ಬಾಗಲಕೋಟೆ : ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಬಂದ ಬಳಿಕವೂ ಬಿಜೆಪಿ ಸರ್ಕಾರ ಪತನಗೊಳ್ಳುವುದು ಅನುಮಾನ. ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಆಪರೇಶನ್ ಕಮಲ ಮಾಡಿ, ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂದು ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು.
ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಏಳು ಸ್ಥಾನ ಗೆದ್ದರೆ ಸರ್ಕಾರಕ್ಕೆ ಏನೂ ಆಗಲ್ಲ. 4ರಿಂದ 5 ಸ್ಥಾನ ಬಂದರೆ ಮಾತ್ರ ಸರ್ಕಾರಕ್ಕೆ ಗಂಡಾಂತರವಿದೆ. ಆ ವೇಳೆ ಇನ್ನೊಬ್ಬರ ಜೊತೆಗೆ ಸರ್ಕಾರ ರಚಿಸಬೇಕಾಗುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ಅವರು ರಾಜಿನಾಮೆ ನೀಡಬೇಕಾಗುತ್ತದೆ. ಹೀಗಾಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ರಾಜಿನಾಮೆ ಕೊಡುತ್ತಾರೆ ಎಂಬ ಚರ್ಚೆ ಸಧ್ಯಕ್ಕೆ ಅಪ್ರಸ್ತುತ ಎಂದರು.
ಯಾರಿಗೂ ಚುನಾವಣೆ ಬೇಕಿಲ್ಲ
ಮೂರು ಪಕ್ಷಗಳ ಶಾಸಕರಿಗೂ ಈಗ ಚುನಾವಣೆಗೆ ಹೋಗಲು ಮನಸ್ಸಿಲ್ಲ. ಚುನಾವಣೆಗೆ ಹೋಗಲೇಬೇಕಾದ ಪ್ರಸಂಗ ಬಂದರೆ, ಯಾರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಸರ್ಕಾರದ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. ನನ್ನ ಅನುಭವದ ಪ್ರಕಾರ, ಬಿಜೆಪಿ ಸರ್ಕಾರಕ್ಕೆ ಏನೂ ಆಗಲ್ಲ. ಎಲ್ಲರೂ ಕೂಡಿ ಸರ್ಕಾರ ನಡೆಸುತ್ತಾರೆ ಎಂದು ಹೇಳಿದರು.
ಅನರ್ಹರಿಗೆ ಚುನಾವಣೆಗೆ ನಿಲ್ಲಲು ಸುಪ್ರೀಮ್ ಕೋರ್ಟ ಅವಕಾಶ ನೀಡಿದೆ. ಇದು ಪಕ್ಷಾಂತರ ಕಾಯಿದೆಯಿಂದ ಏನೂ ಆಗಲ್ಲ ಎಂಬ ಭಾವನೆ ಬರುತ್ತಿದೆ. ನನ್ನ ಅನಿಸಿಕೆ ಪ್ರಕಾರ, ಬಿಜೆಪಿ ಸರ್ಕಾರ ಹೋಗುವುದಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನ ಗೆದ್ದರೆ, ಮತ್ತೆ ಎಷ್ಟು ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬುದು ಗೊತ್ತಿಲ್ಲ. ಕಡಿಮೆ ಸ್ಥಾನ ಗೆದ್ದರೆ ಮತ್ತೆ ಆಪರೇಶನ್ ಕಮಲ ಆಗುತ್ತದೆ ಎಂದರು.
ಯಾವುದೇ ಸಮೀಕ್ಷೆಗಳು ಇಲ್ಲಿಯ ವರೆಗೆ ನಿಖರವಾಗಿ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಸಮೀಕ್ಷೆ ಸುಳ್ಳಾಗಿದೆ. ಸಮೀಕ್ಷೆಗಳು ಒಂದೇ ತೆರನಾಗಿ ಇರುವುದಿಲ್ಲ. ಒಂದೊಂದು ಏರಿಯಾದಲ್ಲಿ ಒಂದೊಂದು ಸಮೀಕ್ಷೆ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಸಮೀಕ್ಷೆಗಳು 100ಕ್ಕೆ 100ರಷ್ಟು ಒಪ್ಪಲು ಆಗಲ್ಲ. ಈ ಉಪ ಚುನಾವಣೆಯಲ್ಲಿ ಜೆಡಿಎಸ್ 3 ಸ್ಥಾನ ಗೆಲ್ಲುವುದು ಶತಸಿದ್ಧ ಎಂದು ಹೇಳಿದರು.