Advertisement

ದೆಹಲಿ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಜೀವನ ಭದ್ರತೆ ; ಕೆ.ದಿವಾಕರ್ ಆಗ್ರಹ

03:16 PM Jul 03, 2022 | sudhir |

ಸಾಗರ : ನಗರಸಭೆಯಲ್ಲಿ ಪೌರಸೇವೆ ಮಾಡುತ್ತಿರುವ ನೇರಪಾವತಿ ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ವಿಭಾಗದ ನೌಕರರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಕೆ.ದಿವಾಕರ್ ಪ್ರಕಟಿಸಿದರು.

Advertisement

ಇಲ್ಲಿನ ನಗರಸಭೆ ಆವರಣದಲ್ಲಿ ನೌಕರಿ ಖಾಯಂಗೊಳಿಸಲು ಒತ್ತಾಯಿಸಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಮೂರನೇ ದಿನವಾದ ಭಾನುವಾರ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ನರೇಂದ್ರ ಮೋದಿಯವರ ಆಡಳಿತದ ಆರಂಭದ ದಿನದಲ್ಲಿ ಅವರು ಪೊರಕೆಯನ್ನು ಹಿಡಿದು ಸ್ವಚ್ಛ ಭಾರತ್ ಎಂದು ಹೇಳಿದರು. ಆದರೆ ದಿನನಿತ್ಯವೂ ನಮ್ಮೂರನ್ನು ಸ್ವಚ್ಛ ಮಾಡುವ ನೌಕರರ ಬಗ್ಗೆ ನಿರ್ಲಕ್ಷ ಮಾಡಿರುವುದು ವಿಪರ್ಯಾಸ. ಪುರಸಭೆಯ ಸಂದರ್ಭದಲ್ಲಿ ನೇಮಕವಾಗಿ ೨೫ ವರ್ಷ ಕಳೆದರೂ ಅವರನ್ನು ಖಾಯಂಗೊಳಿಸಿಲ್ಲ. ಅದರ ಬದಲು ಖಾಸಗೀಕರಣವನ್ನು ಮಾಡಿ ಗುತ್ತಿಗೆದಾರನಿಗೆ ನೌಕರರ ನೇಮಕಕ್ಕೆ ಟೆಂಡರ್ ಕರೆದು ಜೀತ ಪದ್ಧತಿಯಂತೆ ದುಡಿಸಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಮೋದಿಯವರು ಪ್ರಚಾರಕ್ಕಾಗಿ ಕಾಶಿಯಲ್ಲಿ ಪೌರ ಕಾರ್ಮಿಕನ ಪಾದಪೂಜೆಯನ್ನು ಮಾಡುತ್ತಾರೆ. ಆದರೆ ಅವನ ನಿಜವಾದ ಜೀವನ ಭದ್ರತೆಯ ಬಗ್ಗೆ ಗಮನಿಸಲಿಲ್ಲ. ಬಿಜೆಪಿ ಪಕ್ಷ ಕೇವಲ ಗಿಮಿಕ್ ರಾಜಕಾರಣ ಮಾಡುತ್ತಾ ಹಿಂದುಳಿದ ವರ್ಗ, ದೀನ ದಲಿತರು, ಪೌರ ಕಾರ್ಮಿಕರಿಗೆ ಅನ್ಯಾಯವನ್ನು ಮಾಡುತ್ತಿದೆ. ಈ ಮುಷ್ಕರದ ಬಗ್ಗೆ ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸದೆ ಹೋದರೆ ಮುಂದೆ ರಾಜ್ಯವೇ ಕೊಳೆತು ನಾರುವುದರಲ್ಲಿ ಸಂಶಯವಿಲ್ಲ ಎಂದರು.

ಇದನ್ನೂ ಓದಿ : ಯುಪಿ: ಹನುಮಾನ್ ದೇವಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

Advertisement

ಸ್ವಚ್ಛ ಭಾರತ್ ಹೆಸರಿನಲ್ಲಿ ಹಣವನ್ನು ಮಾಡುವ ಬಿಜೆಪಿ ಸರ್ಕಾರ ಅದರ ಬದಲು ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಅವರ ಜೀವನ ಭದ್ರತೆಯನ್ನು ಕಲ್ಪಿಸಲಿ. ಅದನ್ನು ಬಿಟ್ಟು ಕಾರ್ಮಿಕರು ಮುಷ್ಕರವನ್ನು ಮಾಡುತ್ತಿದ್ದಾರೆ ಎಂದು ಅವರನ್ನು ಕೆಲಸದಿಂದ ತೆಗೆದು ಹಾಕುವುದು, ಅವರ ಮೇಲೆ ಶೋಷಣೆಯನ್ನು ಮಾಡಿದರೆ ಕಾರ್ಮಿಕರ ಪರವಾಗಿ ನಮ್ಮ ಪಕ್ಷದಿಂದ ಹೈಕೋರ್ಟ್‌ನಲ್ಲಿ ಸರ್ಕಾರದ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ತಮ್ಮ ನೌಕರರ ಬಗ್ಗೆ ಭಾಷಣ ಬಿಗಿದ ಕೂಡಲೇ ಅವರ ಬೇಡಿಕೆಯನ್ನು ಈಡೇರಿಸುವ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸಮಯವನ್ನು ತೆಗೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವಾಗ ವಿದ್ಯಾವಂತರು ಸಹ ಪೌರಕಾರ್ಮಿಕರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇಂತವರನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷದ ಸರ್ಕಾರ ಪೌರ ಕಾರ್ಮಿಕರಿಗೆ ವಿವಿಧ ರೀತಿಯಲ್ಲಿ ಸೌಲಭ್ಯವನ್ನು ನೀಡಿ ಅವರನ್ನು ಸಮಾಜದಲ್ಲಿ ಅತ್ಯುನ್ನತವಾಗಿ ನೋಡಿಕೊಳ್ಳುತ್ತಿದೆ. ದೆಹಲಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಸಹ ಬಿಜೆಪಿ ಪೌರ ಕಾರ್ಮಿಕರಿಗೆ ವಿವಿಧ ಸೌಲಭ್ಯ ಹಾಗೂ ಖಾಯಂಗೊಳಿಸುವ ನಿರ್ಧಾರ ಪ್ರಕಟಿಸಿ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಮ್‌ಆದ್ಮಿ ಪಕ್ಷದ ತಾಲೂಕು ಸಂಚಾಲಕ ಅಮೃತರಾಸ್, ವಿಜಯಕುಮಾರ್ ಹಾಗೂ ನೇರಪಾವತಿ ಹೊರಗುತ್ತಿಗೆ ಸಂಘದ ಪ್ರಮುಖರಾದ ಕಾಮರಾಜ್, ಎಂ.ನಾಗರಾಜ್, ತಂಗರಾಜ್, ದೇವರಾಜ್, ನಾಗರಾಜ್ ವಿ., ವೀರಾ ಆರ್., ಸಿ.ಮೂರ್ತಿ, ರಾಜೇಂದ್ರ, ಮಹೇಶ್ ಎಂ., ತಂಗರಾಜ್, ಸಿ.ಮಣಿಕಂಠ, ರಾಘವೇಂದ್ರ, ಸತೀಶ್, ಮುರುಗೇಶ್, ಆನಂದ್ ಬಾಳೆಕೊಪ್ಪ, ಸುರೇಶ್, ಚೆಲುವಿ, ಸುಲೋಚನಾ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next