ಆಳಂದ: ಜಗತ್ತಿಗೆ ಕಾಯಕ, ದಾಸೋಹ ತತ್ವಗಳನ್ನು ನೀಡಿದ ಸಾಮಾಜಿಕ ಕ್ರಾಂತಿ ಪುರುಷ ವಿಶ್ವಗುರು ಬಸವಣ್ಣನವರ ಅಶ್ವರೂಢ ಪ್ರತಿಮೆಯನ್ನು ಶೀಘ್ರವೇ ತಾಲೂಕು ಆಡಳಿತಸೌಧ ಆವರಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಲೋಕಾರ್ಪಣೆ ಕೈಗೊಳ್ಳಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ಪಟ್ಟಣದ ಕಲಬುರಗಿ ಹೆದ್ದಾರಿಯ ತಾಲೂಕು ಆಡಳಿತ ಸೌಧ ಆವರಣದಲ್ಲಿ ಅಶ್ವರೂಢ ಬಸವಗುರುವಿನ ಪ್ರತಿಮೆ ಸ್ಥಾಪನೆ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಾಗಲೇ ಮುಂಬೈನ ಕಲಾವಿದರಿಗೆ ಪ್ರತಿಮೆ ನಿರ್ಮಾಣ ಕೆಲಸ ನೀಡಿದ್ದು, ಸ್ಥಾಪನೆಗೆ ಕಟ್ಟೆ ನಿರ್ಮಾಣ ಬಳಿಕ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲಾಗುವುದು. ಪ್ರತಿಮೆ ಸ್ಥಾಪನೆಯ ಹಿಂದೇ ಅವರ ತತ್ವ ಸಿದ್ಧಾಂತ ಅವರ ಆದರ್ಶಗಳು ಪ್ರೇರಣೆ ದೊರೆಯಲಿ ಎಂಬ ಉದ್ದೇಶವಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಯಳಸಂಗಿ ಮಠದ ಶ್ರೀ ಪ್ರಣಾವನಂದ ಮಹಾಸ್ವಾಮಿಗಳು, ತಾಲೂಕು ಆಡಳಿತ ಆವರಣದಲ್ಲಿ ದೇಶಕ್ಕೆ ಸಂವಿಧಾನ ನೀಡಿದ ಡಾ| ಅಂಬೇಡ್ಕರ್ ಅವರ ಪ್ರತಿಮೆಯ ಬಳಿಕ ಈಗ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಪ್ರತಿಮೆ ಸ್ಥಾಪನೆ ಮೂಲಕ ಶಾಸಕರು ಸಮಾಜಮುಖೀ ಕಾರ್ಯ ಶ್ಲಾಘನೀಯವಾಗಿದೆ. ಬಸವಣ್ಣನವರ ಜಗತ್ತಿನ ಕಲ್ಯಾಣ ಬಯಸಿದ್ದ ಅವರ ಕರುಣಾಮಯಿ ತತ್ವಗಳನ್ನು ಮನುಷ್ಯರನ್ನು ಮನುಷ್ಯತ್ವದ ದೃಷ್ಟಿಯಿಂದ ಅರಿಯದೇ ಹೋದರೆ ಬಸವಣ್ಣನವರನ್ನು ಅರಿಯಲು ಸಾಧ್ಯವಿಲ್ಲ. ಅವರ ವಿಚಾರ ತತ್ವಗಳನ್ನು ಪಾಲಿಸುವ ಕಾರ್ಯವಾಗಬೇಕಿದೆ ಎಂದರು.
ಆಳಂದ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಮಾತನಾಡಿ, ಬಸವಣ್ಣನವರ ಪ್ರತಿಮೆಯ ಕಾರ್ಯದೊಂದಿಗೆ ಬರುವ ದಿನಗಳಲ್ಲಿ ಜಗದ್ಗುರು ರೇಣುಕಾರ್ಚಾರ ಪ್ರತಿಮೆಗೆ ಶಾಸಕರು ಮುಂದಾಗಬೇಕು ಎಂದು ಹೇಳಿದರು.
ಜೆಸ್ಕಾಂ ನಿರ್ದೇಶಕ ವೀರಣ್ಣಾ ಮಂಗಾಣೆ ಅವರು ಮಾತನಾಡಿದರು. ಪುರಸಭೆ ಅಧ್ಯಕ್ಷ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣ ಹತ್ತರಕಿ, ವೀರಶೈವ ಸಮಾಜದ ಉಪಾಧ್ಯಕ್ಷೆ ಗೌರಿ ಚಿಟಕೋಟಿ, ತಾಲೂಕು ಅಧ್ಯಕ್ಷ ಗುರುನಾಥ ಪಾಟೀಲ, ಮುಖಂಡ ಮಲ್ಲಪ್ಪ ಹತ್ತರಕಿ, ರಾಜಶೇಖರ ಮಲಶೆಟ್ಟಿ ಭೂಸನೂರ, ಬಿಜೆಪಿ ಅಧ್ಯಕ್ಷ ಆನಂದ ಪಾಟೀಲ, ಸಿ.ಕೆ. ಪಾಟೀಲ, ಅನಂತರಾಜ ಸಾಹು, ಹಣಮಂತರಾವ್ ಮಲಾಜಿ, ಡಾ| ಬಸವರಾಜ ಪಾಟೀಲ ಹಳ್ಳಿಸಲಗರ, ನಿಜಲಿಂಗಪ್ಪ ಕೊರಳ್ಳಿ ವೇದಿಕೆಯ ಮೇಲಿದ್ದರು.
ಇದೇ ವೇಳೆ ಶಾಸಕರಿಗೆ ವೀರಶೈವ ಲಿಂಗಾಯತ ಸಮಾಜದ ಪರ ರವಿ ಮಲಶೆಟ್ಟಿ, ಗುರುನಾಥ ಪಾಟೀಲ, ಶಿವುಪ್ರಕಾಶ ಹೀರಾ, ಶರಣಬಸಪ್ಪ ಮಲಶೆಟ್ಟಿ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಗುರುದೇವ ಕಳಸ್ಕರ್, ಅರುಣ ಬಿರಾದಾರ ಇನ್ನಿತರರು ಸನ್ಮಾನಿಸಿದರು. ಮುಖಂಡ ಅಶೋಕ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಲಿಂಗರಾಜ ಪಾಟೀಲ ಝಳಕಿ, ಶರಣ ರಾಜೇಂದ್ರ ಗುಂಡೆ, ಶಿವುಪುತ್ರ ಬೆಳ್ಳೆ, ರೇವಣಸಿದ್ಧಪ್ಪ ನಾಗೂರೆ, ಮಲ್ಲಿಕಾರ್ಜುನ ಕಂದಗುಳೆ, ಬಸವರಾಜ ಸಾಣಕ, ಅಪ್ಪಾಸಾಬ ಗುಂಡೆ ಇದ್ದರು.