ಬಸವಕಲ್ಯಾಣ: ನಗರದಲ್ಲಿ ನಗರಸಭೆಯಿಂದ ಕೈಗೊಂಡಿರುವ ರಸ್ತೆ ಡಿವೈಡರ್ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ನಿತ್ತ ಸಮಸ್ಯೆ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ವಿವಿಧ ಪ್ರಮುಖ ರಸ್ತೆಗಳ ಡಿವೈಡರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅವುಗಳಲ್ಲಿ ಕೆಲವು ಪೂರ್ಣವಾದರೆ, ಕೆಲವು ಅಗೆದು ಹಾಗೆ ಬಿಡಲಾಗಿದೆ. ಇದು ಸಾರ್ವಜನಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹರಳಯ್ಯ ವೃತ್ತದ ವರೆಗೆ ಡಿವೈಡರ್ ಕಾಮಗಾರಿ ಸಲುವಾಗಿ ರಸ್ತೆ ಅಗೆದು ಹಾಗೆ ಬೀಡಲಾಗಿದೆ.
ಕಾಂಕ್ರಿಟ್, ಜಲ್ಲಿ ಕಲ್ಲುಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ಬೈಕ್ ಸವಾರರು ಮತ್ತು ಪ್ರಯಾಣಿಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಅಪಘಾತ ನಡೆಯುವುದು ಖಚಿತ ಎಂಬಂತಿದೆ. ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾತ್ರ ಕಳೆದ ಒಂದು ತಿಂಗಳಿಂದ ಡಿವೈಡರ್ ಕೆಲಸಕ್ಕಾಗಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ಒಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಡಿವೈಡರ್ ಕಾಮಗಾರಿಗಾಗಿ ಅಗೆದಿರುವುದನ್ನು ಕೂಡಲೇ ಪೂರ್ಣಗೊಳಿಸಿ ಮುಂದೆ ನಡೆಯುವ ಅನಾಹುತ ತಪ್ಪಿಸಬೇಕು ಎಂದು ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಡಿವೈಡರ್ ಕಾಮಗಾರಿಗಾಗಿ ರಸ್ತೆ ಅಗೆದು ಬಿಟ್ಟಿರುವುದು ಸಂಚಾರಕ್ಕೆ ಕಿರಿಕಿರಿ ಉಂಟಾಗಿದೆ. ಜನದಟ್ಟನೆ ಇರುವ ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ವಾಹನಗಳು ಎದುರುಗಡೆ ಬಂದರೆ ರಸ್ತೆ ಯಾವುದೊ, ಡಿವೈಡರ್ ಯಾವುದೊ ಎಂಬುವುದು ತಿಳಿಯದಂತಾಗಿದೆ. ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಡಿವೈಡರ್ ಮಾಡದ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಮತ್ತು ಬೈಕ್ ಸವಾರರು ರಸ್ತೆ ಮಧ್ಯದಿಂದ ಮನಸ್ಸಿಗೆ ಬಂದಂತೆ ಸಂಚರಿಸುತ್ತಿದ್ದಾರೆ. ಇದರಿಂದ ವೃದ್ಧರಿಗೆ ಮತ್ತು ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವಂತೆ ಮಾಡಿದೆ.
ಕಾರ್ಮಿಕರ ಸಮಸ್ಯೆ ಇದ್ದ ಕಾರಣ ಡಿವೈಡರ್ ಕೆಲಸ ಅರ್ಧಕ್ಕೆ ನಿಂತಿದೆ. ಕಾರ್ಮಿಕರು ಸಿಕ್ಕ ತಕ್ಷಣ ಒಂದು ವಾರದ ಒಳಗೆ ಡಿವೈಡರ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಮೀನಾಕುಮಾರಿ ಬೋರಾಳಕರ್,
ಪೌರಾಯುಕ್ತರು ನಗರಸಭೆ ಬಸವಕಲ್ಯಾಣ
ವೀರಾರೆಡ್ಡಿ ಆರ್. ಎಸ್.