Advertisement
ನೆಲ ಮಾಳಿಗೆಯ ಟ್ರೆಂಡ್ ಬದಲಾಗುತ್ತಿದೆ. ಪೂರ್ಣ ಪ್ರಮಾಣದ ನೆಲ ಮಾಳಿಗೆಗಿಂತ ಈಗ ಅರ್ಧ ನೆಲಮಾಳಿಗೆ ಜನಪ್ರಿಯ. ಇದರಿಂದ ಒಂದು ಕಡೆ ನೆಲಮಾಳಿಗೆಯ ಕೆಲವೊಂದು ಲಾಭ ಪಡೆಯುತ್ತಲೇ ಅನೇಕ ತೊಂದರೆಗಳನ್ನು ತಪ್ಪಿಸಬಹುದು!
ಸಾಮಾನ್ಯವಾಗಿ ನಿಮ್ಮ ಮನೆಯ ಮುಂದೆ, ರಸ್ತೆಯ ಅಡಿಯಲ್ಲಿ ಹಾಕಿರುವ ತಾಜ್ಯನೀರು ಕೊಳವೆ, ಮೂರು ನಾಲ್ಕು ಅಡಿ ಕೆಳಮಟ್ಟದಲ್ಲಿ ಇರುತ್ತದೆ. ನಮ್ಮ ಮನೆಯ ಬೇಸ್‌ಮೆಂಟ್ ಮಟ್ಟ ಈ ಸ್ಯಾನಿಟರಿ ಕೊಳವೆಯ ಮಟ್ಟಕ್ಕಿಂತ ಕೆಳಗಿದ್ದರೆ, ಸಾರ್ವಜನಿಕ ತಾಜ್ಯ ನೀರೆಲ್ಲ ಮನೆಗೆ ಹಿಂದೆ ಹರಿದು ತೊಂದರೆ ಆಗಬಹುದು! ಹಾಗಾಗಿ ನಮ್ಮ ಮನೆಯ ನೆಲಮಾಳಿಗೆಯನ್ನು ಒಂದೆರಡು ಅಡಿ ಮಾತ್ರವೇ ಕೆಳಗಿಟ್ಟರೆ, ಆಗ ಬ್ಯಾಕ್ ಪೋರ್ಷನ್ ತೊಂದರೆಯಿರುವುದಿಲ್ಲ! ಸ್ಯಾನಿಟರಿ ಕೊಳವೆಯ ಮಟ್ಟ ನಾಲ್ಕು ಅಡಿ ಕೆಳಗಿದ್ದರೆ, ನಮ್ಮ ಮನೆಯ ನೆಲಮಾಳಿಗೆಯನ್ನು ಅದಕ್ಕಿಂತ ಎರಡು ಅಡಿ ಕೆಳಗಿಳಿಸಿದರೆ, ಆಗ ಮನೆಯ ತಾಜ್ಯವನ್ನು ಸಾಕಷ್ಟು ಸ್ಲೋಪ್ ಕೊಟ್ಟು ಸ್ಯಾನಿಟರಿ ಕೊಳವೆ ಮೂಲಕ ಸಾರ್ವಜನಿಕ ತಾಜ್ಯ ಕೊಳವೆಗೆ ಸೇರುವಂತೆ ಸಂಪರ್ಕ ಕಲ್ಪಿಸಬಹುದು! ಕೇವಲ ಎರಡು ಅಡಿ ಕೆಳಗಿಳಿಯುವುದರಿಂದ ಏನು ಲಾಭ ಎನ್ನುತ್ತೀರ? ಮನೆಯ ಪ್ಲಿಂತ್‌ಮಟ್ಟ ಸಾಮಾನ್ಯವಾಗಿ ರೋಡಿನ ಮಟ್ಟದಿಂದ ಎರಡು ಅಡಿ ಎತ್ತರವಿರುತ್ತದೆ. ಹಾಗಾಗಿ ಎರಡು ಅಡಿ ಕೆಳಗೆ ಹಾಗೂ ಎರಡು ಅಡಿ ಪ್ಲಿಂತ್ ಲೆಕ್ಕ ಹಾಕಿದರೆ ನಾಲ್ಕು ಅಡಿ ಸಿಕ್ಕ ಹಾಗಾಗುತ್ತದೆ. ಸಾಮಾನ್ಯವಾಗಿ ಬೇಸ್‌ಮೆಂಟ್‌ಗೆ 7 ಅಡಿಯಿಂದ ಎಂಟು ಅಡಿ ಎತ್ತರ ಇದ್ದರೆ ಸಾಕಾಗುತ್ತದೆ. ಹಾಗಾಗಿ ಇನ್ನೂ ಮೂರು ಅಡಿ ಹೆಚ್ಚುವರಿಯಾಗಿ ಎತ್ತರಿಸಿದರೂ ನಮಗೆ ಇಡಿಯಾಗಿ ಒಂದು ಮಹಡಿ ಸಿಕ್ಕಂತಾಗುತ್ತದೆ!
Related Articles
ಭೂಮಿ ಮಟ್ಟಕ್ಕಿಂತ ಕೆಳಗೆ ಏನೇ ಕಟ್ಟಿದರೂ ಮಳೆನೀರು ಒಳ ಬರುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಸೆಮಿ ಬೇಸ್‌ಮೆಂಟ್ ಸುತ್ತಲೂ ಭೂ ಮಟ್ಟಕ್ಕಿಂತ ಎತ್ತರದಲ್ಲಿ ಒಂದೆರಡು ಅಡಿಯ ವರೆಗೂ ಮೋಟುಗೋಡೆ ಕಟ್ಟುವುದು ಒಳ್ಳೆಯದು. ಪಾರ್ಕಿಂಗಾಗಿ ತೆರೆದ ಸ್ಥಳವಿದ್ದರೂ, ಮಳೆ ನೀರಿನ ಎರಚಲು ಬೀಳುವ ಸಾಧ್ಯತೆ ಯಿರುವುದರಿಂದ ಏಳು ಅಡಿ ಎತ್ತರದಲ್ಲಿ ಸಜ್ಜ ಹಾಕುವುದು
ಒಳ್ಳೆಯದು. ಯಾವುದೇ ಉಪಯುಕ್ತ ಸ್ಥಳಕ್ಕೆ ನೈಸರ್ಗಿಕವಾಗಿ ಗಾಳಿ ಆಡುತ್ತ ಬೆಳಕು ಹರಿದರೆ ಒಳ್ಳೆಯದು. ಹಾಗಾಗಿ ಸೆಮಿ ಬೇಸ್‌ಮೆಂಟ್ ವಿನ್ಯಾಸ ಮಾಡುವಾಗಲೂ ಸುತ್ತಲೂ ಸಾಕಷ್ಟು ಖಾಲಿ ಜಾಗ ಬಿಡುವುದು ಉತ್ತಮ. 30 ಅಡಿಗೆ 40 ಅಡಿ ನಿವೇಶನದಲ್ಲಾದರೆ, ಸುತ್ತಲೂ ಮೂರು ಅಡಿಯಷ್ಟಾದರೂ ಬಿಟ್ಟು ಕಟ್ಟಿದರೆ ಉತ್ತಮ. ಈ ಖಾಲಿ ಜಾಗದಲ್ಲಿ ಬೀಳುವ ಮಳೆ ನೀರನ್ನೂ ಮಳೆ ಕೋಯ್ಲಿಗೆ ಬಳಸಿಕೊಳ್ಳಬಹುದು.
Advertisement
ಅಕ್ಕ ಪಕ್ಕದ ಮನೆಗಳ ಪಾಯದ ಸುರಕ್ಷತೆಮಣ್ಣು ಅಗೆತ ಶುರುಮಾಡುವ ಮೊದಲು ನಿವೇಶನವನ್ನು ಸುತ್ತುವರೆದಿರುವ ಇತರೆ ಮನೆಗಳ ಸುರಕ್ಷತೆಯ ಬಗ್ಗೆ ನಿಗಾ ವಹಿಸುವುದು ಉತ್ತಮ. ನಿಮ್ಮ ಮನೆಯ ಪಕ್ಕದಲ್ಲೇನಾದರೂ ಹಳೆ ಕಾಲದ ಮನೆಯಿದ್ದರೆ, ಬಹುಶಃ ಅದಕ್ಕೆ ಅಷ್ಟೇನೂ ಆಳವಲ್ಲದ ಪಾಯವನ್ನು, ಒಂದೆರಡು ವರಸೆ ಕಲ್ಲಿನಲ್ಲಿ, ಸೇರು ಮಣ್ಣು ಹಾಕಿ ಕಟ್ಟಿರಬಹುದು. ಹಾಗಾಗಿ ನಾವು ನಮ್ಮ ಮನೆಯ ನೆಲಮಾಳಿಗೆಯ ಪಾಯವನ್ನು ಅವರ ಮನೆಗೆ ತೀರ ಹತ್ತಿರದಲ್ಲೂ, ಆಳವಾಗಿಯೂ ಕಟ್ಟಿದರೆ ಪಕ್ಕದ ಮನೆಗೆ ತೊಂದರೆ ಆಗಿ, ಅಲ್ಲಿನ ಗೋಡೆ ಬಿರುಕು ಬಿಡುವುದು ಅಥವಾ ಇನ್ನೂ ಗಂಭೀರ ತೊಂದರೆಗಳು ಉಂಟಾಗಬಹುದು.
ಹಳೆ ಪಾಯದ ಪಕ್ಕದಲ್ಲಿ, ಕಡೆ ಪಕ್ಷ ಮೂರು ಅಡಿಯಷ್ಟಾದರೂ ಖಾಲಿಜಾಗ ಬಿಟ್ಟು ಮಣ್ಣು ತೋಡಿದರೆ ಉತ್ತಮ. ಇಂಥಹ ಸನ್ನಿವೇಶದಲ್ಲೂ ಪೂರ ನೆಲಮಾಳಿಗೆ ಕಟ್ಟಲು ಹತ್ತಾರು ಅಡಿ ಅಗೆಯುವುದು ಅಪಾಯಕಾರಿಯಾದ ಕಾರಣ ಸೆಮಿ ಬೇಸ್‌ಮೆಂಟ್ ವಿನ್ಯಾಸ ಮಾಡಿಕೊಂಡು, ನಾಲ್ಕು ಅಡಿ ಅಗೆತಕ್ಕೆ ಪಾಯದ ಆಳವನ್ನು ಸೀಮಿತಗೊಳಿಸುವುದು ಉತ್ತಮ. ಸೆಮಿ ಬೇಸ್‌ಮೆಂಟ್ ದುಬಾರಿಯೇ?
ಹೆಚ್ಚುವರಿಯಾಗಿ ಯಾವುದೇ ಸ್ಥಳವನ್ನು ಕಟ್ಟಿದರೂ, ಅದರದೇ ಆದ ಖರ್ಚು ವೆಚ್ಚ ಇದ್ದೇ ಇರುತ್ತದೆ. ಹಾಗಾಗಿ ಚದುರದ ಲೆಕ್ಕದಲ್ಲಿ ಹೇಳಬೇಕೆಂದರೆ, ಎತ್ತರ ಕಡಿಮೆ ಇರುವುದರಿಂದಲೂ, ಗೋಡೆಯ ಕೆಲ ಭಾಗ ಪಾಯದ ಖರ್ಚಿನಲ್ಲಿ ಆಗುವುದರಿಂದಲೂ, ಉಳಿತಾಯ ಆಗುತ್ತದೆ. ಸಾಮಾನ್ಯ ನೆಲಮಹಡಿಯ ಮನೆಗೆ ಹೋಲಿಸಿದರೆ ನಾವು ಯಾವ ರೀತಿಯಲ್ಲಿ ಹೊರ, ಒಳ ಹಾಗೂ ನೆಲವನ್ನು ನಿರ್ವಹಿಸುತ್ತೇವೆ ಎನ್ನುವುದನ್ನು ಆಧರಿಸಿ ಉಳಿತಾಯವಾಗಬಹುದು. ಯಾವುದೇ ಮನೆಯಲ್ಲಿ ಕಿಟಕಿ, ಬಾಗಿಲು, ಸ್ಯಾನಿಟರಿ, ಟೈಲ್ಸ್ ಇತ್ಯಾದಿಗಳದೇ ಖರ್ಚಿನಲ್ಲಿ ಸಿಂಹಪಾಲು. ಸೆಮಿಬೇಸ್‌ಮೆಂಟ್ ಅಷ್ಟೇನೂ ದುಬಾರಿ ವಸ್ತುಗಳನ್ನು ಬೇಡುವುದಿಲ್ಲವಾದ ಕಾರಣ ಸ್ವಲ್ಪ ಎಚ್ಚರ ವಹಿಸಿದರೆ ಕಡಿಮೆ ಖರ್ಚಿನಲ್ಲೇ ಕಟ್ಟಿ ಮುಗಿಸಬಹುದು. ಬಹೂಪಯೋಗಿ
ಕೇವಲ ಒಂದೆರಡು ಅಡಿ ಕೆಳಗೆ ಹೋಗುವುದರಿಂದ ಸಿಗುವ ಹೆಚ್ಚುವರಿ ಮಾಳಿಗೆಯನ್ನು ಅನೇಕ ಕಾರ್ಯಗಳಿಗೆ ಉಪಯೋಗಿಸ ಬಹುದು. ಕಾರು ಸ್ಕೂಟರ್ ಇಳಿಯಲು ಸ್ವಲ್ಪ ಇಳಿಜಾರು ಕೊಟ್ಟರೆ ಪಾರ್ಕಿಂಗ್‌ಗೆ ಉಪಯೋಗಿಸಬಹುದು. ಕಾರ್ ಹಾಗೂ ಸ್ಕೂಟರ್ ಸುರಕ್ಷಿತವಾಗಿ ಸಂಚರಿಸಲು ಈ ರ್‍ಯಾಂಪ್ 1:6 ಅನುಪಾತದಲ್ಲಿದ್ದರೆ ಒಳ್ಳೆಯದು. ಒಂದು ಅಡಿ ಇಳಿಯಲು ಆರು ಅಡಿಯಷ್ಟಾದರೂ ಉದ್ದ ಇರಬೇಕಾಗುತ್ತದೆ. ಮೆಟ್ಟಿಲೇನೂ ಹೆಚ್ಚು ಸ್ಥಳ ತೆಗೆದುಕೊಳ್ಳುವುದಿಲ್ಲ. ಎರಡು ಅಡಿ ಇಳಿಯಲು ನಾಲ್ಕು ಮೆಟ್ಟಲಿದ್ದರೂ ಸಾಲುತ್ತದೆ. ಇಡೀ ನಿವೇಶನವನ್ನು ಸಾಮಾನ್ಯವಾಗಿ ಪಾರ್ಕಿಂಗ್‌ಗೆ ಎಂದು ಮೀಸಲಿಡುವ ಅಗತ್ಯವಿರುವುದಿಲ್ಲ. ಹಾಗಾಗಿ ಹೆಚ್ಚುವರಿಯಾಗಿ ಹಿಂದೆ ಸಿಗುವ ಜಾಗದಲ್ಲಿ ಸಣ್ಣದೊಂದು ಔಟ್‌ಹೌಸ್ ಮಾಡಬಹುದು. ಕೆಲವೊಮ್ಮೆ ಸ್ಯಾನಿಟರಿ ಕನೆಕ್ಷನ್‌ಗೆ ಸರಿಯಾಗಿ ಸ್ಲೋಪ್ ಸಿಗದಿರುವ ಆತಂಕವಿದ್ದರೆ, “ರಾಜಾ ಸೀಟ್’ ಮಾದರಿಯಲ್ಲಿ ಬಾತ್ ರೂಮ್‌ಗಳನ್ನು ಒಂದೆರಡು ಮೆಟ್ಟಿಲು ಮೇಲಕ್ಕೂ ಕಟ್ಟಿಕೊಳ್ಳಬಹುದು. ಸಾಮಾನ್ಯವಾಗಿ ಕಿಚನ್ ಸಿಂಕ್ ನೀರು ಹೋಗಲು ಹೆಚ್ಚಿನ ತೊಂದರೆಯಾಗುವುದಿಲ್ಲ. ಏಕೆಂದರೆ ಸುಮಾರು ಎರಡು ಅಡಿ ಎತ್ತರದಲ್ಲಿರುವ ಇದರ ಹೊರಕೊಳವೆಗೆ ಬಾಟಲ್ ಟ್ರ್ಯಾಪ್ ಅಳವಡಿಸಿ, ಸ್ಯಾನಿಟರಿ ಪೈಪ್‌ಗೆ ಸಂಪರ್ಕ ಕಲ್ಪಿಸಬಹುದು.
ಮುಖ್ಯ ರಸ್ತೆಯಲ್ಲೇನಾದರೂ ನಿಮ್ಮ ನಿವೇಶನ ಇದ್ದರೆ, ಒಂದೆರಡು ಅಂಗಡಿ ಮಾಡಿ ಬಾಡಿಗೆಗೆ ಕೊಡುವುದಕ್ಕೂ ಸೆಮಿಬೇಸ್‌ಮೆಂಟ್ ಅನುಕೂಲಕರ. ಅಂಗಡಿ ಮುಂಗಟ್ಟುಗಳಲ್ಲಿ ಪ್ರದರ್ಶಿಸಿರುವ ಸರಕುಗಳೂ ಸಹ ನಿರಾಯಾಸವಾಗಿ ಕಣ್ಣಿನ ಮಟ್ಟದಲ್ಲಿಯೇ ಕಾಣುವುದರಿಂದ, ಅನೇಕ ಜನಪ್ರಿಯ ಅಂಗಡಿಗಳು, ಅದರಲ್ಲೂ ಸ್ವಲ್ಪ ತಂಪು ಬಯಸುವ ಸರಕಿನ ವಹಿವಾಟು ನಡೆಸುವವರು ಈ ಸೆಮಿ ಬೇಸ್‌ಮೆಂಟ್‌ಗಳನ್ನು ಇಷ್ಟಪಡುತ್ತಾರೆ. ಆರ್ಕಿಟೆಕ್ಟ್ ಕೆ. ಜಯರಾಮ್