ಬಸವಕಲ್ಯಾಣ: ಬೀದರ್ ಜಿಲ್ಲಾ ಪಂಚಾಯತ ಆವರಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಕಚೇರಿ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ 5 ಕೋಟಿ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 30 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಬಿ.ನಾರಾಯಣರಾವ್ ಹಾಗೂ ಜಿ.ಪಂ. ಅಧ್ಯಕ್ಷೆ ಗೀತಾ ಚಿದ್ರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಉಜಳಂಬ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದ್ದಾಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಅನುದಾನಕ್ಕಾಗಿ ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯತ ಕಟ್ಟಡವು ಸುಮಾರು 40ರಿಂದ 50 ವರ್ಷ ಹಳೆಯದ್ದಾಗಿದೆ. ಜೊತೆಗೆ ಪಂಚಾಯತ್ ರಾಜ್, ಇಂಜಿನಿಯರಿಂಗ್ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಅಕ್ಷರ ದಾಸೋಹ ಕಚೇರಿಯನ್ನು ಕೂಡ ಜಿಲ್ಲಾ ಪಂಚಾಯತ ಆವರಣದಲ್ಲಿ ನಡೆಸಲಾಗುತ್ತಿವೆ.
ಆವರಣದಲ್ಲಿಯೇ ಜಿಲ್ಲಾ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ವಿವಿಧ ಸ್ಥಾಯಿ ಸಮಿತಿಗಳ ಕೋಣೆಗಳು ಸಹ ಇವೆ. ಆದರೆ ಸ್ಥಳಾವಕಾಶದ ಕೊರತೆಯಿಂದ ವಿವಿಧ ಸ್ಥಾಯಿ ಸಮಿತಿಗಳ ಕೋಣೆಗಳು ಒಂದೇ ಸೂರಿನಡಿ ಇಲ್ಲದಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ಸಿಎಂ ಗಮನಕ್ಕೆ ತಂದರು.
ಪುರುಷ ಮತ್ತು ಮಹಿಳಾ ಸದಸ್ಯರಿಗಾಗಿ ವಿಶ್ರಾಂತಿ ಗೃಹ ಕೂಡ ಇಲ್ಲ. ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿದ್ದು, ಪತಿ ಮತ್ತು ಮಕ್ಕಳ ಜೊತೆಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗಾಗಿ ತಂಗಲು ಯಾವುದೇ ವಿಶ್ರಾಂತಿ ಗೃಹ ಇಲ್ಲ. ಕಾರಣ ಸಭೆ ಮುಗಿಯುವವರೆಗೆ ವಾಹನಗಳಲ್ಲಿಯೇ ಕಾಯುವಂತಾಗಿದೆ.
ಹಾಗಾಗಿ ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಳೆ ಕಟ್ಟಡಗಳನ್ನು ನೆಲಸಮಗೊಳಿಸಿ, ಪ್ರತ್ಯೇಕ ಕೋಣೆಗಳನ್ನು ಒಂದೇ ಸೂರಿನಡಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಬೇಕೆಂದು ಜೂ.20ರಂದು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಬಹುಮಹಡಿ ಕಟ್ಟಡಕ್ಕಾಗಿ, ಕಚೇರಿಗಳ ನವೀಕರಣಕ್ಕಾಗಿ, ಜಿಪಂ ರಸ್ತೆಗಳ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ 3054 ಲೆಕ್ಕ ಶೀರ್ಷಿಕೆ ಯೋಜನೆಯಡಿ ರೂ.10 ಕೋಟಿ ಮತ್ತು ಕೃಷಿಹೊಂಡ, ಕೆರೆ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಸದಸ್ಯರಾದ ರಾಜಶೇಖರ ಮೇತ್ರೆ, ಪ್ರಕಾಶ ಪಾಟೀಲ, ಸುಧೀರ ಕಾಡಾದಿ, ರವೀಂದ್ರರೆಡ್ಡಿ, ರೇಖಾಬಾಯಿ ನೀಲಕಂಠ, ಉಷಾಬಾಯಿ ನಿಟ್ಟೂರ್‌ಕರ್, ಆನದ ಪಾಟೀಲ, ಸಂತೋಷ ರಾಸೂರೆ ಮತ್ತಿತರರು ಇದ್ದರು.