Advertisement

ಬಡ ಹೆಣ್ಣುಮಕ್ಕಳ ಮನೆಗೆ ಮೂಲ ಸೌಕರ್ಯ

10:50 PM Sep 23, 2019 | sudhir |

ಕಲ್ಲುಗುಡ್ಡೆ: ನೆಲ್ಯಾಡಿ ಹೊಸಮಜಲು ಅಶ್ವತ್ಥ ಗೆಳೆಯರ ಬಳಗ ಇಚ್ಲಂಪಾಡಿಯ ಬಡ ಹೆಣ್ಣುಮಕ್ಕಳ ಕುಟುಂಬವೊಂದಕ್ಕೆ ಮನೆಯ ಮೂಲಸೌಕರ್ಯ ಒದಗಿಸುವ ಮೂಲಕ ಮಾದರಿ ಕಾರ್ಯ ಮಾಡಿದೆ.

Advertisement

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕಾಳಗುಡ್ಡೆಯಲ್ಲಿ ವಾಸ್ತವ್ಯ ಇರುವ ಸಾರಿಕಾ ಹಾಗೂ ರೋಹಿಣಿ ಎಂಬ ಹೆಣ್ಣು ಮಕ್ಕಳು ತಂದೆ ಬಾಳಪ್ಪ ಪೂಜಾರಿ, ತಾಯಿ ಬೇಬಿ ಹಾಗೂ ಸಹೋದರ ನವೀನ್‌ ಅವರನ್ನು ಕಳೆದುಕೊಂಡಿದ್ದು. ಇದೀಗ ಈ ಹೆಣ್ಣು ಮಕ್ಕಳು ದಿನಗೂಲಿ ಮೂಲಕ ಮನೆ ಖರ್ಚು-ವೆಚ್ಚ ನೋಡಿ ಕೊಳ್ಳುತ್ತಿದ್ದಾರೆ. ತಂದೆ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿದ್ದರೂ ಗೃಹಪ್ರವೇಶ ನಡೆದಿಲ್ಲ.

ಮನೆಗೆ ಬೇಕಾದ ಮೂಲ ಸೌಕರ್ಯ ಪಡೆಯಲು ಸಾಧ್ಯವಾಗದೆ, ಇವರು ಹೊಸಮಜಲು ಅಶ್ವತ್ಥ ಗೆಳೆಯರ ಬಳಗಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಂಘಟನೆ ಪದಾಧಿಕಾರಿಗಳು ಮನೆಗೆ, ವಿದ್ಯುದೀಕರಣ, ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸಮಾಜಮುಖೀ ಕೆಲಸ
ಮೂಲಸೌಕರ್ಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ, ಎಪಿಎಂಸಿ ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಬಾನಜಾಲು ಮಾತನಾಡಿ, ನಮ್ಮ ಬಳಗದಿಂದ ಅನೇಕ ಸಮಾಜಮುಖೀ ಕೆಲಸ ಮಾಡಲಾಗುತ್ತಿದ್ದು, ಬಡ ಹೆಣ್ಣು ಮಕ್ಕಳ ಮನೆಗೆ ಸಂಘಟನೆಯ ಸದಸ್ಯರೇ ಸೇರಿಕೊಂಡು ವಿದ್ಯುತ್‌ ಸಂಪರ್ಕ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವ ಮೂಲಕ ಹೆಣ್ಣು ಮಕ್ಕಳ ಬಾಳನ್ನು ಬೆಳಗಿಸಿದ್ದಾರೆ ಎಂದರು.

ಗೃಹಪ್ರವೇಶಕ್ಕೆ ವ್ಯವಸ್ಥೆ
ಪುತ್ತೂರು ಪಿಎಲ್‌ಡಿ ಬ್ಯಾಂಕ್‌ ಕೋಶಾಧಿಕಾರಿ ಭಾಸ್ಕರ ಎಸ್‌. ಗೌಡ ಮಾತನಾಡಿ, ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಕಳೆದುಕೊಂಡಿರುವ ಹೆಣ್ಣು ಮಕ್ಕಳ ಮನೆಗೆ ಅಶ್ವತ್ಥ ಗೆಳೆಯರ ಬಳಗದ ವತಿಯಿಂದ ಮೂಲಸೌಕರ್ಯವನ್ನು ಸ್ವಂತ ಹಣದಿಂದ ಒದಗಿಸಲಾಗಿದ್ದು, ಮುಂದೆ ಮನೆಗೆ ಸುಣ್ಣ-ಬಣ್ಣದ ವ್ಯವಸ್ಥೆ ಮಾಡಿ ಗೃಹ ಪ್ರವೇಶವನ್ನು ಇಚ್ಲಂಪಾಡಿ ಬಿಜೆಪಿ ಗ್ರಾಮ ಸಮಿತಿಯಿಂದ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

Advertisement

ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಗೆಳೆಯರ ಬಳಗಕ್ಕೆ ಹೆಣ್ಣು ಮಕ್ಕಳು ಮಾಡಿದ ಮನವಿಗೆ ಸ್ಪಂದಿಸಿ, ಮನೆಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಿ, ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಗೆಳೆಯರ ಬಳಗದ ವತಿಯಿಂದ ಮುಂದೆಯೂ ಸಮಾಜಮುಖೀ ಕೆಲಸ – ಕಾರ್ಯಗಳು ಮುಂದುವರಿಯಲಿವೆ ಎಂದರು.

ಕೌಕ್ರಾಡಿ ಗ್ರಾ.ಪಂ. ಸದಸ್ಯ ಶ್ರೀನಿವಾಸ್‌ ಪೂಜಾರಿ ನಿಡ್ಯಡ್ಕ ಮಾತನಾಡಿ, ಸರಕಾರದ ದೀನ್‌ ದಯಾಳ್‌ ಯೋಜನೆಯಲ್ಲಿ ಈ ಮನೆಗೆ ವಿದ್ಯುತ್‌ ಸಂಪರ್ಕಕ್ಕೆ ಆರೇಳು ಕಂಬ ಹಾಕಿ ವ್ಯವಸ್ಥೆ ಮಾಡಿದ್ದು, ಇದೀಗ ಅಶ್ವತ್ಥ ಗೆಳಯರ ಬಳಗದ ಸಹಕಾರದೊಂದಿಗೆ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಶೌಚಾಲಯದ ವ್ಯವಸ್ಥೆ ಮಾಡಿಲಾಗಿದೆ ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್‌, ಉಪಾಧ್ಯಕ್ಷ ಶ್ರವನ್‌ ಕುಮಾರ್‌, ಸದಸ್ಯರಾದ ಮಂಜುನಾಥ್‌, ಸೋನಿತ್‌, ಪದ್ಮೇಶ್‌, ವಂದನ್‌, ಯಶವಂತ್‌, ಚೇತನ್‌, ಶರತ್‌ ಕಳಾಯಿ, ಗಣೇಶ್‌, ಮಿಥುನ್‌, ಸಂಪತ್‌, ನವೀನ್‌, ವೆಂಕಪ್ಪ ಗೌಡ, ಸುಧೀರ್‌ ಉಪಸ್ಥಿತರಿದ್ದರು.

ಮುಂದೆಯೂ ಸಹಕಾರ
ಅನಾರೋಗ್ಯದಿಂದ ಹೆತ್ತವರು, ಸಹೋದ ರನ್ನು ಕಳೆದುಕೊಂಡ ಸಾರಿಕಾ ಹಾಗೂ ರೋಹಿಣಿ ಅವರು ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾ.ಪಂ.ನಿಂದ ಮಂಜೂರಾದ ಮನೆ ನಿರ್ಮಿಸಿದ್ದು, ಮೂಲ ಸೌಕರ್ಯಕ್ಕಾಗಿ ಮಾಡಿದ ಮನವಿಗೆ ಅಶ್ವತ್ಥ ಗೆಳೆಯರ ಬಳಗದಿಂದ ಮನೆಗೆ ವಿದ್ಯುತ್‌ ವೈರಿಂಗ್‌, ಸಂಪರ್ಕ, ಶೌಚಾಲಯ, ಸ್ನಾನ ಗೃಹ ನಿರ್ಮಿಸಿಕೊಟ್ಟಿದ್ದು, ಮುಂದೆಯೂ ಸಹಕಾರ ನೀಡ ಲಾಗುವುದು.
-ಬಾಲಕೃಷ್ಣ ಬಾನಜಾಲು, ಗೌರವಾಧ್ಯಕ್ಷ, ಅಶ್ವತ್ಥ ಗೆಳೆಯರ ಬಳಗ

Advertisement

Udayavani is now on Telegram. Click here to join our channel and stay updated with the latest news.

Next