌಲರ್‌ ಉದ್ದೇಶಪೂರ್ವಕವಾಗಿ ಬೀಮರ್‌ ಎಸೆದ. ಅದು ನೋಬಾಲ್‌ ಎಂದು ಅಂಪೈರ್‌ ಘೋಷಿಸಿದರು. ಅಷ್ಟು ಸಾಲದೆಂಬಂತೆ ಆ ಚೆಂಡು ಅದೇ ವೇಗದಲ್ಲಿ ಬೌಂಡರಿ ಗೆರೆಯನ್ನೂ ದಾಟಿ, ಡ್ಯಾರೆಲ್‌ ಅವರು ನಿರಾಶೆಯಿಂದ ಕುಸಿಯುವಂತೆ ಮಾಡಿತು. ಈ ಘಟನೆ ವ್ಯಾಪಕ ಟೀಕೆಗೆ ಒಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next