ಬಸವನಬಾಗೇವಾಡಿ: ಮನುಷ್ಯ ತನ್ನ ನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮ ಸಂಸ್ಕಾರ, ಇಂದ್ರೀಯಗಳ ನಿಗ್ರಹ, ಮಿತ ಮಾತು ಸೇರಿದಂತೆ ವಿವಿಧ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಬೆಳಕಾಗುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಗುರುವಾರ ಪಟ್ಟಣದ ಮಹಾರಾಜರ ಮಠದ ಮುಂಭಾಗದಲ್ಲಿ ಸಿದ್ದರಾಮೇಶ್ವರ ಮಹಾರಾಜರ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಚಿಂತನ ಸಭೆಯಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಅಣ್ಣಬಸವಣ್ಣನವರು “ಕಳಬೇಡ ಕೊಲಬೇಡ’ ಎಂಬ ಸಪ್ತ ಸೂತ್ರಗಳ ವಚನ ಪಾಲನೆ ಮಾಡುವವರೆಲ್ಲರೂ ಶರಣರೆ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲಾ ವರ್ಗದ ಶರಣರನ್ನು ಒಂದೇಡೆ ಸೇರಿಸಿ ಸಮಾನತೆ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ ಎಲ್ಲರಿಗೂ ಶ್ರದ್ಧಾ ಕೇಂದ್ರವಾಗಿದೆ ಎಂದು ಹೇಳಿದರು.
12 ಹಾಗೂ 15ನೇ ಶತಮಾನದಲ್ಲಿ ಆಗಿಹೋದ ಕಾಡಸಿದ್ದೇಶ್ವರರು ವಚನಗಳನ್ನು ಬರೆದಿದ್ದಾರೆ. ಸೊಲ್ಲಾಪುರ ಸಿದ್ದರಾಮೇಶ್ವರ ದೇವರ ಹರಕೆಯ ಫಲವಾಗಿ ಸಿದ್ದರಾಮೇಶ್ವರ ಮಹಾರಾಜರ ಜನನವಾಯಿತು.
ಕಾಡಸಿದ್ದೇಶ್ವರ ಮಠವು ಶರಣ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ಇಲ್ಲಿನ ಸಿದ್ದರಾಮೇಶ್ವರ ಮಹಾರಾಜರ ಮಠವನ್ನು ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಜಿರ್ಣೋದ್ಧಾರಗೊಳಿಸುವ ಮೂಲಕ ರಾಜ್ಯ ಮತ್ತು ಹೊರ ರಾಜ್ಯವಾದ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳ ಭಕ್ತರಿಗೆ ಅನುಕೂಲವಾಗುವಂತೆ ಮೂಲ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಸೂರಪಾಲಿಯ ಗಿರೀಶನಾಂದ ಸ್ವಾಮೀಜಿ, ತಾರಾಚಂದ್ರ ಸ್ವಾಮೀಜಿ, ಮಹಾಬಳೇಶ್ವರ ಅಭಯಾನಂದ ಸ್ವಾಮೀಜಿ, ಗೋವಾದ ಶಂಕರಾನಂದ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಹಂಸನೂರಿನ ಬಸವರಾಜೇಂದ್ರ ಸ್ವಾಮೀಜಿ ಇದ್ದರು.