ಕೊಪ್ಪಳ: ಮುಂದಿನ ಎರಡು ವರ್ಷಗಳಲ್ಲಿ 16 ಸಾವಿರ ಪೊಲೀಸರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಈ ವರ್ಷ 6,000 ಸಿಬಂದಿ ನೇಮಕ ಮಾಡಿಕೊಳ್ಳಲಿದ್ದು, ಮುಂದಿನ ವರ್ಷ ಉಳಿದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಠಾಣೆಗೆ ಬರುವವರೊಂದಿಗೆ ಬೆರೆತು ಸಮಸ್ಯೆ ಬಗೆಹರಿಸಲು “ಜನಸ್ನೇಹಿ ಪೊಲೀಸ್’ ಕಾರ್ಯಕ್ರಮ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾವಕ್ಕೆ ಬರಲಿದೆ. ಪೊಲೀಸರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಹಲವು ಸಭೆ ನಡೆಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚು ಒತ್ತು ನೀಡುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಸರೋಜಿನಿ ಮಹಿಷಿ ವರದಿ ತುಂಬಾ ವರ್ಷಗಳಿಂದ ಚರ್ಚಿತ ವಿಚಾರ.
ಅದಕ್ಕೊಂದು ಕಾಯಕಲ್ಪ ಕೊಡಬೇಕೆಂಬುದು ನಮ್ಮ ಸರಕಾರದ ಮುಖ್ಯ ಉದ್ದೇಶ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ವರದಿಯನುಸಾರ ಕನ್ನಡಿಗರಿಗೆ ಉದ್ಯೋಗ ಕೊಡಬೇಕು. ಖಾಸಗಿ ವಲಯದಲ್ಲೂ ಉದ್ಯೋಗ ನೀಡುವುದು ಸಹಿತ ಕೆಲ ನೂನ್ಯತೆ ತೆಗೆದು ಹಾಕಿ ಕೆಲವೇ ದಿನಗಳಲ್ಲಿ ಸರಕಾರ ವರದಿಗೆ ಸ್ಪಷ್ಟತೆ ಕೊಡಲಿದೆ ಎಂದರು.