Advertisement

ಮಹಾನ್ ನಾಯಕನ ಆದರ್ಶವನ್ನು ಯುವಜನತೆ ಪಾಲಿಸಲಿ: ಬಸವರಾಜ ಹೊರಟ್ಟಿ

04:50 PM Oct 31, 2021 | Team Udayavani |

ಬೆಂಗಳೂರು: ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಆದರ್ಶ, ವ್ಯಕ್ತಿತ್ವ, ಗಟ್ಟಿ ನಿರ್ಧಾರ ಹಾಗೂ ಅವರ ಆಡಳಿತಾತ್ಮಕ ಗುಣಗಳನ್ನು ಯುವಜನತೆ ಪಾಲಿಸಬೇಕೆಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಏರ್ಪಡಿಸಲಾದ “ರಾಷ್ಟ್ರೀಯ ಏಕತಾ ದಿವಸ” ಆಚರಣೆ ಕಾರ್ಯಕ್ರಮದಲ್ಲಿ “ಸರ್ದಾರ್ ವಲ್ಲಭಭಾಯಿ ಪಟೇಲ್” ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.

ಅಂದಿನ ಪರಿಸ್ಥಿತಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಪ್ರಧಾನಮಂತ್ರಿಗಳಾಗಿದ್ದರೆ ದೇಶದ ಪರಿಸ್ಥಿತಿ ಇನ್ನಷ್ಟು ಬದಲಾವಣೆಯಾಗುತ್ತಿತ್ತು. ಅತ್ಯಂತ ನಿಷ್ಠುರವಾದ, ಇಡೀ ಜಗತ್ತಿಗೆ ಮಾದರಿ ಆದಂತಹ ರಾಷ್ಟ್ರ ನಿರ್ಮಾಣದ ಹಂಬಲವಿತ್ತು. ಕೆಲವೊಬ್ಬರು ನಿಧನರಾದರೂ ನಮ್ಮೆದುರಿಗೆ ಜೀವಂತವಾಗಿರುತ್ತಾರೆ ಅಂಥವರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಒಬ್ಬರು ಎಂದರು.

ರಾಷ್ಟ್ರದ ಅತ್ಯಂತ ಶ್ರೇಷ್ಠ ಹಾಗೂ ಬಹಳ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತಹ ವ್ಯಕ್ತಿಯಾಗಿದ್ದವರು ಸರ್ದಾರ್ ವಲ್ಲಭಭಾಯ್ ಪಟೇಲ್. ಎಷ್ಟೇ ಅಡೆತಡೆಗಳು ಬಂದರೂ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅಮೂಲ್ಯ. ಯುವಜನತೆ ಲಾಲ್ ಬಹುದ್ದೂರ್ ಶಾಸ್ತ್ರಿ, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಈ ರೀತಿಯ ಮಹಾನ್ ನಾಯಕರ ಆಚರಣೆಗಳು ಮಾಡುವ ಉದ್ದೇಶವೇ ಅವರನ್ನು ಮಾದರಿಯನ್ನಾಗಿ ಮಾಡಕೊಳ್ಳಬೇಕು ಹಾಗೂ ಯುವಜನತೆ ಅವರ ಆದರ್ಶಗಳನ್ನು ಪಾಲಿಸಬೇಕೆಂದರು.

“ರಾಷ್ಟ್ರೀಯ ಏಕತಾ ದಿವಸ”ದ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ಮಾತನಾಡಿದ  ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಮ್ಮ ದೇಶ ಮೊದಲು ಎಂಬ ಭಾವನೆ ನಮ್ಮಲ್ಲಿ ನಿರ್ಮಾಣವಾಗಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ ಮಾಡಿದ ನಮ್ಮೆಲ್ಲರ ಹಿರಿಯ ನಾಯಕರುಗಳು ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು ಹಾಗೂ ಅವರ ತ್ಯಾಗ ಬಲಿದಾನ ಇತಿಹಾಸದ ಸ್ಪೂರ್ತಿಯ ಪುಟಗಳು ಸದಾ ಪ್ರೇರಣೆಗೊಳ್ಳುವಂತಹದು. ಸ್ವಾತಂತ್ರ್ಯ ಹೋರಾಟದಲ್ಲಿ, ಸ್ವಾತಂತ್ರ್ಯ ನಂತರದ ಭಾರತ ಸರ್ಕಾರದಲ್ಲಿ ಅನೇಕ ಹಿರಿಯರು ಅತ್ಯುತ್ತಮ ವಾದಂತಹ ಕೆಲಸಗಳನ್ನು ಮಾಡಿದ್ದರು ಅವರ ಸಾಲಿನಲ್ಲಿ ಅಗ್ರಗಣ್ಯನಾಗಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನಿಲ್ಲುತ್ತಾರೆ ಎಂದು ಹೇಳಿದರು.

Advertisement

ಉಕ್ಕಿನ ಮನುಷ್ಯ ಪಟೇಲ್ ರವರು 570 ಕ್ಕಿಂತ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಲು ಹಾಗೂ ಅನೇಕರು ಕ್ಲಿಷ್ಟಕರವಾದಂತಹ ಭಾಗಗಳನ್ನು ಭಾರತದ ಒಳಗೆ ವಿಲೀನಗೊಳಿಸಲು ಅವರು ತೋರಿದ ಇಚ್ಛಾಶಕ್ತಿ ಅದ್ಭುತವಾದದ್ದು. ಅದಕ್ಕಾಗಿ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡರು.ಈ ಕಾರಣದಿಂದಾಗಿಯೇ ಇಂದು ವಿಸ್ತಾರವಾದ ಭಾರತವನ್ನು ನೋಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಪಟೇಲರ ದೂರದೃಷ್ಟಿ ಅವರ ತ್ಯಾಗ ಬಲಿದಾನ ದೇಶದ ಏಕತೆ ಸಮಗ್ರತೆ ಕಲ್ಪನೆ ಇಲ್ಲವಾದರೆ ಇಂತಹ ಭಾರತವನ್ನು ನೋಡಲು ಅಸಾಧ್ಯ. ನಾವೆಲ್ಲರೂ ಸದಾ ಸರ್ದಾರ್ ವಲ್ಲಭಭಾಯ್ ಪಟೇಲ್ ರವರನ್ನು ಸ್ಮರಿಸಿಕೊಳ್ಳುಬೇಕು. ಹಾಗೆಯೇ ಅವರು ತೋರಿದ ದೇಶದ ಬದ್ಧತೆ, ತಮ್ಮನ್ನು ತಾವು ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ರೀತಿ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಚಿವಾಲಯದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next