ಬಸವಕಲ್ಯಾಣ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಅವರು ರವಿವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಟಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಮೊದಲು ನೀಲಕಂಠವಾಡಿ ಗ್ರಾಮಕ್ಕೆ ಭೇಟಿ ನೀಡಿ, ಸಂಬಂಧ ಪಟ್ಟ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಮಾತನಾಡಿ, ನನೆಗುದಿಗೆ ಬಿದ್ದಿರುವ ನೀರಿನ ಟ್ಯಾಂಕ್ ಕಾಮಗಾರಿ ಟೆಂಡರ್ ಪ್ರಕಾರ ಕಳೆದ ಆಗಸ್ಟ್ ತಿಂಗಳಲ್ಲೇ ಮುಗಿಸಬೇಕಾಗಿತ್ತು. ಈವರೆಗೂ ಪೈಪ್‌ಲೈನ್ ಕೂಡ ಅಳವಡಿಸಿಲ್ಲ. ಇನ್ನು 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶೇ.2ರಷ್ಟು ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಠಾಳ ಗ್ರಾಮದಲ್ಲಿ ಅರ್ಥಕ್ಕೆ ನಿಂತಿರುವ ನೀರು ಶುದ್ಧಿಕರಣ ಘಟಕವನ್ನು ಶೀಘ್ರವಾಗಿ ಮುಗಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಒಪ್ಪಿಸಬೇಕು ಹಾಗೂ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಕೈಗೊಂಡಿರುವ ಮಂಠಾಳ-ಚಂಡಕಾಪುರ ರಸ್ತೆ ಕಾಮಗಾರಿ ಬಹಳ ದಿನಗಳಿಂದ ನಡೆಯುತ್ತಿದೆ. ಟೆಂಡರ್ ಪ್ರಕಾರ ಈವರೆಗೆ ಕೆಲಸ ಪೂರ್ಣಗೊಳಿಸಬೇಕಾಗಿತ್ತು ಅಂದಾಗ, ಸ್ಥಳದಲ್ಲಿದ್ದ ಅಧಿಕಾರಿಗಳು ಕೆಲ ರೈತರು ರಸ್ತೆ ಅಗಲೀಕರಣ ಮಾಡಲು ವಿರೋಧಿಸುತ್ತಿರುವುದು ಮತ್ತು ವಿದ್ಯುತ್ ಕಂಬಗಳ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗಮನಕ್ಕೆ ತಂದರು. ಮತ್ತೆ ನಮ್ಮ ಗಮನಕ್ಕೆ ಯಾಕೆ ತಂದಿಲ್ಲ ಎಂದು, ಇವರಿಗೆ ನೋಟಿಸ್ ನೀಡಿ ಶೇ.1ರಷ್ಟು ದಂಡ ವಿಧಿಸಿ ಎಂದರು.
ಬಟಗೇಗಾ ಗ್ರಾಮಕ್ಕೆ ಮಂಜೂರಾದ ಒಟ್ಟು 39 ಲಕ್ಷ ರೂ.ಗಳಲ್ಲಿ ಈಗಾಗಲೇ 23 ಲಕ್ಷ ಖರ್ಚು ಮಾಡಲಾಗಿದೆ. ಉಳಿದ ಹಣದಲ್ಲಿ ಪೈಪ್‌ಲೈನ್ ಸಂಪರ್ಕ ಕೊಟ್ಟು ಈ ತಿಂಗಳ ಒಳಗೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಅಧಿ ಕಾರಿಗೆ ಹಸ್ತಾಂತರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹತ್ಯಾಳ ಹಾಗೂ ಚಿತ್ತಕೋಟಾ (ಕೆ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ ಹಾಗೂ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿ ಹಾಗೂ ಮಧ್ಯದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಕೋಹಿನೂರ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದರು. ಅಲ್ಲಿ ಶಿವಶರಣಪ್ಪಾ ಸಂತಾಜಿ ಹಾಗೂ ರತಿಕಾಂತ, ಪ್ರಶಾಂತರೆಡ್ಡಿ ಅವರು, ಜಿಪಂನಿಂದ ಸೋಲಾರ್ ವ್ಯವಸ್ಥೆ ಮತ್ತು ಮೊರಾರ್ಜಿ ಶಾಲೆಗೆ ಜಮೀನು ಇದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ತಾಪಂ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ಮಡೋಳಪ್ಪ ಪಿ.ಎಸ್., ಪಿಆರ್‌ಈ ರಾಜಕುಮಾರ ಸಾಹುಕಾರ, ಆನಂದ ಮೋರೆ ಸೇರಿದಂತೆ ಮತ್ತಿತರರು ಇದ್ದರು.