ಗದಗ: ಏಷ್ಯಾ ಖಂಡದ ಹೆಮ್ಮೆ, ಪ್ರಪ್ರಥಮ ಸಹಕಾರಿ ಬ್ಯಾಂಕ್ ಸ್ಥಾಪಿತ ಗ್ರಾಮ ಇಂದು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲೂ 24 ವರ್ಷಗಳ ಹಳೆಯ ಗ್ರಾಮ ಪಂಚಾಯತಿ ಕಾರ್ಯಾಲಯ ಶಿಥಿಲಾವಸ್ಥೆಗೆ ತಲುಪಿದ್ದು, ಕಚೇರಿಯ ಒಳಗಡೆ ತೆರಳಲು ಸಾರ್ವಜನಿಕರು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು… ಪ್ರಪ್ರಥಮ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಮೂಲಕ ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾಗಿದ್ದ ಜಿಲ್ಲೆಯ ಕಣಗಿನಹಾಳ ಗ್ರಾಮ ಅಕ್ಷರಶಃ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಅಭಿವೃದ್ಧಿಯ ತಾಣವಾಗಬೇಕಿದ್ದ ಗ್ರಾಮ ಶಾಸಕರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಗ್ರಾಮವಾದಂತಾಗಿದೆ.
1998ರಲ್ಲಿ ನಿರ್ಮಾಣಗೊಂಡಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಇನ್ನೇನು ನೆಲ ಕಚ್ಚುವ ಸ್ಥಿತಿ ಬಂದೊದಗಿದೆ. ಗ್ರಾಮ ಪಂಚಾಯತಿ ಕಟ್ಟಡದ ಬೀಮ್‌ಗಳು ಬಿರುಕು ಬಿಟ್ಟಿದ್ದು, ಸೀಲಿಂಗ್‌ನಿಂದ ಸಿಮೆಂಟ್ ಕಳಚುತ್ತಿದೆ. ಮಳೆ ಬಂದರಂತೂ ಎಲ್ಲೆಂದರಲ್ಲಿ ಸೋರುತ್ತ ನೀರೆಲ್ಲ ಕಚೇರಿ ತುಂಬ ಹರಿದುಬಿಡುತ್ತದೆ. ಇದರಿಂದ ಈಗಾಗಲೇ ಗ್ರಾಮದ ಕೆಲ ಕಡತಗಳು, ಕಂಪ್ಯೂಟರ್ ಹಾಗೂ ಇತರೆ ದಾಖಲಾತಿಗಳು ಹಾಳಾಗಿವೆ.
ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರು ಕಚೇರಿಯೊಳಗೆ ಹೋಗಲು ಭಯಪಡುವಂತಾಗಿದೆ. ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ, ಯಾವಾಗ ಯಾರ ಮೇಲೆ ಬೀಳುತ್ತದೆ ಎಂಬ ಭಯ ಕಾಡುತ್ತಿದೆ.
Related Articles
ಕಣಗಿನಹಾಳ ಗ್ರಾಮ ಪಂಚಾಯಿತಿ 11 ಸದಸ್ಯರನ್ನು ಒಳಗೊಂಡಿದೆ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್, ವಾಟರ್‌ಮನ್ ಸೇರಿ ಹತ್ತಾರು ಜನ ಸಿಬ್ಬಂದಿ ಕೆಲಸ ಮಾಡುತ್ತಾರೆ. ಗ್ರಾಮ ಪಂಚಾಯಿತಿಗೆ ಸಮರ್ಪಕ ಅನುದಾನ ದೊರೆಯುತ್ತಿಲ್ಲ. ಗ್ರಾಮದಲ್ಲಿ ಸರಿಯಾಗಿ ಕರ ವಸೂಲಾತಿಯಾಗುತ್ತಿಲ್ಲ. ಸಿಬ್ಬಂದಿ ವೇತನ ತಿಂಗಳಿಗೆ 50 ಸಾವಿರ ರೂ. ದಾಟುತ್ತದೆ. ಹೀಗಾಗಿ, ಗ್ರಾಪಂ ನೂತನ ಕಟ್ಟಡ ಸೇರಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕೋರಿ.
ಗ್ರಾಮದಲ್ಲಿ ಬೀದಿ ದೀಪ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಸೇರಿ ಮೂಲ ಸೌಲಭ್ಯಗಳ ಕೊರತೆಯೂ ಕಾಡುತ್ತಿದೆ. ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾದರೆ, ಬೀದಿ ದೀಪಗಳು ಬೆಳಕು ನೀಡುವುದೇ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕವೂ ಬಂದ್ ಆಗಿದೆ. ಇನ್ನು ಬೆಟಗೇರಿಯ ಶರಣಬಸವೇಶ್ವರ ನಗರದಿಂದ ಕಣಗಿನಹಾಳ ಗ್ರಾಮದವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಸೇರಿ ನೂತನ ಕಟ್ಟಡ ಕಾಮಗಾರಿ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿ ಸ್ಥಳೀಯ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾವಾದ್ರೂ ಏನು ಮಾಡೋಣ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಕಳೆದ ನಾಲ್ಕು ವರ್ಷಗಳಿಂದ ಗ್ರಾಪಂ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಬೀಮ್‌ಗಳು ಬಿರುಕು ಬಿಟ್ಟಿದ್ದು, ಕೆಲವೊಂದು ಸಾರಿ ಸೀಲಿಂಗ್ ಕತ್ತರಿಸಿಕೊಂಡು ಕೆಳಗೆ ಬೀಳುತ್ತಿದೆ. ಆದ್ದರಿಂದ, ಜೀವ ಹಾನಿಯಾಗುವುದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗ್ರಾಪಂ ನೂತನ ಕಟ್ಟಡ ಮಂಜೂರು ಮಾಡಿ, ಶೀಘ್ರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕು. –ಗುರುರಾಜ ಹಿರೇಮಠ, ಗ್ರಾಮಸ್ಥರು
ಕಣಗಿನಹಾಳ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಂಬಂಧಪಟ್ಟವರು ಕೂಡಲೇ ಗ್ರಾಮದ ಸಮಗ್ರ ಅಭಿವೃದ್ಧಿಗೆ ಚಿತ್ತ ಹರಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವುದು ಒಳಿತು. –ಮಲ್ಲಪ್ಪ ಕೋರಿ, ಅಧ್ಯಕ್ಷರು, ಕಣಗಿನಹಾಳ ಗ್ರಾಪಂ
ಅರುಣಕುಮಾರ ಹಿರೇಮಠ