ಬಸವಕಲ್ಯಾಣ: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಂಚೆ ಚೀಟಿ ಕಚೇರಿ ಪ್ರವೇಶ ಬಾಗಿಲು ಮುಂದೆ ಮಳೆ ನೀರು ಹಾಗೂ ತ್ಯಾಜ್ಯ ಸಂಗ್ರಹವಾಗಿದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿತ್ಯ ಓಡಾಡಲು ಸಮಸ್ಯೆ ಎದುರಿಸುವಂತಾಗಿದೆ.
ಅಂಚೆ ಚೀಟಿ ಕಚೇರಿ ಹಾಗೂ ಕಾಲೇಜು ಒಂದೆ ಕಡೆ ಇರುವುದರಿಂದ ಬೆಳಗಾದರೆ ಸಾಕು ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮೀಣ ಭಾಗದ ಮಹಿಳೆಯರು, ವೃದ್ಧರು ಹಾಗೂ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದು ಸಾಮಾನ್ಯವಾಗಿದೆ.
ಆದರೆ ಅಂಚೆ ಕಚೇರಿ ಎದುರುಗಡೆ ನಿಲ್ಲುವ ಮಳೆ ನೀರು ಸರಾಗವಾಗಿ ಮುಂದಕ್ಕೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದಕ್ಕೆ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇದರಿಂದ ಮಳೆ ನೀರು ಒಂದೇ ಕಡೆ ಸಂಗ್ರಹವಾಗಿ ಪಾಚಿಗಟ್ಟಿ ಗಬ್ಬು ನಾರುತ್ತಿದೆ. ಪಕ್ಕದಲ್ಲಿ ಕಸರಾಶಿ ಬಿದ್ದಿದ್ದು, ಹಂದಿ, ನಾಯಿ ಹಾಗೂ ಜಾನುವಾರುಗಳು ನೀರಿನಲ್ಲಿ ಠೀಕಾಣಿ ಹುಡುತ್ತಿವೆ. ಇದರಿಂದ ಮನೆ ಹಾಗೂ ಕಾಲೇಜಿನ ಸುತ್ತಮುತ್ತ ಕೆಟ್ಟ ವಾತಾವರಣ ನಿರ್ಮಾಣವಾಗಿದ್ದು, ಚಿಕ್ಕ ಮಕ್ಕಳು ಹೊರಗಡೆ ಬರಲಾರದಂತಾಗಿದೆ ಎಂದು ನಿವಾಸಿ ಮಹ್ಮದ್ ತಿಳಿಸಿದರು.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಭಯದಲ್ಲಿ ಮುಗು ಮುಚ್ಚಿಕೊಂಡು ಕಾಲೇಜಿಗೆ ಮತ್ತು ಅಂಚೆ ಚೀಟಿ ಕಚೇರಿ ಅನಿವಾರ್ಯವಾಗಿ ಬಂದು ಹೋಗುವಂತಾಗಿದೆ.
ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಮಳೆ ನೀರು ಸರಾಗವಾಗಿ ಮುಂದಕ್ಕೆ ಹೋಗುವಂತೆ ಮಾಡಬೇಕು ಮತ್ತು ಕಸದ ರಾಶಿ ವಿಲೇವಾರಿ ಮಾಡುವ ಮೂಲಕ ಸಮಸ್ಯೆಯಿಂದ ಮುಕ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.