Advertisement

ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ದುರ್ಬಲ ಸಿಎಂ: ಸಿದ್ದರಾಮಯ್ಯ

01:06 AM Jan 03, 2023 | Team Udayavani |

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಧಮ್‌ ಇದ್ರೆ, ತಾಕತ್ತು ಇದ್ದರೆ ಎಂದು ಮಾತನಾಡುವ ನೀವು ಪ್ರಧಾನಿ ನರೇಂದ್ರ ಮೋದಿ ಎದುರು ಗಡಗಡ ನಡುಗುವುದ್ಯಾಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ನಗರದಲ್ಲಿ ಸೋಮವಾರ ಕಾಂಗ್ರೆಸ್‌ ಆಯೋಜಿಸಿದ್ದ ಮಹಾದಾಯಿ ಜಲ-ಜನ ಆಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಗೆ ತಾಕತ್ತು, ಧಮ್‌ ಇದ್ದಿದ್ದರೆ ನಾವು ಆರಂಭಿಸಿದ್ದ ಮಹಾ ದಾಯಿ ಯೋಜನೆಯನ್ನು ಪೂರ್ಣ ಗೊಳಿಸಬೇಕಿತ್ತು. ನ್ಯಾಯಾಧಿಕರಣದ ಆದೇಶ ಬಂದು ನಾಲ್ಕು ವರ್ಷಗಳು ಕಳೆದಿವೆ. ಇದರಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಕೇಳುವ ತಾಕತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಇತ್ಯರ್ಥ ಪಡಿಸಬಹುದಿತ್ತು. ಆದರೆ ಇವರಿಗೆ ಈ ಭಾಗದ ಯೋಜನೆ ಸಾಕಾರಗೊಂಡು ಜನರಿಗೆ, ರೈತರಿಗೆ ನೀರು ಕೊಡುವುದು ಬೇಡ. ಚುನಾವಣೆ ಸಂದರ್ಭ ಮಹಾದಾಯಿ ನೆನಪಾಗುತ್ತದೆ. ಈ ಬೂಟಾಟಿಕೆ ಯಾಕೆ ಎಂದು ಪ್ರಶ್ನಿಸಿದರು.

ಜನದ್ರೋಹಿ ಬಿಜೆಪಿ ಎಲ್ಲ ಇಲಾಖೆಗಳಲ್ಲೂ ಲೂಟಿ ಮಾಡುತ್ತಿದೆ. ವಿಧಾನಸೌಧದ ಗೋಡೆಗಳು ಲೂಟಿ- ಲಂಚ ಎಂದು ಪಿಸುಗುಡುತ್ತಿವೆ. ಸುಳ್ಳು ಹಾಗೂ ಢೋಂಗಿತನ ಬಿಟ್ಟು ಜನರ ಪರ ಕೆಲಸ ಮಾಡಿ. ಜನರ ಬದಕು ರೂಪಿಸುವ ಕೆಲಸ ಮಾಡುವುದು ಬಿಟ್ಟು ಅವರ ಭಾವನೆಗಳಿಗೆ ಬೆಂಕಿ ಹಚ್ಚುವ ಕೆಲಸ ನಡೆಯುವುದಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಯಾವ ಯೋಜನೆಗೆ ನ್ಯಾಯ ಕೊಟ್ಟಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿ ಕಾರಕ್ಕೆ ಬರುವುದು ನಿಶ್ಚಿತ. ಆ ಬಳಿ ಕ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ 2 ಲಕ್ಷ ಕೋಟಿ ರೂ. ಖರ್ಚು ಮಾಡಿ ಪೂರ್ಣ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಮಾತನಾಡಿ, ಕಾಂಗ್ರೆಸ್‌ ಅಧಿಕಾರದ ಲ್ಲಿದ್ದ ಸಂದರ್ಭ ಬೇಷರತ್ತಾಗಿ ನೀಡಿದ್ದ ಅನುಮತಿಯನ್ನು ತಡೆಹಿಡಿದವರು ಬಿಜೆಪಿಯವರು. ಇವರಿಂದ ಮಹಾದಾಯಿ ಯೋಜನೆ ಸಾಕಾರಗೊಳ್ಳುತ್ತದೆ ಎಂಬುದು ಸತ್ಯಕ್ಕೆ ದೂರ. ಕೇವಲ ಸುಳ್ಳು, ಜನರನ್ನು ವಂಚಿಸಿ ಸುಳ್ಳಿನ ವಿಜಯೋತ್ಸವ ಮಾಡುತ್ತಾರೆ. ಇವರು ನೀರು ತರುವುದಿಲ್ಲ. ಅದರ ಹೆಸರಲ್ಲಿ ಚುನಾವಣೆ ರಾಜಕಾರಣ ಮಾಡುವುದೇ ಇವರ ಕೆಲಸ. ಅಧಿ ಕಾರಕ್ಕೆ ಬಂದ ಮೊದಲ ಅಧಿ ವೇಶನದಲ್ಲಿ ಸಮರ್ಪಕ ಅನುದಾನ ನೀಡಿ ಮಹಾದಾಯಿ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದರು.

ಪ್ರಮುಖರಾದ ಬಿ.ಕೆ ಹರಿಪ್ರಸಾದ್‌, ಸತೀಶ ಜಾರಕಿ ಹೊಳಿ, ಸಲೀಂ ಅಹ್ಮದ್‌, ಎಚ್‌.ಕೆ. ಪಾಟೀಲ್‌, ಸಂತೋಷ ಲಾಡ್‌, ಬಸವರಾಜ ರಾಯರೆಡ್ಡಿ, ಪಿ.ಸಿ. ಸಿದ್ಧನಗೌಡ್ರ, ಕೆ.ಎಚ್‌.ಮುನಿಯಪ್ಪ, ಪ್ರೊ| ಐ.ಜಿ. ಸನದಿ, ಪ್ರಸಾದ ಅಬ್ಬಯ್ಯ, ಅಂಜಲಿ ನಿಂಬಾಳ್ಕರ್‌, ಶ್ರೀನಿವಾಸ ಮಾನೆ ಮುಂತಾದವರು ಉಪಸ್ಥಿತರಿದ್ದರು.

Advertisement

ಅಧಿಕಾರದಲ್ಲಿ ಯಾಕಿರಬೇಕು?
ಹಸಿ ಸುಳ್ಳು ಬಿಟ್ಟರೆ ಬಿಜೆಪಿಯವರ ಸಾಧನೆ ಏನಿಲ್ಲ. ಈ ಭಾಗದವರೇ ಕೇಂದ್ರ ಸಚಿವರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಇದ್ದರೂ ಪ್ರತಿ ಯೊಂದರಲ್ಲೂ ಅನ್ಯಾಯವಾಗಿದೆ. ಡಬಲ್‌ ಎಂಜಿನ್‌ ಸರಕಾರವಿದ್ದರೂ ಈ ಭಾಗಕ್ಕೆ ಕುಡಿಯುವ ನೀರು ಸಿಗುತ್ತಿಲ್ಲ. ನ್ಯಾಯ ಕೊಡಲು ಆಗದಿ ದ್ದರೆ ಅ ಧಿಕಾರದಲ್ಲಿ ಯಾಕಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ರೈತರು, ಮಹಾದಾಯಿ ವಿಚಾರದಲ್ಲಿ ಇಂಥ ನಾಟಕ ಸರಿಯಲ್ಲ. ನೀವು ನಿಜವಾಗಿಯೂ ಮಾಡಿಸಿದ್ದರೆ ಹೋರಾಡಿದ ಒಂದಾದರೂ ಸಂಘಟನೆಗಳು ನಿಮ್ಮೊಂದಿಗೆ ಬಂದು ವಿಜಯೋತ್ಸವ ಮಾಡಿದ್ದಾರೆಯೇ? ನಿಮ್ಮ ನಾಯಕರೇ ಢೋಂಗಿ ವಿಜಯೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೇಳಿದರು. ರಾಜಕಾರಣಕ್ಕಾಗಿ ರಾಜ್ಯದಲ್ಲಿ ಧರ್ಮ-ಜಾತಿಗಳ ನಡುವೆ ಕೋಮು ಸಂಘರ್ಷ ಹೆಚ್ಚಿಸಿ ಅಭಿವೃದ್ಧಿ ಇಲ್ಲದಂತೆ ಮಾಡಿದ್ದಾರೆ. ಹೀಗಾಗಿಯೇ ರಾಜ್ಯಕ್ಕೆ ಯಾವುದೇ ಕೈಗಾರಿಕೆಗಳು ಬರುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಮುಂದಿನ ಬಜೆಟ್‌ ಮಾಡುವ ಕಾಂಗ್ರೆಸ್‌ ಸರಕಾರ ಮಹಾದಾಯಿಗೆ ಒಂದು ಸಾವಿ ರ ಕೋಟಿ ರೂ. ಮೀಸಲಿಟ್ಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next