Advertisement

ಬೊಮ್ಮಾಯಿ ಸರಕಾರಕ್ಕೆ ವರ್ಷದ ಹರ್ಷ : ಸವಾಲುಗಳ ನಡುವೆ ಸಾಧನೆಗೆ ವರ್ಷ

01:46 AM Jul 28, 2022 | Team Udayavani |

ಬೆಂಗಳೂರು: ಒಂದು ಕಡೆ ಬಡಮಕ್ಕಳಿಗಾಗಿ ವಿದ್ಯಾನಿಧಿ, ಅನ್ನದಾತರಿಗಾಗಿ ರೈತಶಕ್ತಿ ಯೋಜನೆ, ಪ್ರಮುಖ ನಗರಗಳಲ್ಲಿ ನಮ್ಮ ಕ್ಲಿನಿಕ್‌, ವಿದ್ಯಾರ್ಥಿಗಳಿಗಾಗಿ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಗಳು; ಮತ್ತೂಂದು ಕಡೆ ಕೊರೊನಾ, ಬೆಲೆ ಏರಿಕೆ, ಪ್ರವಾಹ, ಪಠ್ಯಪುಸ್ತಕ ಪರಿಷ್ಕರಣೆ, ಹಿಂದೂ ಕಾರ್ಯಕರ್ತರ ಹತ್ಯೆ ಸಹಿತ ಒಂದಷ್ಟು ಸಿಹಿ ಮತ್ತು ಕಹಿ ನೆನಪಿನೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆಡಳಿತದ ಒಂದು ವರ್ಷ ಪೂರೈಸಿದ್ದಾರೆ.

Advertisement

ಅದ್ದೂರಿತನ, ಅಬ್ಬರವಿಲ್ಲದೆ, ಎಷ್ಟೇ ಆರೋಪ, ಅಡೆತಡೆಗಳು ಬಂದರೂ ಸರಕಾರವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಬೊಮ್ಮಾಯಿ ವಿಶೇಷ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಎರಡು ಅವಧಿಯಲ್ಲೂ ಯಡಿಯೂರಪ್ಪ ಅವರ ಅಕಾಲಿಕ ನಿರ್ಗಮನದಿಂದಲೇ ಸಿಎಂ ಸ್ಥಾನ ಬೇರೆಯವರಿಗೆ ದೊರೆತಿವೆ. ಹೀಗಾಗಿ ಎರಡು ಸಂದರ್ಭಗಳಲ್ಲೂ ಪಕ್ಷದ ವರಿಷ್ಠರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ನಡುವಿನ ಸಂಘರ್ಷದ ನಡುವೆಯೇ ಸಿಎಂ ಆದವರು ನಿಭಾಯಿಸಿಕೊಂಡು ಹೋಗುವ ಹೊಣೆಗಾರಿಕೆ ಎದುರಾಗಿರು ವಂಥದ್ದು ವಿಪರ್ಯಾಸ.

ಜಾಣ್ಮೆಯ ಹೆಜ್ಜೆ
ಬಸವರಾಜ ಬೊಮ್ಮಾಯಿಯವರು ಪಕ್ಷದ ಬಲಿಷ್ಠ ವರಿಷ್ಠರು ಹಾಗೂ ಯಡಿಯೂರಪ್ಪ ಇಬ್ಬರೊಂದಿಗೂ ಹೊಂದಾಣಿಕೆಯಿಂದ ಒಂದು ವರ್ಷ ಪೂರೈಸಿದ್ದಾರೆ. ಬೊಮ್ಮಾಯಿ ಅವರು ಒಬ್ಬ ಆಡಳಿತಗಾರನಾಗಿ ಜಲ ಸಂಪನ್ನೂಲ ಇಲಾಖೆ ಹಾಗೂ ಗೃಹ ಇಲಾಖೆಗಳನ್ನು ನಿರ್ವಹಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದು, ಅವರಿಗೆ ಮುಖ್ಯಮಂತ್ರಿಯಾಗಿ ಸವಾಲು ಎದುರಿಸಲು ಅನುಕೂಲ ವಾಯಿತು ಎನ್ನಲೇಬೇಕು.

ಆದರೆ ರಾಜಕೀಯವಾಗಿ ವಿಪಕ್ಷಗಳನ್ನು ಎದುರಿಸುವುದರ ಜತೆಗೆ ಪಕ್ಷದ ವರಿಷ್ಠರ ಆದೇಶ, ಯಡಿಯೂರಪ್ಪ ಅವರ ನಿರ್ದೇಶನ ಹಾಗೂ ಮೂಲ ಬಿಜೆಪಿಗರ ಒಳ ಮುನಿಸುಗಳು ಎಲ್ಲವನ್ನು ಎಲ್ಲೂ ದೀರ್ಘ‌ಕ್ಕೆ ಹೋಗದಂತೆ, ಗೊಂದಲಕ್ಕೆ ಎಡೆ ಮಾಡಿಕೊಡದೆ ನಿಭಾಯಿಸಿರುವುದು ಅವರೊಳಗಿರುವ ರಾಜಕೀಯ ಚಾಣಾಕ್ಷತನವನ್ನು ಎತ್ತಿ ತೋರಿಸುತ್ತದೆ.

ಕಾಡಿದ ವಿಚಾರಗಳು
ಸರಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪ, ಹಿಜಾಬ್‌, ಆಝಾನ್‌, ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರ ನಿಷೇಧದಂಥ ಕೋಮು ಸಂಘರ್ಷಗಳು, ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಎಲ್ಲವೂ ಕೈಮೀರಿ ಹೋಗುವ ಮೊದಲೇ ನಿಯಂತ್ರಣಕ್ಕೆ ತರುವಲ್ಲಿ ಮುಖ್ಯಮಂತ್ರಿ ಶ್ರಮಿಸಿದ್ದಾರೆ. ಎಲ್ಲವನ್ನು ತಾಳ್ಮೆಯಿಂದಲೇ ನಿಭಾಯಿಸುವ ಗುಣ ಇರುವುದರಿಂದಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಂದಿನ ವಿಧಾನಸಭೆ ಚುನಾವಣೆಯನ್ನೂ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ ಎನಿಸುತ್ತದೆ. ಈಗ ಸಿಎಂ ಬೊಮ್ಮಾಯಿಯವರಿಗೂ ಇರುವ ಸವಾಲು ಅದೇ ಆಗಿದೆ. ಒಂದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿರುವ ಸಂಭ್ರಮಕ್ಕಿಂತ ಉಳಿದಿರುವ ಅವಧಿಯಲ್ಲಿ ಸರಕಾರದ ಇಮೇಜ್‌ ಹೆಚ್ಚಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ಅವರ ನಾಯಕತ್ವಕ್ಕಿರುವ ದೊಡ್ಡ ಸವಾಲು.

Advertisement

ಎಂದೂ ವಿಚಲಿತರಾಗಿಲ್ಲ
ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ಆರಂಭದಿಂದಲೂ ನಾಯಕತ್ವ ಬದಲಾವಣೆಯ ಕೂಗು ಅವರ ಆಪ್ತ ವಲಯದಲ್ಲಿಯೇ ಕೇಳಿ ಬಂದಿತ್ತು. ಪಕ್ಷದ ಒಂದು ಗುಂಪು ನಾಯಕತ್ವ ಬದಲಾವಣೆಯ ವಿಚಾರವನ್ನು ನಿರಂತರವಾಗಿ ಜೀವಂತಾಗಿಟ್ಟು ಪಟ್ಟಕ್ಕೇರುವ ಪ್ರಯತ್ನವನ್ನು ನಿರಂತರ ನಡೆಸಿದರೂ, ಯಾವುದಕ್ಕೂ ವಿಚಲಿತರಾಗದೆ ನಿಭಾಯಿಸಿದರು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.

ಕಾಯ್ದೆಗಳ ಜಾರಿ
ಇವರ ಮೂಲ ಜನತಾ ಪರಿವಾರ ಎಂಬ ವಿಪಕ್ಷಗಳ ಟೀಕೆಗೆ ಸೊಪ್ಪು ಹಾಕದೆ, ಬಿಜೆಪಿ ಮೂಲ ಸಿದ್ಧಾಂತಗಳಿಗೆ ತಮ್ಮನ್ನು ಒಗ್ಗಿಸಿಕೊಂಡು ಗೋಹತ್ಯೆ ನಿಷೇಧ, ಮತಾಂತರ ನಿಷೇಧದಂತ ಕಾಯ್ದೆ ಜಾರಿಗೊಳಿಸಿದರು.

ಬೊಮ್ಮಾಯಿಗೆ ಕಾಮನ್‌ ಮ್ಯಾನ್‌ ಬ್ರ್ಯಾಂಡ್‌
ಕಾಮನ್‌ಮ್ಯಾನ್‌ ಸಿಎಂ ಎಂದೇ ಬ್ರ್ಯಾಂಡ್‌ ಆಗಿರುವ ಬೊಮ್ಮಾಯಿ ಅವರು, ಅಧಿಕಾರಕ್ಕೇರಿದ ಮೇಲೆ ಸಾಕಷ್ಟು ಯೋಜನೆಗಳನ್ನೂ ಘೋಷಿಸಿದ್ದಾರೆ. ಅದರಲ್ಲಿ ಪ್ರಮುಖವಾದವು ವಿದ್ಯಾನಿಧಿ ಯೋಜನೆ ಎನ್ನಬಹುದು. ರೈತರ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುವ ಈ ಯೋಜನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ಕಾಮನ್‌ಮ್ಯಾನ್‌ ಬ್ರ್ಯಾಂಡ್‌ ಮೂಲಕ ಜನರ ಮನೆ ಮನಗಳನ್ನು ತಲುಪಿ ಉಳಿದ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಿ, ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಎಷ್ಟೇ ಅಲುಗಾಡಿದರೂ ಬೀಳದಂತೆ ಹೋಗುತ್ತಿರುವ ಅವರ ತಂತಿಯ ಮೇಲಿನ ನಡಿಗೆ ಕೇವಲ ಈ ಅವಧಿಗೆ ದಡ ಮುಟ್ಟಿಸಲು ಮಾತ್ರ ಸೀಮಿತವಾಗದೆ, ಮತ್ತೆ ತಮ್ಮ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ಇನ್ನಷ್ಟು ದೃಢ ಹೆಜ್ಜೆಗಳನ್ನು ಇಡುವ ಅಗತ್ಯ ಮತ್ತು ಅನಿವಾರ್ಯ ಇದೆ ಎಂದನಿಸುತ್ತದೆ.

– ಶಂಕರ ಪಾಗೋಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next