Advertisement

ಅನ್ನದಾತನ ನೆರವಿಗೆ ನಿಂತ ಬೊಮ್ಮಾಯಿ ಸರಕಾರ

11:32 PM Jan 14, 2022 | Team Udayavani |

ಅನ್ನದಾತೋ ಸುಖೀಭವ ಎನ್ನುವುದು ಪರಂಪರೆಯ ಮಾತು. ನಮ್ಮ ಭವ್ಯ ಪರಂಪರೆ ಕಾಯಕಯೋಗಿಯನ್ನು ಅನ್ನದಾತ ಎಂದು ಕರೆದು ಮೆರೆಸಿದೆ. ಇಡೀ ನಾಡಿಗೆ ಅನ್ನ ಹಾಕುವ ರೈತ ಸಮುದಾಯ ಸುಖವಾಗಿದ್ದರೆ ನಾಡೂ ಸುಖದಿಂದ ಇದ್ದೀತು ಎನ್ನುವ ನಂಬಿಕೆಗೆ ಹೆಚ್ಚು ಅರ್ಥವಂತಿಕೆಯನ್ನು ರಾಜ್ಯ ಸರಕಾರ ತಂದುಕೊಟ್ಟಿದೆ.

Advertisement

ರೈತ ಸಮುದಾಯ ನಾಡಿನ ಬೆನ್ನೆ°ಲುಬು. ಬಿಸಿಲು, ಚಳಿ ಮಳೆ ಲೆಕ್ಕಿಸದೇ ಹೊಲದಲ್ಲಿ ದುಡಿಯುವ ರೈತ ವರ್ಗದ ಯಶಸ್ಸು ನಾಡಿನ ಸರ್ವಾಂಗೀಣ ಅಭಿವೃದ್ಧಿಯ ಅಡಿಪಾಯ. ಕೃಷಿ ಉತ್ಪನ್ನ ವನ್ನು ಅವಲಂಬಿಸದ ರಾಜ್ಯವಿಲ್ಲ. ಕೃಷಿಕರಿಗೆ ನೀರಾವರಿ, ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮುಂತಾದ ಸವಲತ್ತುಗಳನ್ನು ಒದಗಿಸುವುದು ಯಾವುದೇ ಚುನಾಯಿತ ಸರಕಾರದ ಪ್ರಥಮ ಆದ್ಯತೆ. ಕೃಷಿಗೆ ಮನ್ನಣೆ ನೀಡಿದರೆ ಸುಭಿಕ್ಷೆ, ಕಡೆಗಣಿಸಿದರೆ ದುರ್ಭಿಕ್ಷೆ. ಕೃಷಿ ಮೂಲಸೌರ್ಕಯಕ್ಕೆ ಒತ್ತು ಕೊಡುವುದರ ಜತೆಗೆ ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮುಖ್ಯ. ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರ ಮನಗಂಡಿದೆ. ರೈತರಿಗೆ ನೀಡುತ್ತಿರುವ ವಿಶೇಷ ಕೊಡುಗೆಗಳೇ ಇದಕ್ಕೆ ಸಾಕ್ಷಿ. ಸಂತ್ರಸ್ತರ ನೆರವಿಗೆ ಸರಕಾರ ಕೈಗೊಂಡ ತೀರ್ಮಾನಗಳು ಇದಕ್ಕೆ ಪುಷ್ಠಿ ನೀಡುವಂತಿದೆ.

ಇತ್ತೀಚೆಗೆ ರಾಜ್ಯವನ್ನು ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಕಾಡಿ ದವು. ಇವರೆಡೂ ವೈಪರೀತ್ಯಗಳು ರೈತನ ಪಾಲಿಗೆ ಶಾಪ. ಸಮೃದ್ಧ ಬೆಳೆಯ ಕನಸು ಕಾಣುವ ರೈತನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಇವುಗಳಿಗಿದೆ. ಹೀಗೆ ಈ ಪ್ರಾಕೃತಿಕ ವಿಕೋಪಗಳಿಂದ ರೈತ ಸಂಕುಲ ನರಳಿದಾಗ ಅವರ ನೆರವಿಗೆ ಧಾವಿಸುವುದು, ಅವರಲ್ಲಿ ಆತ್ಮಸ್ಥೆರ್ಯ ತುಂಬಿ ಕೃಷಿಯಿಂದ ಆ ವರ್ಗ ವಿಮುಖ ವಾಗದಂತೆ ನೋಡಿಕೊಳ್ಳುವುದು ಯಾವುದೇ ಸರಕಾರದ ಕರ್ತವ್ಯ. ಏಕೆಂದರೆ ಕೃಷಿಕನನ್ನು ನಿರ್ಲಕ್ಷ್ಯ ಮಾಡಿದರೆ ಇಡೀ ನಾಡಿನ ಭವಿಷ್ಯತ್ತನ್ನೇ ಅವಗಣಿಸಿದಂತೆ. ಅದರ ಪರಿಣಾಮ ದುಸ್ತರ. ಸಕಾಲಿಕ ಆರ್ಥಿಕ ನೆರವು ನೀಡುವ ಮೂಲಕ ಈ ತಾತ್ಕಾ ಲಿಕ ವಿಪತ್ತಿನಿಂದ ರೈತರನ್ನು ಪಾರು ಮಾಡುವುದು ಸರಕಾರದ ಆದ್ಯತೆ ಆಗಬೇಕು. ಆಗಲೇ ಅವನನ್ನು ಉಳುವ ಯೋಗಿ ಎಂದು ಕರೆದಿದ್ದಕ್ಕೆ ಅರ್ಥ ಬರುತ್ತದೆ. ಕೃಷಿ ಕಾಯಕಕ್ಕೆ ಬೆಲೆ ಬರುತ್ತದೆ.

ಈ ದೃಷ್ಟಿಯಿಂದ ನೋಡಿದರೆ ಬೊಮ್ಮಾಯಿ ನೇತೃತ್ವದ ಸರಕಾರ ರೈತರಿಗೆ ಸಕಾಲಿಕ ನೆರವು ನೀಡಿರುವುದು ಸಕಾಲಿಕ ಸಂಗತಿ. ಸಾಮಾನ್ಯವಾಗಿ ಯಾವುದೇ ಸರಕಾರ ಬೆಳೆಹಾನಿಗೆ ಕೇಂದ್ರ ಸರಕಾರ ನೀಡಿದ ಮಾನದಂಡದಲ್ಲಿಯೇ ಪರಿಹಾರ ನೀಡುತ್ತದೆ. ಅದನ್ನು ಸ್ವಲ್ಪ ವಿಸ್ತರಿಸಿ ರಾಜ್ಯದ ಬೊಕ್ಕಸದಿಂದಲೂ ಸ್ವಲ್ಪ ಸೇರಿಸಿ ಉದಾರವಾದ ಮನಸ್ಸಿನಿಂದ ಸಹಾಯ ಹಸ್ತ ಚಾಚಿದ ಉದಾಹರಣೆ ಇದೆ. ಆದರೆ ಬೆಳೆಹಾನಿ ಪರಿಹಾರಕ್ಕೆ ಕೇಂದ್ರ ಸರಕಾರ ನಿಗದಿಪಡಿಸಿರುವ ದರದ ಜತೆಗೆ ಹೆಚ್ಚುವರಿ ಮೊತ್ತ ಸೇರಿಸಿ ಪರಿಹಾರ ನೀಡಿದ್ದು ಈ ಸರಕಾರದ ಹೆಗ್ಗಳಿಕೆ ಎಂದು ಹೇಳದೇ ವಿಧಿಯಿಲ್ಲ. ಏಕೆಂದರೆ ಕೋವಿಡ್‌ ಸಂಕಷ್ಟ ಕಾಲದಲ್ಲಿ ರಾಜಸ್ವದ ಇತಿಮಿತಿ ನೋಡಿಕೊಂಡು ಸರಕಾರ ವ್ಯವಹರಿಸಬೇಕಾಗುತ್ತದೆ. ಆದರೆ ರೈತರ ವಿಚಾರದಲ್ಲಿ ಅದು ಉದಾರತೆಯ ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಕೇಂದ್ರ ಸರಕಾರ ನಿಗದಿಪಡಿಸಿದ ದರದ ಜತೆಗೆ ಹೆಚ್ಚುವರಿ ಮೊತ್ತ ಸೇರಿಸಿ ಒಟ್ಟು 1,200 ಕೋಟಿ ರೂ.ಹೆಚ್ಚುವರಿ ವೆಚ್ಚದಲ್ಲಿ ಪರಿಹಾರ ನೀಡಿರುವುದು ಕಂಡು ಬರುತ್ತದೆ. ಇದಕ್ಕೆ ಉದಾಹರಣೆ ಯನ್ನು ಗಮನಿಸಬಹುದು. ಮಳೆಯಾಶ್ರಿತ ಬೆಳೆಗೆ ಕೇಂದ್ರ ಸರಕಾರ ನಿಗದಿಪಡಿಸಿರುವುದು 6,800 ರೂ. ರಾಜ್ಯ ಸರಕಾರ ಹೆಚ್ಚುವರಿ 6,800 ರೂ. ನೀಡಿ ಒಟ್ಟು 13,600 ರೂ. ವಿತರಿಸಿದೆ. ನೀರಾವರಿ ಬೆಳೆಗಳಿಗೆ 13,500 ರೂ.ಜತೆಗೆ 11,500 ರೂ. ಸೇರಿಸಿ 25,000 ರೂ.ವಿತರಿಸಲಾಗಿದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರ ನಿಗದಿತ ದರ 18 ಸಾವಿರ ರೂ. ಜತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ.ಸೇರಿಸಿ 28 ಸಾವಿರ ರೂ. ವಿತರಿಸಲಾಗಿದೆ.

Advertisement

ನೆರೆ ರೈತರನ್ನು ಇನ್ನಿಲ್ಲದಂತೆ ಕಾಡಿತು. ಬೆಳೆದು ನಿಂತ ಬೆಳೆಗಳು ಕಣ್ಣೆದುರೇ ಕೊಚ್ಚಿ ಹೋದವು. ವಿಪರೀತ ಮಳೆಯಿಂದ ಮಣ್ಣಿನ ಸವಕಳಿ ಉಂಟಾಗಿ ಮತ್ತೆ ಬೆಳೆ ಹಾಕದ ಸ್ಥಿತಿಯೂ ಹಲವೆಡೆ ಸೃಷ್ಟಿ ಯಾಯಿತು. ರಾಜ್ಯದಲ್ಲಿ 2021ನೇ ಜುಲೈಯಿಂದ ನವೆಂಬರ್‌ವರೆಗೆ ನೆರೆ ಹಾನಿಯಿಂದ 12.52 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಯಿತು ಎಂದು ಸರಕಾರದ ಅಂಕಿ ಅಂಶಗಳೇ ಹೇಳುತ್ತವೆ. ಪರಿಹಾರ ವಿತರಣೆ ಈ ಬಾರಿ ಶೀಘ್ರಗತಿಯಲ್ಲಿ ನಡೆದಿದ್ದು ವಿಶೇಷ. ಬೆಳೆಹಾನಿ ಜಂಟಿ ಸಮೀಕ್ಷೆಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಿದ ಒಂದು ವಾರದೊಳಗೆ ರೈತರ ಬ್ಯಾಂಕ್‌ ಖಾತೆಗೆ ಪರಿಹಾರದ ಹಣ ನೇರ ಜಮಾವಣೆ ಆಗಿದ್ದು ಅನ್ನದಾತನ ಮುಖದಲ್ಲಿ ಹರ್ಷ ತಂದಿದೆ. ಇದುವರೆಗೆ 14.4 ಲಕ್ಷ ರೈತರ ಬ್ಯಾಂಕ್‌ ಖಾತೆಗಳಿಗೆ ಒಟ್ಟು 926.40 ಕೋಟಿ ರೂ. ಜಮೆ ಆಗಿದೆ. ಒಂದು ತಿಂಗಳಲ್ಲಿ 12.90 ಲಕ್ಷ ರೈತರಿಗೆ 796 ಕೋಟಿ ರೂ. ಪರಿಹಾರ ವಿತರಣೆ ಆಗಿದೆ. ಇದು ಸಕಾಲಿಕ ಪರಿಹಾರ.

ಮಳೆಯಿಂದ ಅನೇಕ ಕುಟುಂಬಗಳು ಜಲಾವೃತಗೊಂಡವು. ಬಡವರು ಮನೆ ಕಳೆದುಕೊಂಡರು. ನಿಲ್ಲಲೂ ನೆಲೆಯಿಲ್ಲದ ಪರಿಸ್ಥಿತಿ ಎದುರಿಸಿದರು. ಇಂತಹ ಸಂದರ್ಭದಲ್ಲಿ ಸರಕಾರ ಅವರ ಕೈ ಹಿಡಿಯಿತು ಎನ್ನುವುದು ಅಂಕಿ ಅಂಶಗಳಿಂದಲೇ ಗೊತ್ತಾ ಗುತ್ತದೆ. ಪ್ರವಾಹದಿಂದ ಜಲಾವೃತಗೊಂಡ ಕುಟುಂಬಗಳಿಗೆ ರಾಜ್ಯ ಸರಕಾರ ಹೆಚ್ಚುವರಿ ಮೊತ್ತ ಸೇರಿಸಿ 10 ಸಾವಿರ ರೂ. ವಿತ ರಿಸಿರುವುದು ಒಂದು ದಾಖಲೆ. ಇದುವರೆಗೆ 85,860 ಕುಟುಂ ಬಗಳಿಗೆ ಇಂತಹ ಪರಿಹಾರ ವಿತರಿಸಲಾಗಿದೆ. ಮನೆ ಕಳೆದು ಕೊಂಡು ಇನ್ನೇನು ಬೀದಿಗೆ ಬಿದ್ದೆವು ಎಂಬ ಆತಂಕಕ್ಕೆ ಒಳಗಾಗಿ ದ್ದವರ ಬದುಕಿನಲ್ಲಿ ಆಶಾಭಾವವನ್ನೂ ತಂದಿದೆ.

ರೈತರ ಸಂಕಷ್ಟ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶದನಲ್ಲಿ ಪ್ರತಿಧ್ವನಿಸಿದೆ. ಒಟ್ಟು 10.62 ಲಕ್ಷ ಮಂದಿ ರೈತರಿಗೆ 681.90 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸರಕಾರ ಆ ಸಂದರ್ಭದಲ್ಲಿ ಉತ್ತರ ನೀಡಿತ್ತು. ಅನಂತರವೂ ಪರಿಹಾರ ನೀಡಿಕೆ ಪ್ರಮಾಣ ಹೆಚ್ಚುತ್ತ ಹೋಯಿತು. ಈ ಪ್ರಕ್ರಿಯೆ ಯನ್ನು ಸರಕಾರ ಸರಳಗೊಳಿಸಿದ್ದೇ ಇದಕ್ಕೆ ಕಾರಣ. ಬೆಳೆನಷ್ಟ ಪರಿ ಹಾರ ಕೋರಿ ಸರಕಾರಕ್ಕೆ ಇನ್ನೂ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. ಆದರೆ ಈ ದಿಸೆಯಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಆಸ್ಪದವಿಲ್ಲದ ತಂತ್ರಾಂಶ ರೂಪಿಸಿರುವುದು ಸಮಾಧಾನಕರ ಸಂಗತಿ. ಇದು ಇಡೀ ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ವ್ಯವಸ್ಥೆ. ಅರ್ಜಿ ಸಲ್ಲಿಸಿದ 2-3 ದಿನಗಳಲ್ಲಿ ರೈತರಿಗೆ ಪರಿಹಾರ ನೀಡುವ ಪದ್ಧತಿ ಆಡಳಿತ ಚುರುಕಾಗಿರು ವುದನ್ನು ತೋರಿಸುತ್ತದೆ. ರೈತರು ಪರಿಹಾರಕ್ಕಾಗಿ ಅಲೆದಾಟ ಮಾಡುವುದನ್ನು ಯಾವುದೇ ಸರಕಾರ ತಪ್ಪಿಸಬೇಕು. ಹೊಲದಲ್ಲಿ ಬೆವರು ಸುರಿಸುವ ರೈತ ಪರಿಹಾರಕ್ಕಾಗಿಯೂ ಬೆವರು ಸುರಿಸಬಾ ರದು ಎನ್ನುವ ಮಾತಿಗೆ ಸರಕಾರ ನಿಲುವು ಪೂರಕವಾಗಿದೆ.

ಶಿಕ್ಷಣದ ಮೂಲಕ ರೈತರ ಮಕ್ಕಳ ಭವಿಷ್ಯ ಹಸನಾಗಬೇಕು ಎಂಬ ಕನಸನ್ನು ಮುಖ್ಯಮಂತ್ರಿಗಳು ಕಂಡಿದ್ದಾರೆ. ರೈತ ವಿದ್ಯಾ ನಿಧಿಗೆ 100 ಕೋಟಿ ರೂ. ಅನುದಾನ ನೀಡಿರುವುದು ವಿಶೇಷ. ಸರಕಾರ ಮಂಡಿಸಿರುವ ಎರಡನೇ ಪೂರಕ ಅಂದಾಜಿನಲ್ಲಿ ಈ ಹಣ ಮೀಸಲಿಡಲಾಗಿದೆ. ರೈತರ ಮಕ್ಕಳ ಶಿಕ್ಷಣ ಸುಲಲಿತವಾಗ ಬೇಕು ಎನ್ನುವುದು ಇದರ ಹಿಂದಿರುವ ಕನಸು. ಒಟ್ಟಾರೆ ರೈತ ಸಂಕುಲದ ಅಭಿವೃದ್ಧಿœಗೆ ಸರಕಾರದ ಆದ್ಯತೆ ಎದ್ದು ಕಾಣುತ್ತಿದೆ.

ಕೋವಿಡ್‌ ಎರಡೂ ಅಲೆಯಲ್ಲಿ ಕೃಷಿ ವಲಯ ಸಾಕಷ್ಟು ಸಂಕಷ್ಟ ಅನುಭವಿಸಿತು. ಎಲ್ಲ ವರ್ಗಕ್ಕೂ ತಟ್ಟಿದ ಬಿಸಿ ಆ ವಲಯ ವನ್ನೂ ಬಿಡಲಿಲ್ಲ. ಕೃಷಿ ಉತ್ನನ್ನಗಳ ಮಾರಾಟದ ಮೇಲೆ ಸಹ ಅದು ದುಷ್ಟಪರಿಣಾಮ ಬೀರಿತು. ರೈತನ ಗೋಳು ಮುಗಿಲು ಮುಟ್ಟಿತು. ಸರಕಾರ ಆಗ ಕೈಕಟ್ಟಿ ಕೂರಲಿಲ್ಲ. ರೈತರ ನೆರವಿಗೆ ಧಾವಿಸಿತು. ಇದರಿಂದಾಗಿ ರೈತರು ಚೇತರಿಸಿಕೊಂಡು ಮತ್ತೆ ಹೊಲದತ್ತ ಹೆಜ್ಜೆ ಹಾಕಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಕೋವಿಡ್‌ನಿಂದ ತೆರಿಗೆ ಸಂಗ್ರಹವೂ ಇಳಿಮುಖವಾಗಿ ರಾಜ್ಯದ ಆದಾಯದ ಮೇಲೆ ಪರಿಣಾಮ ಬೀರಿದರೂ ಸಹ ಬಿಜೆಪಿ ಸರಕಾರ ರೈತರ ಸಂಕಷ್ಟ ಪರಿಹಾರವನ್ನು ಆದ್ಯತೆಯಾಗಿ ಪರಿಗಣಿ ಸಿದ್ದು ವಿಶೇಷ. ಈಗ ಮತ್ತದೇ ಸಂಕಷ್ಟ ರೈತರನ್ನು ಕಾಡಿದಾಗ ಸರಕಾರ ಸಕಾಲಿಕವಾಗಿ ಸ್ಪಂದಿಸಿದೆ. ಬೆಳೆ ನಷ್ಟದಿಂದ ತತ್ತರಿಸಿದ ರೈತರಿಗೆ ಪರಿಹಾರ ನೀಡುವ ಮೂಲಕ ಅವರಲ್ಲಿ ಕೃಷಿ ಬಗ್ಗೆ ಮತ್ತೆ ಆತ್ಮ ವಿಶ್ವಾಸ ತುಂಬುವಲ್ಲಿ ಯಶಸ್ವಿಯಾಗಿದೆ. ಕಾಯಕ ಯೋಗಿಯ ಜತೆ ತಾನಿದ್ದೇನೆ ಎಂದು ಹೇಳುವುದು ಯಾವುದೇ ಸರಕಾರದ ಪ್ರಥಮ ಆದ್ಯತೆ ಆಗಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರ ಸ್ಪಂದಿಸಿದೆ. ತನ್ನ ಬದ್ಧತೆಯನ್ನು ಮೆರೆದಿದೆ.

-ಪ್ರೊ| ಚಂಬಿ ಪುರಾಣಿಕ್‌

ಲೇಖಕರು: ಮೈಸೂರು ವಿಶ್ವ ವಿದ್ಯಾನಿಲಯ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರ ವಿಷಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ನಿವೃತ್ತ ಡೀನ್‌.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next