Advertisement

ಅವ್ಯವಸ್ಥೆಗಳ ಆಗರ ಅಂಬೇಡ್ಕರ್ ವಸತಿ ನಿಲಯ

06:30 PM Dec 02, 2022 | Team Udayavani |

ಸಾಲಿಗ್ರಾಮ: ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳು. ಸ್ವಚ್ಛತೆ ಇಲ್ಲದ ವಸತಿ ನಿಲಯ. 60 ಹೆಣ್ಣು ಮಕ್ಕಳಿಗೆ ಮಲಗಲು ಇರುವುದು ಎರಡೇ ಕೊಠಡಿ. ದನದ ಕೊಟ್ಟಿಗೆಗಿಂತಲೂ ಕೀಳಾದ ಮಕ್ಕಳ ವಸತಿ ನಿಲಯ.

Advertisement

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಅಂಬೇಡ್ಕರ್‌ ವಸತಿ ನಿಲಯದ ಅವ್ಯವಸ್ಥೆ ಇದಾಗಿದ್ದು, ಇಲ್ಲಿ ಹೇಳ್ಳೋರು ಕೇಳ್ಳೋರು ಯಾರು ಇಲ್ಲದಂತಾಗಿದೆ. ಉತ್ತಮ ಪರಿಸರದಲ್ಲಿ ವ್ಯಾಸಂಗ ಮಾಡಬೇಕಾದ ಮಕ್ಕಳು ಕೊಳಕು ಮತ್ತು ಅನೈರ್ಮಲ್ಯದ ನಡುವೆಯೇ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳು ಊಟಕ್ಕೆ, ಓದಲು ಕೂರಲು ಜಾಗಲ್ಲದೇ ದಾರಿಯಲ್ಲಿ ಹಾಸ್ಟೆಲ್‌ ಹೊರಾಂಗಣದ ನೆಲದಲ್ಲಿ ಧೂಳಿನ ನಡುವೆ ಕುಳಿತುಕೊಳ್ಳುವ ಅನಿವಾರ್ಯತೆ ಬಂದೊದ ಗಿದೆ. ಈ ವಸತಿ ಶಾಲೆಯಲ್ಲಿ ಒಟ್ಟು 230 ಮಕ್ಕಳು ವ್ಯಾಸಂಗ ಮಾಡುತ್ತಿದ್ದು 170 ಗಂಡು, 60 ಹೆಣ್ಣು ಮಕ್ಕಳು ದಾಖಲಾಗಿದ್ದು ಆದರೆ ವಸತಿ ನಿಲಯಕ್ಕೆ ಕೊಠಡಿಗಳೇ ಇಲ್ಲದೇ ಮಕ್ಕಳನ್ನು ದಾಖಲು ಮಾಡಿಕೊಂಡಿದ್ದು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ವಸತಿ ಶಾಲೆಯಲ್ಲಿಯೇ ಸ್ಥಳಾವಕಾಶ ಮಾಡಲಾಗಿದೆ.

ಅಲ್ಲದೇ ಮೆಟ್ರಿಕ್‌ ಪೂರ್ವ ವಸತಿ ಶಾಲೆಯ 10ಕ್ಕೂ ಹೆಚ್ಚು ಮಕ್ಕಳು ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದು ಜೊತೆಗೆ ಅಂಬೇಡ್ಕರ್‌ ವಸತಿ ಶಾಲೆಯ ಎಲ್ಲಾ ಮಕ್ಕಳಿಗೆ ಊಟ ಮತ್ತು ಹೆಣ್ಣು ಮಕ್ಕಳಿಗೆ ವಸತಿಯನ್ನು ಇಲ್ಲಿ ಕಲ್ಪಿಸಲಾಗಿದೆ. ಉಳಿದ ಗಂಡು ಮಕ್ಕಳಿಗೆ ಇನ್ನೊಂದು ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯ ನೀಡಲಾಗಿದ್ದು, ಊಟದ ಹಾಲ್‌ ಇಲ್ಲದೇ ಮಕ್ಕಳು ಹೊರಗೆ ಮತ್ತು ತಿರುಗಾಡುವ ಹಾದಿಯಲ್ಲಿ ಊಟ ಮಾಡುವಂತಾಗಿದೆ.

ಗಬ್ಬೆದ್ದು ನಾರುವ ಸ್ನಾನದ ಕೊಠಡಿ:ಸ್ನಾನದ ಕೊಠಡಿಗಳು ಪಾಚಿಯಿಂದ ಆವೃತವಾಗಿದ್ದು ನೀರಿನ ಸಂಪರ್ಕಕ್ಕೆ ನಲ್ಲಿಯನ್ನೇ ನೀಡದೆ ಶೇಖರಣಾ ತೊಟ್ಟಿಯ ನೀರು ಸರಾಗವಾಗಿ ಹರಿಯುತ್ತಿದ್ದು ಎಲ್ಲೆಂದರಲ್ಲಿ ಗಬ್ಬು ವಾಸನೆ ಬರುತ್ತಿದೆ. ಇನ್ನು ಶೌಚಗೃಹಗಳ ಕಥೆ ಹೇಳುವುದೇ ಬೇಡ. ಕುರಿದೊಡ್ಡಿಯಾಗಿರುವ ಹೆಣ್ಣುಮಕ್ಕಳ ವಾಸ್ತವ್ಯದ ಕೊಠಡಿ: ವಸತಿ ಶಾಲೆಯಲ್ಲಿ ಸುಮಾರು 60 ಹೆಣ್ಣು ಮಕ್ಕಳು ಇದ್ದು ಅವರಿಗೆ 2 ಚಿಕ್ಕ ಕೊಠಡಿಗಳನ್ನು ನೀಡಲಾಗಿದೆ. ಅದರಲ್ಲಿಯೇ ಅಷ್ಟೂ ಮಕ್ಕಳು ಮಲಗ ಬೇಕಿದ್ದು ಬಟ್ಟೆಗಳನ್ನು ಇಡಲು ಮತ್ತು ಮಲಗಲು ಆ ಮಕ್ಕಳ ಪಾಡು ದೇವರಿಗೆ ಗೊತ್ತು.ಇಷ್ಟೂ ತಿಳಿದಿರುವ ಇಲಾಖೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕಟ್ಟಿದ್ದು ಕೊಡಲಿಲ್ಲ ಮಕ್ಕಳ ಪಾಡು ಕೇಳಲಿಲ್ಲ: ಚುಂಚನಕಟ್ಟೆ ಹೋಬಳಿಯ ಸಕ್ಕರೆ ಗ್ರಾಮದಲ್ಲಿ ನಿರ್ಮಿಸಿರುವ ಮೊರಾರ್ಜಿ ವಸತಿ ಶಾಲೆಯ ಕಟ್ಟಡದಲ್ಲಿ ಸ್ಥಳಾವಕಾಶ ನೀಡಲು ಮೀನಮೇಷ ಎಣಿಸುತ್ತಿದ್ದು ಕಳೆದ 2 ತಿಂಗಳ ಹಿಂದೆಯೇ ಅಲ್ಲಿಗೆ ಸ್ಥಳಾಂತರ ಮಾಡಲು ಶಾಸಕ ಸಾ.ರಾ ಮಹೇಶ್‌ ಆದೇಶ ಮಾಡಿದ್ದರೂ ಅಧಿಕಾರಿಗಳು ಶುಭಗಳಿಗೆ ಹುಡುಕುತ್ತಿದ್ದಾರೇನೋ ಎಂಬಂತಾಗಿದೆ. ಇಲ್ಲಿಗೆ ಮಕ್ಕಳನ್ನು ದಾಖಲು ಮಾಡಿದ ಪೋಷಕರು ಅಲ್ಲಿನ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಇಲ್ಲ ಮಕ್ಕಳನ್ನು ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದು ಅಧಿಕಾರಿಗಳು ಮಾತ್ರ ಇಂದು-ನಾಳೆ ಎಂದು ಕಾಲತಳ್ಳುತ್ತಿದ್ದಾರೆ.

ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಕೋಟ್ಯಂತರ ರೂ.ಗಳನ್ನು ಸುರಿಯುತ್ತಿದ್ದರೂ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ಬಡಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಯಲ್ಲಿ ಕಲಿಕೆ ನೀಡಲು ಸಾಧ್ಯವಾಗದಿ ರುವುದಕ್ಕೆ ಇದು ಸಾಕ್ಷಿಯಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ವಸತಿ ನಿಲಯ ಸ್ಥಳಾಂತರಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ಇನ್ನೊಂದು ವಾರದೊಳಗೆ ಅಂಬೇಡ್ಕರ್‌ ವಸತಿ ನಿಲಯದ ಮಕ್ಕಳನ್ನು ಸ್ಥಳಾಂತರ ಮಾಡಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದ ತಡವಾಗಿದ್ದು ಆದಷ್ಟು ಬೇಗ ಮಕ್ಕಳಿಗೆ ಉತ್ತಮ ಕಟ್ಟಡ ಸಿಗಲಿದೆ.
● ಅಶೋಕ್‌, ಸಿಡಿಪಿಒ,
ಸಮಾಜ ಕಲ್ಯಾಣ ಇಲಾಖೆ

ಸದ್ಯ ಈ ಕಟ್ಟಡ ನಮಗೆ ತಾತ್ಕಾಲಿಕವಾಗಿ ರುವುದರಿಂದ ಕೆಲವು ತೊಂದರೆಗಳಿದ್ದು ಸಕ್ಕರೆ ಗ್ರಾಮದಲ್ಲಿ ನಿರ್ಮಿಸಿರುವ ಮೊರಾರ್ಜಿ ವಸತಿ ಶಾಲೆಯ ಕಟ್ಟಡದಲ್ಲಿ ನಮ್ಮ ಮಕ್ಕಳಿಗಾಗಿ ಉತ್ತಮ ಕಟ್ಟಡ ನಿರ್ಮಾಣ ವಾಗಿದ್ದು ಸದ್ಯದಲ್ಲಿಯೇ ಸ್ಥಳಾಂತರ ಮಾಡಲಾಗುವುದು.
● ಸುರೇಶ, ಪ್ರಾಂಶುಪಾಲರು, ಅಂಬೇಡ್ಕರ್‌
ವಸತಿ ಶಾಲೆ, ಹೊಸೂರು

ಆನಂದ್‌ ಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next