ಗದಗ: ಇತ್ತೀಚೆಗೆ ಸುರಿದ ಸತತ ಮಳೆಯಿಂದ ಈ ಊರಿನ ಕೆರೆ ಮೈದುಂಬಿದೆ. ಆದರೆ ಈ ಊರಿನ ಜನರಿಗೆ ಈ ವಿಷಯ ಸಂಭ್ರಮಕ್ಕಿಂತ ಸಮಸ್ಯೆಯಾಗಿಯೇ ಪರಿಣಮಿಸಿದೆ.
ಹೌದು. ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಬೃಹತ್ ಕೆರೆ ಜೀವ ಜಲದಿಂದ ಮೈದುಂಬಿದೆ. ಸುಮಾರು 350 ಅಡಿ ಬೋರ್‌ವೆಲ್ ಕೊರೆದರೂ ಬಾರದ ನೀರು ಈಗ ಮನೆಯಂಗಳದಲ್ಲೇ ಜಿನುಗುತ್ತಿದ್ದು, ಸಮಸ್ಯೆ ತಂದೊಡ್ಡಿದೆ, ಹೀಗಾಗಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಕೆರೆ ನೀರು ಖಾಲಿ ಮಾಡುವಂತೆ ಗ್ರಾಪಂ ಆಡಳಿತ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.
ಬಸಿ ನೀರಿನ ಸಮಸ್ಯೆ: ಹಲವು ದಶಕಗಳ ಬಳಿಕ ಕೆರೆ ತುಂಬಿದ್ದರೂ ಗ್ರಾಮಸ್ಥರಿಗೆ ಸಂಭ್ರಮವಿಲ್ಲ. ಕಳೆದ ಆಗಸ್ಟ್‌ನಲ್ಲಿ ಉಂಟಾಗಿರುವ ಅತಿವೃಷ್ಟಿಯೊಂದಿಗೆ ಕೆರೆ ಭರ್ತಿಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶ ವಿಪರೀತ ಹೆಚ್ಚಾಗಿದ್ದರಿಂದ ಉಭಯ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿದ್ದರಿಂದ ವಿವಿಧ ಓಣಿಗಳ ತಗ್ಗು ಪ್ರದೇಶದ ಮನೆಗಳಲ್ಲಿ ಬಸಿ ನೀರಿನ ಸಮಸ್ಯೆ ಶುರುವಾಗಿದೆ. ಮಳೆಗಾಲ ಬಳಿಕವೂ ಬಸಿ ನೀರಿನ ಸಮಸ್ಯೆ ಮುಂದುವರಿದಿದೆ. ಮನೆ ಹಾಗೂ ದನದ ಕೊಟ್ಟಿಗೆಯ ಗುನ್ನೇವುಗಳಲ್ಲಿ ಹೆಚ್ಚಿನ ನೀರು ಜಿನುಗುತ್ತದೆ. ಬಸಿ ನೀರು ಖಾಲಿ ಮಾಡಿದ ಕೆಲವೇ ಸಮಯದಲ್ಲಿ ಮತ್ತೆ ಅಷ್ಟೇ ಪ್ರಮಾಣದ ನೀರು ಸಂಗ್ರಹವಾಗುತ್ತಿರುವುದು ಜನರ ನಿದ್ದೆಗೆಡಿಸಿದೆ.
ಬೋರ್‌ವೆಲ್ ಬೀಳದ ಊರು: ಜಿಲ್ಲೆಯಲ್ಲಿ ಎಲ್ಲ ಹಳ್ಳಿಗಳಿಗೆ ನದಿ ನೀರು ಪೂರೈಸುವ ಡಿಬಿಒಟಿ ಯೋಜನೆ ಅನುಷ್ಠಾನಕ್ಕೂ ಮುನ್ನ ಅಂತೂರ-ಬೆಂತೂರ ಗ್ರಾಮದಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿತ್ತು. ಅದರಲ್ಲೂ ಬೇಸಿಗೆಯಲ್ಲಿ ಸುಮಾರು ನಾಲ್ಕೈದು ಕಿ.ಮೀ. ದೂರದ ಅಕ್ಕಪಕ್ಕದ ಊರುಗಳಿಂದ ಸೈಕಲ್, ದ್ವಿಚಕ್ರ ವಾಹನಗಳ ಮೇಲೆ ನೀರು ತರುವುದು ಅನಿವಾರ್ಯವಾಗಿತ್ತು. ಗ್ರಾಮದಲ್ಲಿ 350 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಗ್ರಾಪಂಆಡಳಿತ ಹಾಗೂ ಖಾಸಗಿ ವ್ಯಕ್ತಿಗಳು ಹಲವೆಡೆ ಬೋರ್ ಕೊರೆಯುವ ಪ್ರಯತ್ನ ನಡೆಸಿದ್ದರೂ ಫಲಿಸಿರಲಿಲ್ಲ. ಹೀಗಾಗಿ, ಅಂತೂರ್ ಗ್ರಾಪಂ ವತಿಯಿಂದ ಸುಮಾರು 3 ಕಿ.ಮೀ. ದೂರದ ನೀಲಗುಂದ ಸರಹದ್ದಿನಲ್ಲಿ ಬೋರ್ ವೆಲ್ ಕೊರೆಯಿಸಿ ಅಂತೂರ-ಬೆಂತೂರ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಉಂಟಾದ ಅತಿವೃಷ್ಟಿ ಮತ್ತು ಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಅಂತರ್ಜಲ ಗಣನೀಯವಾಗಿ ಹೆಚ್ಚಿದೆ.
ಗ್ರಾಮದಲ್ಲಿ ಮೂರ್‍ನಾಲ್ಕು ಅಡಿ ತಗ್ಗು ತೋಡಿದರೂ ನೀರು ಜಿನುಗುತ್ತಿದೆ. ಕೆರೆ ಸುತ್ತಲಿನ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಮನೆ ತೊರೆದು ಬೇರೆಡೆ ಬಾಡಿಗೆ ಪಡೆದಿದ್ದಾರೆ. ಇನ್ನು ಕೆಲ ಮನೆಗಳು ಬಿರುಕು ಬಿಟ್ಟಿವೆ. ಕೆರೆ ಖಾಲಿ ಮಾಡದ ಹೊರತು ಬೇರೆ ದಾರಿಯಿಲ್ಲ ಎಂಬುದು ಗ್ರಾಮಸ್ಥರ ಮಾತು.
ಗ್ರಾಮದ ಕೆರೆಯಿಂದ ಸಮಸ್ಯೆ ಉಂಟಾಗುತ್ತಿದ್ದು, ಕೆರೆ ಖಾಲಿ ಮಾಡಬೇಕೆಂದು ಗ್ರಾಮಸ್ಥರ ಮನವಿ ಮೇರೆಗೆ ಕಂದಾಯ ಇಲಾಖೆ, ಜಿಪಂ ಹಾಗೂ ಡಿಸಿಗೆ ಗ್ರಾಪಂ ವತಿ ಯಿಂದ ಪತ್ರ ಬರೆಯಲಾಗಿದೆ. ಅದನ್ನು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ನಿರ್ಧಾರ ಕೈಗೊಂಡಿಲ್ಲ.
–ಖೇಮಸಿಂಗ್ ಡಿ.ರಾಠೊಡ್, ಅಂತೂರ್ ಗ್ರಾಪಂ ಆಡಳಿತಾಧಿಕಾರಿ
ಮಳೆಗಾಲ ಮುಗಿದು ಎರಡ್ಮೂರು ತಿಂಗಳು ಕಳೆದರೂ ಗ್ರಾಮದಲ್ಲಿ ಬಸಿ ನೀರಿನ ಸಮಸ್ಯೆ ಕಡಿಮೆಯಾಗುತ್ತಿಲ್ಲ. ಇದರಿಂದ ಮುಂದೆ ಸಾಂಕ್ರಾಮಿಕ ಕಾಯಿಲೆಗಳು ಎದುರಾಗಬಹುದು. ಕೆರೆ ನೀರು ಹೊರಗೆ ಹರಿಸುವಂತೆ ಕೋರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
–ಅಮಾಗಿ, ಗ್ರಾಮದ ಹಿರಿಯರು
–ವೀರೇಂದ್ರ ನಾಗಲದಿನ್ನಿ