ಬಸವನಬಾಗೇವಾಡಿ: ತಾಲೂಕಿನಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದ ವಾರ್ಡ್ ನಂ. 1, 18ರಲ್ಲಿ ತಲಾ ಒರ್ವ ವ್ಯಕ್ತಿ ಹಾಗೂ ಉಕ್ಕಲಿ ಗ್ರಾಮದ ವ್ಯಕ್ತಿಗೆ ಕೋವಿಡ್ ತಗುಲಿದೆ.
ಗುರುವಾರ ಪಟ್ಟಣದಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುತ್ತಿದ್ದ ತೆಲಗಿ ರಸ್ತೆಯ ಅಮೀನ್ ದರ್ಗಾ ಹತ್ತಿರದ ಬಡಾವಣೆ ಮತ್ತು ನಾಗೂರ ರಸ್ತೆಯ ಶ್ರೀರಾಮ ನಗರದ ವಡ್ಡರ ಗಲ್ಲಿ ಹಾಗೂ ಉಕ್ಕಲಿ ಗ್ರಾಮದ ಮಕಾನದಾರ ಗಲ್ಲಿಯನ್ನು ತಾಲೂಕಾಡಳಿತ ಸೀಲ್‌ಡೌನ್ ಮಾಡಿದೆ. ಈಗಾಗಲೇ ಮುತ್ತಗಿ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದರಿಂದ ಗ್ರಾಮದೇವತೆ ದೇವಸ್ಥಾನ ಹತ್ತಿರದ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಸೀಲ್‌ಡೌನ್ ಪ್ರದೇಶಕ್ಕೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಅಲ್ಲಿನ ಜನ ಅಗತ್ಯ ವಸ್ತುಗಳಿಗೆ ಪುರಸಭೆ ಹಾಗೂ ಆಯಾ ಗ್ರಾಪಂ ಸಿಬ್ಬಂದಿಗೆ ಕರೆ ಮಾಡಬೇಕು. ಅವರು ನೀಡುವ ವಸ್ತುಗಳಿಗೆ ಹಣ ನೀಡಿ ಪಡೆದುಕೊಳ್ಳಬೇಕು. ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಸೀಲ್ ಡೌನ್ ಆದ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿನ ಜನರು ಆರೋಗ್ಯದ ಮೇಲೆ ನಿಗಾ ವಹಿಸುವರು. ಅಖಂಡ ತಾಲೂಕಿನಲ್ಲಿ ಇನ್ನೂ 30 ಜನರ ವರದಿ ಬರಬೇಕಾಗಿದೆ ಎಂದು ತಹಶೀಲ್ದಾರ್ ಎಂ.ಎನ್. ಬಳಿಗಾರ ಹೇಳಿದರು.
ಗುರುವಾರ 9 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಸೋಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು.
ಡಾ| ಎಸ್.ಎಸ್. ಓತಗೇರಿ,
ತಾಲೂಕು ವೈದ್ಯಾಧಿಕಾರಿ