Advertisement

ಬಶೀರ್‌ ಕೊಂಚ ಚೇತರಿಕೆ; ನಾಲ್ವರು ವಶಕ್ಕೆ

09:29 AM Jan 06, 2018 | Team Udayavani |

ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಬುಧವಾರ ರಾತ್ರಿ ಮಾರಕಾಯುಧಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಆಕಾಶ ಭವನದ ಬಶೀರ್‌ (48) ಅವರ ಆರೋಗ್ಯ ಸ್ಥಿತಿ ತುಸು ಚೇತರಿಕೆ ಕಂಡಿದ್ದು, ಈ ಘಟನೆ ಕುರಿತಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಎಲ್ಲ ನಾಲ್ವರು ಆರೋಪಿಗಳು ಕ್ರಿಮಿನಲ್‌ ಹಿನ್ನೆಲೆ ಯವರಾಗಿದ್ದು, ಕಳೆದ ಜುಲೈ ತಿಂಗಳಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಡ್ಯಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ನಡೆದ ಹಲ್ಲೆ ಕೃತ್ಯದಲ್ಲಿ ಭಾಗಿಯಾದವರು ಎನ್ನಲಾಗಿದೆ.

ವಶಕ್ಕೆ ಪಡೆದವರಲ್ಲಿ ಇಬ್ಬರು ಪಡೀಲ್‌ನವರು, ಒಬ್ಬ ಮಂಜೇಶ್ವರ ಹಾಗೂ ಇನ್ನೋರ್ವ ಕಾಸರಗೋಡಿನವರು. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ನಡೆದಿದ್ದು, ಈ ಕೃತ್ಯಕ್ಕೆ ಪ್ರತೀಕಾರವಾಗಿ ಆರೋಪಿಗಳು ಅದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ಚಿಕನ್‌ ಟಿಕ್ಕಾ ಫಾಸ್ಟ್‌ ಫುಡ್‌ ಅಂಗಡಿ ನಡೆಸುತ್ತಿರುವ ಬಶೀರ್‌ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು ಎಂಬುದಾಗಿ ವಿಚಾರಣೆಯ ವೇಳೆ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಂಗಡಿ ಮುಚ್ಚುತ್ತಿದ್ದಾಗ ದಾಳಿ
ಆಕಾಶ ಭವನದ ಬಶೀರ್‌ 25 ವರ್ಷ ಗಲ್ಫ್ ರಾಷ್ಟ್ರಗಳಲ್ಲಿ ದುಡಿದು, ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದರು. ಕಳೆದ ವರ್ಷ ಗಲ್ಫ್ ನೌಕರಿ ತೊರೆದು ಬಂದಿದ್ದ ಅವರು ಸ್ವಂತ ಊರು ಮಂಗಳೂರಿನ ಆಕಾಶಭವನದಲ್ಲಿ ನೆಲೆಸಿದ್ದರು. ಈ ಸಂದರ್ಭ ಕೊಟ್ಟಾರ ಚೌಕಿಯಲ್ಲಿ ಚಿಕನ್‌ ಟಿಕ್ಕಾ ಫಾಸ್ಟ್‌ಫುಡ್‌ ಸ್ಟಾಲ್‌ ನಡೆಸುತ್ತಿದ್ದ ಗೆಳೆಯನ ಜತೆ ಪಾಲುದಾರಿಕೆಯಲ್ಲಿ ಮಳಿಗೆಯನ್ನು ಮತ್ತಷ್ಟು ಉತ್ತಮವಾಗಿ ಮುನ್ನಡೆಸಲು ಸಹಕರಿಸಿದ್ದರು. ಅವರ ಗೆಳೆಯ ಸಂಜೆ ಹೊತ್ತು ಬೇಗನೆ ಮನೆಗೆ ಹೋಗುತ್ತಿದ್ದರೆ, ಬಶೀರ್‌ ರಾತ್ರಿ 10 ಗಂಟೆ ವರೆಗೆ ವ್ಯಾಪಾರ ಮಾಡಿ ಬಳಿಕ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದರು.

ಬುಧವಾರ ರಾತ್ರಿ 9.50ರ ವೇಳೆಗೆ ಬಶೀರ್‌ ಅವರು ಅಂಗಡಿಯನ್ನು ಮುಚ್ಚಲು ನಿರ್ಧರಿಸಿ ದಿನದ ಗಳಿಕೆಯ ಹಣ ಎಣಿಕೆ ಮಾಡುತ್ತಿದ್ದಾಗ 3 ಬೈಕುಗಳಲ್ಲಿ ಸುಮಾರು 7 ಮಂದಿ ಅಪರಿಚಿತರು ಅಂಗಡಿಯೊಳಗೆ ನುಗ್ಗಿ ಬಶೀರ್‌ ಅವರ ಮೇಲೆ ಮಾರಕಾಯುಧಗಳಿಂದ ಯದ್ವಾ ತದ್ವಾ ಕಡಿದು ಪರಾರಿಯಾಗಿದ್ದರು. ಬಶೀರ್‌ ಅವರು ರಸ್ತೆಗೆ ಓಡಿ ಸಹಾಯಕ್ಕಾಗಿ ಅಂಗಲಾಚಿದ್ದರು. ಬಹಳಷ್ಟು ಹೊತ್ತು ಅವರು ರಸ್ತೆ ಬದಿ ಬಿದ್ದಿದ್ದರು. ಕೆಲವು ಸಮಯದ ಬಳಿಕ ಆ ಮಾರ್ಗವಾಗಿ ಬಂದ ಆ್ಯಂಬುಲೆನ್ಸ್‌  ಚಾಲಕ ಶೇಖರ್‌ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಬಶೀರ್‌ ಅವರನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

Advertisement

ಭಯದಿಂದ ಅವಿತ ಕಾರ್ಮಿಕ
ದುಷ್ಕರ್ಮಿಗಳು ಅಂಗಡಿಯ ಒಳಗೆ ಬಂದು ಬಶೀರ್‌ ಅವರ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಅಂಗಡಿಯಲ್ಲಿ ಇಬ್ಬರು ಕೆಲಸಗಾರರು ಇದ್ದು, ಅವರಲ್ಲಿ ಒಬ್ಟಾತ ಅಡುಗೆ ಕೋಣೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದನು. ಇನ್ನೊಬ್ಬ ಭಯದಿಂದ ಹಿಂಬಾಗಿಲಿನಿಂದ ಓಡಿ ಅಂಗಡಿಯ ಹಿಂಬದಿ ಅವಿತುಕೊಂಡಿದ್ದನು. ಬಶೀರ್‌ ಅವರ ತಲೆ ಮತ್ತು ಕುತ್ತಿಗೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಿವರ್‌ ಮತ್ತು ಕಿಡ್ನಿಗೆ ಹಾನಿಯಾಗಿದೆ. ಮಧುಮೇಹ ಕಾಯಿಲೆ ಇರುವುದರಿಂದ ಚೇತರಿಕೆ ನಿಧಾನವಾಗಿದೆ.

ಬಶೀರ್‌ ಅಮಾಯಕ
ಬಶೀರ್‌ ಅಮಾಯಕರಾಗಿದ್ದು, ಯಾರ ತಂಟೆಗೂ ಹೋದವರಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿದ್ದರು. ಅವರ ಚಿಕನ್‌ ಟಿಕ್ಕಾ ಸ್ಟಾಲ್‌ನ ಗ್ರಾಹಕರಲ್ಲಿ ಬಹುಪಾಲು ಜನ ಹಿಂದೂಗಳೇ ಆಗಿದ್ದಾರೆ. ಬುಧವಾರ ರಾತ್ರಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ವ್ಯಕ್ತಿ ಕೂಡ ಹಿಂದೂ ಆಗಿದ್ದಾರೆ. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ದೀಪಕ್‌ ರಾವ್‌ ಕೊಲೆಯಾಗಿರುವ ವಿಷಯ ಬಶೀರ್‌ ಅವರಿಗೆ ತಿಳಿದಿದ್ದರೂ ತಾನು ಎಲ್ಲ ಸಮುದಾಯದವರ ಜತೆ ಚೆನ್ನಾಗಿದ್ದೇನೆ; ಯಾರೂ ಏನೂ ಮಾಡಲಾರರು ಎಂದು ಭಾವಿಸಿದ್ದರು ಎಂದು ಬಶೀರ್‌ ಅವರ ಕುಟುಂಬದ ಸದಸ್ಯ ಹಕೀಂ ಉದಯವಾಣಿಗೆ ತಿಳಿಸಿದ್ದಾರೆ.

ವೀಡಿಯೊ ವೈರಲ್‌ ಮಾಡದಂತೆ ಮನವಿ
ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿ ಗಳು ಬಶೀರ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಸಿಸಿಟಿವಿ ವೀಡಿಯೊ ಈಗ ಬಹಿರಂಗಗೊಂಡಿದ್ದು, ಅದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ಮೂರು ಬೈಕ್‌ಗಳಲ್ಲಿ ಏಳು ಮಂದಿ ದುಷ್ಕರ್ಮಿಗಳು ಬಂದು ಅಂಗಡಿಯ ಮುಂಭಾಗದಲ್ಲಿ ಬಶೀರ್‌ ಮೇಲೆ  ಮಾರಕಾಯುಧಗಳಿಂದ ದಾಳಿ ನಡೆಸುತ್ತಿರುವ ದೃಶ್ಯ ಸಮೀಪದ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಅದು ಈಗ ಬಹಿರಂಗಗೊಂಡಿದೆ. ಭೀಕರತೆ ಹಾಗೂ ಆತಂಕ ಹುಟ್ಟಿಸುವ ಈ ವೀಡಿಯೊ ಈಗ ವೈರಲ್‌ ಆಗುತ್ತಿದೆ. ಆದರೆ ಈ ವೀಡಿಯೊವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂದು ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ. ಜತೆಗೆ ಈ ವೀಡಿಯೊವನ್ನು ಕೆಲವು ಟಿವಿ ಮಾಧ್ಯಮ ಪ್ರಸಾರ ಮಾಡಿದ್ದು, ಅಂಥ ಮಾಧ್ಯಮದ ವಿರುದ್ಧ ಮಾಧ್ಯಮ ಮೇಲ್ವಿಚಾರಣಾ ಸಮಿತಿ ಮೂಲಕ ನೋಟಿಸ್‌ ಜಾರಿಗೊಳಿಸಿ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕೋಮು ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿರುವಾಗ ಈ ರೀತಿಯ ವೀಡಿಯೊಗಳನ್ನು ಪ್ರಸಾರ ಮಾಡಿ ಕಾನೂನು-ಸುವ್ಯವಸ್ಥೆಗೆ ಭಂಗ ಮಾಡುವುದಕ್ಕೆ ಪ್ರಚೋದನೆಯಾಗಬಹುದು ಎಂಬ ಕಾರಣಕ್ಕೆ ವೀಡಿಯೊ ಪ್ರಸಾರ ಅಥವಾ ಜಾಲ ತಾಣಗಳಲ್ಲಿ ಪಸರಿಸದಂತೆ ಜನತೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ವೀಡಿಯೊ ಸೋರಿಕೆ:  ತನಿಖೆ
ಮಂಗಳೂರು: ಸಿಸಿಟಿವಿಯಲ್ಲಿ ದಾಖಲಾಗಿರುವ ಬಶೀರ್‌ ಅವರ ಮೇಲಿನ ಹಲ್ಲೆ ದೃಶ್ಯ ಶುಕ್ರವಾರ ರಾಜ್ಯದ ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಇದು ಸೋರಿಕೆಯಾದ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರಗಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಳವಡಿಸಿದ ಸಿಸಿ ಕೆಮರಾದಲ್ಲಿ  ಹಲ್ಲೆ ದೃಶ್ಯ ಸೆರೆಯಾಗಿತ್ತು. ಗುರುವಾರ ಮಧ್ಯಾಹ್ನ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದರು. ಈ ಸಿಸಿಟಿವಿ ಫೂಟೇಜ್‌ ಪೊಲೀಸ್‌ ಇಲಾಖೆ ವಶಕ್ಕೆ ಬಂದ ಬಳಿಕ ಸೋರಿಕೆಯಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ಇಲಾಖಾ ಸಿಬಂದಿ ಶಾಮೀಲಾಗಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಕಮಿಷನರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next