ಸುವರ್ಣ ವಿಧಾನಸೌಧ: ಮತಾಂತರ ನಿಷೇಧ ವಿಧೇಯಕ ಮಂಡನೆ ವಿಚಾರವಾಗಿ ಕೆಲವು ಸದಸ್ಯರ ಮಾತಿನಿಂದ ಮನನೊಂದ ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಘಟನೆ ಶುಕ್ರವಾರ ನಡೆದಿದೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ಅನೇಕರ ಮನವೊಲಿಕೆ ನಂತರ ತಮ್ಮ ನಿರ್ಧಾರದಿಂದ ಅವರು ಹಿಂದೆ ಸರಿದರು ಎನ್ನಲಾಗಿದೆ.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಪರಿಷತ್ತಿನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಆಗುತ್ತದೆ ಎಂದು ಹೇಳಲಾಗಿತ್ತಾದರೂ ಮಧ್ಯಾಹ್ನದವರೆಗೂ ಮಂಡನೆ ಮಾಡಲಾಗಲಿಲ್ಲ.
ಆರೋಪದಿಂದ ಬೇಸರ: ಭೋಜನ ವಿರಾಮ ನಂತರ ಸದನ ಸೇರಬೇಕಾಗಿತ್ತು. ಆದರೆ 4 ಗಂಟೆಯಾದರೂ ಕಲಾಪ ಆರಂಭವಾಗಿರಲಿಲ್ಲ. ಈ ವೇಳೆ ಕೆಲ ಸದಸ್ಯರು ಸಭಾಪತಿ ಕಚೇರಿಗೆ ತೆರಳಿ, “ವಿನಾಕಾರಣ ವಿಳಂಬ ಮಾಡುತ್ತಿದ್ದೀರಿ, ವಿಧೇಯಕ ವಿಚಾರವಾಗಿ ಬಿಜೆಪಿಗೆ ಅನುಕೂಲವಾಗುವಂತೆ ವರ್ತಿ ಸುತ್ತಿದ್ದೀರಿ’ ಎಂದೆಲ್ಲಾ ಮಾತನಾಡಿದರು ಎನ್ನಲಾಗಿದೆ. ಇದರಿಂದ ಮನನೊಂದ ಹೊರಟ್ಟಿ, ಸದನಕ್ಕೆ ಆಗಮಿಸಿ ಐದು ನಿಮಿಷದಲ್ಲಿಯೇ ಸದನದಿಂದ ಹೊರ ನಡೆದರು.
ಇದನ್ನೂ ಓದಿ:ಸಾಲಿಕೇರಿ: ಆಸ್ತಿ ಅಡವಿಟ್ಟ ಮಕ್ಕಳು ನಾಪತ್ತೆ; ಬೀದಿಗೆ ಬಿದ್ದ ಮಲತಾಯಿ
ಸದಸ್ಯರ ಮಾತುಗಳಿಂದ ಮನನೊಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಮುಂದಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಸಿಎಂ ಬೊಮ್ಮಾಯಿ, ಸಭಾನಾಯಕ ಶ್ರೀನಿವಾಸ ಪೂಜಾರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿ ಅನೇಕರು, ದುಡುಕಿನ ನಿರ್ಧಾರ ಬೇಡ ಎಂದು ಮನವೊಲಿಸಿದರು ಎನ್ನಲಾಗಿದೆ.
“ಕೆಲ ಸದಸ್ಯರ ಮಾತುಗಳಿಂದ ಬೇಸರಗೊಂಡು ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿದ್ದೆ. ಆದರೆ ಮುಖ್ಯಮಂತ್ರಿ ಯಾದಿಯಾಗಿ ಅನೇಕ ಸದಸ್ಯರು ಅಂತಹ ನಿರ್ಧಾರ ಬೇಡ ಎಂದಿದ್ದರಿಂದ, ಅವರ ಪ್ರೀತಿಗೆ ಸೋತು ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಸಿಎಂ ಹಾಗೂ ಸದಸ್ಯರು ತೋರಿದ ಪ್ರೀತಿಗೆ ಅಭಾರಿಯಾಗಿದ್ದೇನೆ’ ಎಂದು “ಉದಯವಾಣಿ’ಗೆ ಸಭಾಪತಿ ಹೊರಟ್ಟಿ ತಿಳಿಸಿದರು.