ಬಸವಕಲ್ಯಾಣ: ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನ ನಾರಾಯಣಪುರ ಗ್ರಾಮಕ್ಕೆ ಸರಬರಾಜು ಆಗುವ ಕೊಳವೆಬಾವಿ ಹಾಗೂ ಬಾವಿಗಳಲ್ಲಿನ ನೀರಿನ ಮಟ್ಟವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡೋಳಪ್ಪ ಪಿ.ಎಸ್. ಪರಿಶೀಲಿಸಿದರು.
ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತು ಸದಸ್ಯರ ಜತೆಗೆ ಚರ್ಚಿಸಿದರು. ಸದ್ಯ ಕೊಳವೆ ಹಾಗೂ ಬಾವಿಗಳಲ್ಲಿ ನೀರಿನ ಮೂಲ ಇವೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬೇಸಿಗೆ ಕೊನೆ ತಿಂಗಳಲ್ಲಿ ಸಮಸ್ಯೆ ಆಗಬಹುದು ಎಂದು ಪಿಡಿಒ ಶಿವಯೋಗಿಸ್ವಾಮಿ ಅಧಿಕಾರಿಗಳ ಗಮನಕ್ಕೆ ತಂದರು.
ವಾರ್ಡ್ ನಂ. 1ರಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಪಂ ಸದಸ್ಯ ಅರ್ಜುನಸಿಂಗ್ ಇಒ ಅವರ ಗಮನಕ್ಕೆ ತಂದರು. ವಾರ್ಡ್ ನಂ.1 ರಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ಬಾವಿಗಳಿಂದ ಗ್ರಾಮಕ್ಕೆ ಸರಬರಾಜ ಆಗುತ್ತಿರುವ ಪೈಪ್‌ಲೈನ್‌ನಿಂದ ಸಂಪರ್ಕ ಕಲ್ಪಿಸಿಕೊಡುಂತೆ ಸೂಚಿಸಿದರು.
ತಾಲೂಕಿನ ಮಂಠಾಳ, ಹಿರನಾಗಾಂವ, ಭೋಸ್ಗಾ ಗ್ರಾಮಗಳಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಲಾಗಿದೆ. ಹೀಗಾಗಿ ನಾರಾಯಣಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗುಣತೂರ, ಹುಲಗುತ್ತಿ ಹಾಗೂ ವಾಡಿ ಗ್ರಾಮದಲ್ಲಿ ಕೆಲಸ ಮಾಡುವವರು ಇದ್ದರೆ ನಮ್ಮ ಗಮನಕ್ಕೆ ತರಬೇಕು. ಕೆಲಸ ನೀಡುತ್ತೇನೆ ಮತ್ತು ಉದ್ಯೋಗ ಖಾತ್ರಿಗೆ ಸಂಬಂಧಪಟ್ಟಂತೆ ಗ್ರಾಮಗಳಲ್ಲಿ ಡೊಂಗುರು ಹೊಡೆಸುವಂತೆ ಸಿಬ್ಬಂದಿಗೆ ಹೇಳಿದರು.
ಕರ ವಸೂಲಿಗಾರ ಸಂತೋಷ ಸೆನಮೇ, ರಘುನಾಥ ಮಂಗಳೂರೆ, ಗ್ರಾಪಂ ಸದಸ್ಯರಾದ ವೀರಣ್ಣ ಶಿವಪುರ,
ವಾಮನ ಮೈಸೂಲಗೆ, ಭೀಮರೆಡ್ಡಿ ಬಂದೆ ಇದ್ದರು.