ಬಸವಕಲ್ಯಾಣ: ಉಜಳಂಬ ಗ್ರಾಮ ಪಂಚಾಯಿತಿಯು ನಿರಂತರ ಜ್ಯೋತಿ ಯೋಜನೆಗೆ ಆಯ್ಕೆಯಾಗಿ ಕೆಲವು ವರ್ಷಗಳೇ ಕಳೆದಿದ್ದವು. ಆದರೆ ಅಧಿಕಾರಿಗಳ ನಿರ್ಲಕ್ಷವೋ ಅಥವಾ ತಾಂತ್ರಿಕ ಕಾರಣವೊ ನಿರಂತರ ಜ್ಯೋತಿ ಯೋಜನೆ ಬೆಳಕು ಮಾತ್ರ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಪ್ರಕಾಶಿಸಲು ಸಾಧ್ಯವಾಗಿಲ್ಲ.
Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲು ಉಜಳಂಬಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ನನೆಗುದಿಗೆ ಬಿದ್ದ ನಿರಂತರ ಜ್ಯೋತಿ ಯೋಜನೆ ಕಾಮಗಾರಿ ಈಗ ತೀವ್ರಗತಿಯಲ್ಲಿ ನಡೆಯುತ್ತಿದೆ. ಉಜಳಂಬ ಗ್ರಾಮದ ತುಂಬೆಲ್ಲಾ ವಿದ್ಯುತ್ ಕಂಬಗಳು ಹಾಗೂ ತಂತಿ ಜೋಡಣೆ ಕಾಮಗಾರಿ ಭರದಿಂದ ಸಾಗಿದೆ. ಇದು ಗ್ರಾಮಸ್ಥರು, ವೃದ್ಧರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದೆ. 2015-16ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯಲ್ಲಿ ಬಸವಕಲ್ಯಾಣ ತಾಲೂಕಿನ 180 ಹಳ್ಳಿಗಳನ್ನು ನಿರಂತರ ಜ್ಯೋತಿ ಯೋಜನೆಯಡಿ ಆಯ್ಕೆ ಮಾಡಿ, 2019ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಟೆಂಡರ್ ಪ್ರಕಾರ ಕಾಮಗಾರಿ ಮುಗಿಸಬೇಕಾಗಿತ್ತು. ಆದರೆ ಟೆಂಡರ್ ಪಡೆದ ಗುತ್ತಿಗೆದಾರರ ಸಮಸ್ಯೆಯಿಂದ ಕೇವಲ ಮಂಠಾಳ, ಮುಡಬಿ ಮತ್ತು ಭೋಸ್ಗಾ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಗ್ರಾಮಗಳಲ್ಲಿ ಕಾಮಗಾರಿಗಳು ಕೊನೆಯ ಹಂತದಲ್ಲಿವೆ ಎಂದು ಸಂಬಂಧ ಪಟ್ಟ ಇಲಾಖೆ ಎಇಇ ಅಧಿಕಾರಿ ಗಣಪತಿ ಟಿ. ಮೈನಾಳೆ ತಿಳಿಸಿದ್ದಾರೆ.