Advertisement

ನವೀನ್‌ ಮೃತದೇಹಕ್ಕೆ ಅಂತಿಮ ನಮನ; ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಗಣ್ಯರಿಂದ ಅಂತಿಮ ಗೌರವ

11:37 PM Mar 21, 2022 | Team Udayavani |

ಹಾವೇರಿ: ಉಕ್ರೇನ್‌ನಲ್ಲಿ ಮೃತಪಟ್ಟ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್‌ ಗ್ಯಾನಗೌಡರ್‌ ಅವರ ಪಾರ್ಥಿವ ಶರೀರ 21 ದಿನಗಳ ಬಳಿಕ ಸೋಮವಾರ ತವರಿಗೆ ಆಗಮಿಸಿತು.

Advertisement

ನವೀನ್‌ ಮೃತಪಟ್ಟ ದಿನದಿಂದಲೇ ಪಾರ್ಥಿವ ಶರೀರ ತರುವಂತೆ ಗ್ರಾಮಸ್ಥರು, ಕುಟುಂಬಸ್ಥರು ಸರಕಾರವನ್ನು ಒತ್ತಾಯಿಸಿದ್ದರು. ಪ್ರಧಾನಿ ಮೋದಿ ಅವರು ನವೀನ್‌ ಕುಟುಂಬದವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಪ್ರಮುಖ ನಾಯಕರು ಚಳಗೇರಿಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪಾರ್ಥಿವ ಶರೀರ ತರುವ ಭರವಸೆ ನೀಡಿದ್ದರು.

ಸಿಎಂ ಅಂತಿಮ ದರ್ಶನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಳಗೇರಿ ಗ್ರಾಮಕ್ಕೂ ಆಗಮಿಸಿ ಅಂತಿಮ ದರ್ಶನ ಪಡೆದರು. ಸಿರಿಗೆರಿಯ ತರಳಬಾಳು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮುಂತಾದವರಿದ್ದರು.

ಈ ವೇಳೆ ಮಾತನಾಡಿದ ನವೀನ್‌ ತಂದೆ ಶೇಖರಗೌಡ ಅವರು, ಸಾಕಷ್ಟು ಪ್ರಯತ್ನಪಟ್ಟು ಮಗನ ಶವವನ್ನು ತರಿಸಿದ್ದೀರಿ. ಕೊನೆಯ ಬಾರಿ ಮಗನ ಮುಖ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿಮಗೆಲ್ಲÉ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿ ಕಣ್ಣೀರಿಟ್ಟರು.

ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವು ಎಷ್ಟೇ ಪ್ರಯತ್ನ ಮಾಡಿದರೂ ನಿಮ್ಮ ಪ್ರಾಮಾಣಿಕತೆ, ಪುಣ್ಯದ ಫಲ, ದೈವ ಸಂಕಲ್ಪದಿಂದ ಯುದ್ಧಪೀಡಿತ ಉಕ್ರೇನ್‌ನಿಂದ ಪಾರ್ಥಿವ ಶರೀರ ತರಲು ಸಾಧ್ಯವಾಗಿದೆ. ನವೀನ್‌ನನ್ನು ಜೀವಂತವಾಗಿ ಕರೆತರಲು ಸಾಧ್ಯವಾಗಲಿಲ್ಲ, ಆದರೆ ಸತತ ಪ್ರಯತ್ನದಿಂದ ಪಾರ್ಥಿವ ಶರೀರ ತರಲಾಗಿದೆ. ಯಾವುದೇ ಸಂದರ್ಭದಲ್ಲೂ ಎದೆಗುಂದದೆ ಧೈರ್ಯವಾಗಿರಿ, ಏನಾದರೂ ಸಮಸ್ಯೆ ಆದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಾಂತ್ವನ ಹೇಳಿದರು.

Advertisement

ವಿದ್ಯಾರ್ಥಿಗಳೊಂದಿಗೆ ಸಿಎಂ ಸಮಾಲೋಚನೆ
ಸಿಎಂ ಬಸವರಾಜ ಬೊಮ್ಮಾಯಿ ಚಳಗೇರಿಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ತಮ್ಮ ಬಳಿ ಕರೆಸಿಕೊಂಡು ಸಮಾಲೋಚನೆ ನಡೆಸಿದರು. ಅಂದು ನವೀನ್‌ ಕೂಡ ನಿಮ್ಮೊಂದಿಗೆ ಇದ್ದಿದ್ದರೆ ಇಂದು ಜೀವಂತವಾಗಿ ಮರಳಿ ಬರುತ್ತಿದ್ದ. ಆದರೆ ವಿಧಿ  ಹೀಗೆ ಆಟ ಆಡಿದೆ ಎಂದು ಹೇಳಿ ಭಾವುಕರಾದರು. ನಿಮ್ಮ ಶಿಕ್ಷಣ ಮುಂದುವರಿಕೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಉಕ್ರೇನ್‌ ಯುದ್ಧಪೀಡಿತ ಪ್ರದೇಶದಿಂದ ಮೃತದೇಹವನ್ನು ತರಲು ಎಷ್ಟು ಕಷ್ಟ ಎದುರಾಯಿತು ಎಂಬುದರ ಬಗ್ಗೆ ಬೊಮ್ಮಾಯಿ ಹಾಗೂ ತರಳಬಾಳು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next