ಬಸವಕಲ್ಯಾಣ: ತಾಲೂಕಿನ ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದಲ್ಲಿ ಫೆ. 1ರಿಂದ 7ರ ವರೆಗೆ ಯೋಗಿರಾಜ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ 50ನೇ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಸ್ವಾಮೀಜಿ 50ನೇ ವರ್ಷದ ವರ್ಧಂತಿ ಮಹೋತ್ಸವ ನಿಮಿತ್ತ ನಡೆಯುವ ವಿವಿಧ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ದೇಶದ ಬಹುಭಾಗಗಳಲ್ಲಿ ಸಂಚರಿಸಿದ್ದ ಶ್ರೀ ನಾಗಭೂಷಣ ಶಿವಯೋಗಿಗಳು ತಮ್ಮ ಅವತಾರಲೀಲೆ ಮುಗಿಸಿ ಇಂದಿಗೆ 50 ವರ್ಷಗಳಾದ ಪ್ರಯುಕ್ತ ಪುಣ್ಯರಾಧನೆ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರಿ ಪ್ರಣವಾನಂದ ಸ್ವಾಮೀಜಿ ಕಳೆದ 20 ವರ್ಷಗಳಲ್ಲಿ ಮಠದ ಚಿತ್ರಣವನ್ನೇ ಬದಲಾವಣೆ ಮಾಡಿದ್ದಾರೆ. ಮಠದ ಆವರಣದಲ್ಲಿ ಆರಂಭವಾಗಿರುವ ಗುರುಕುಲ ಶಿಕ್ಷಣ ಸಂಸ್ಥೆ ಈಗ ಪದವಿ ಪೂರ್ವ ಮಹಾವಿದ್ಯಾಲಯದ ವರೆಗೆ ಶಿಕ್ಷಣ ನೀಡುವ ಕೇಂದ್ರ ಇದಾಗಿದೆ.
ಇಂತಹ ಐತಿಹಾಸಿಕ ಮತ್ತು ಪರಂಪರೆ ಹಿನ್ನೆಲೆ ಹೊಂದಿದ ಮಠದ ಸದ್ಗುರು ಶ್ರೀ ಯೋಗಿರಾಜ ನಾಗಭೂಷಣ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಸ್ವಾಮೀಜಿ ವರ್ಧಂತಿ ಮಹೋತ್ಸವದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಭಕ್ತರು ಸೇರಿದಂತೆ 270ಕ್ಕೂ ಹೆಚ್ಚು ಮಠಾಧೀಶರು ಪಾಲೊಳ್ಳಲಿದ್ದಾರೆ. ಹೀಗಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಠದ ಆವರಣದಲ್ಲಿ ಕಾರ್ಯಕ್ರಮದ ಎರಡು ದಿನ ಮುನ್ನವೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಊಟಕ್ಕಾಗಿ ಬೃಹತ್ ಪೆಂಡಾಲ್ ಮತ್ತು ಪಕ್ಕದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಉಪಹಾರ ಹಾಗೂ ಊಟಕ್ಕೆ ಪ್ರತಿದಿನ ಒಂದು ನಮೂನೆ ಸಿಹಿ, ಪಲ್ಯ, ಬಿಳಿ ಜೋಳದ ರೊಟ್ಟಿ, ಹುಗ್ಗಿ, ಲಾಡು, ಹೆಸರು ಬೆಳೆ ಪಾಯಸ, ಸಜ್ಜಕ್ಕಿ ಸೇರಿದಂತೆ ವಿವಿಧ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ 30 ಕ್ವಿಂಟಲ್ ಲಾಡು, 20 ಕ್ವಿಂಟಲ್ ಸಜ್ಜಕ್ಕಿ ಸಿದ್ಧಪಡಿಸಲಾಗಿದೆ. 3 ಲಕ್ಷ ರೂ. ಗಳಲ್ಲಿ 1 ಲಕ್ಷ ಬಿಳಿ ಜೋಳದ ರೊಟ್ಟಿಗಳನ್ನು ಮನ್ನಾಎಖ್ಖಳ್ಳಿಯಿಂದ ತರಸಿಕೊಳ್ಳಳಾಗಿದೆ ಮತ್ತು ಯಾದಗಿರಿ ಮಠದ ಭಕ್ತರು ಸುಮಾರು
100 ಕ್ವಿಂಟಲ್ ಅಕ್ಕಿ ಸೇರಿದಂತೆ ಭಕ್ತರು ಸ್ವ ಇಚ್ಛೆಯಿಂದ ದಾಸೋಹಕ್ಕಾಗಿ ನೀಡುತ್ತಿದ್ದಾರೆ ಎಂದು ಮಠದ ಉತ್ತರಾಧಿಕಾರಿ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಎಲ್ಲ ದಾನಕ್ಕಿಂತಲೂ ಅನ್ನ ದಾಸೋಹ ಅತ್ಯಂತ ಶ್ರೇಷ್ಠ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಮತ್ತು ಸುಮಾರು 300ಕ್ಕೂ ಹೆಚ್ಚು ಮಹಿಳಾ ಸಂಘಗಳು ಪ್ರಸಾದ ನೀಡಲು ಮುಂದೆ ಬಂದಿವೆ.
ಶ್ರೀ ಪ್ರಣವಾನಂದ ಸ್ವಾಮೀಜಿ,
ನಾಗಭೂಷಣ ಶಿವಯೋಗಿಗಳ
ಸಂಸ್ಥಾನ ಮಠ ಮುಚಳಂಬ
ವೀರಾರೆಡ್ಡಿ ಆರ್. ಎಸ್.