ಬಸವಕಲ್ಯಾಣ: ವಚನ ಸಾಹಿತ್ಯದ ಚುಂಬಕ ಶಕ್ತಿಯಿಂದ ಇಡೀ ಜಗತ್ತನ್ನೇ ಸೆಳೆಯುವ ಸಾಮರ್ಥ್ಯ ಕಲ್ಯಾಣ ನಾಡಿಗಿದೆ ಎಂದು ಸುಕ್ಷೇತ್ರ ಹಾರಕೂಡ ಹಿರೇಮಠ ಸಂಸ್ಥಾನದ ಧರ್ಮರತ್ನ ಡಾ| ಚನ್ನವೀರ ಶಿವಾಚಾರ್ಯರು ಹೇಳಿದರು.
ಬಸವ ಜಯಂತಿ ಅಂಗವಾಗಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ವತಿಯಿಂದ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಚನದರ್ಶನ-ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಇಡೀ ಜಗತ್ತಿನ ಜನರ ಹೃದಯ ಮಂದಿರದ ಶ್ರೇಷ್ಠ ಪಟ್ಟಣ ಬಸವಕಲ್ಯಾಣವಾಗಿದೆ. ಈ ನೆಲದಲ್ಲಿ ಅನೇಕ ಶರಣರು, ಅನುಭಾವಿಗಳು, ಚಿಂತನೆ ನಡೆಸಿದ್ದು, ಕಲ್ಯಾಣ ಬಸವಣ್ಣನವರ ಅಧ್ಯಾತ್ಮ ಸಾಧನೆ ಯಿಂದ ಬಸವಕಲ್ಯಾಣ ವಾಗಿದೆ ಎಂದು ಹೇಳಿದರು.
ವಿಶ್ವಗುರು ಬಸವಣ್ಣನವರು ಮತ್ತು ಶರಣರು ನಡೆ-ನುಡಿಯಿಂದ ಮಹಾತ್ಮರಾಗಿದ್ದಾರೆ. ಹಾಗಾಗೀ ಜೀವನದಲ್ಲಿ ಮಾನಸಿಕ ಶಾಂತಿ, ನೆಮ್ಮದಿಗಾಗಿ ಬಸವಾದಿ ಶರಣರ ವಚನಗಳು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿಯ ಮೋಟಗಿ ಮಠದ ಖ್ಯಾತ ಪ್ರವಚನಕಾರ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ವಚನದರ್ಶನ-ಪ್ರವಚನ ಮೂಲ ಉದ್ದೇಶ ಮಾನವನ ಜನ್ಮ ಸಾರ್ಥಕತೆ ಮಾಡಿಕೊಳ್ಳುವುದಾಗಿದೆ. ಜೀವನದಲ್ಲಿ ಮನುಷ್ಯನಿಗೆ ಸಂಸ್ಕಾರ ಮುಖ್ಯ ಹಾಗೂ ಆತ್ಮ ತನ್ನತಾನು ಅರಿಯಬೇಕಾದರೆ ವಚನ ಸಾಹಿತ್ಯ ಅವಶ್ಯಕ. ಅದೇ ರೀತಿ ಬದುಕು ಕೊಟ್ಟ ದೇವರನ್ನು ಸ್ಮರಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಕುರಿತು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಕ್ಕಅನ್ನಪೂರ್ಣ ತಾಯಿ, ಲಿಂಗವಂತ ಹರಳಯ್ಯ ಪೀಠದ ಡಾ| ಗಂಗಾಂಬಿಕಾ ಅಕ್ಕ ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದ್ದರು.
ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು, ಸಮಿತಿ ಉಪಾಧ್ಯಕ್ಷ ಅನೀಲಕುಮಾರ ಮೆಟಗೆ, ರೇವಣಪ್ಪ ರಾಯವಾಡೆ, ಸುಭಾಷ ಡಿ. ಹೊಳಕುಂದೆ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಕಲ್ಪನಾ ಶೀಲವಂತ ಇದ್ದರು.