ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ನಗರಸಭೆ ಚುನಾವಣೆಯ ಪ್ರಚಾರ ಮತ್ತಷ್ಟು ರಂಗೇರಿದೆ.
ಒಟ್ಟು 50,541 ಮತದಾರರು ಇರುವ ನಗರಸಭೆಯ 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, 128 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಸವಕಲ್ಯಾಣದಲ್ಲಿ ನಗರಸಭೆ ಆರಂಭದಿಂದಲೂ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೆ ಮತದಾರರು ಹೆಚ್ಚು ಮಣೆ ಹಾಕಿದ್ದಾರೆ ಹೊರತು ಬಿಜೆಪಿಗಿಲ್ಲ ಎಂಬುದಕ್ಕೆ ಹಿಂದೆ ನಡೆದ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿವೆ.
ಆದರೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ರಾಜ್ಯದಲ್ಲಿ ಕಣಕ್ಕಳಿಸಿದ ಅಭ್ಯರ್ಥಿಗಳ ಪೈಕಿ ಕೇವಲ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಕಮಲ ಅರಳಿರುವುದು ನಗಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಉಳಿದ ಅಭ್ಯರ್ಥಿಗಳ ನಿದ್ದೆ ಕೆಡುವಂತೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಇತರ ಪಕ್ಷಗಳ ಹಲವು ಘಟಾನುಘಟಿ ನಾಯಕರು ಸೋತಿದ್ದಾರೆ. ಹೀಗಾಗಿ ಆಯಾ ಪಕ್ಷದ ಅಭ್ಯರ್ಥಿಗಳು ಹಗಲು ರಾತ್ರಿ ತಮ್ಮ ಗೆಲುವಿಗಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ ಯೋಜನೆಗಳನ್ನು ತಿಳಿಸುತ್ತ ಮತಯಾಚನೆ ಮಾಡುತ್ತಿದ್ದಾರೆ. ಆಟೋಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಿ, ಕರಪತ್ರಗಳನ್ನು ಹಂಚಲಾಗುತ್ತಿದೆ. ಅಭ್ಯರ್ಥಿಗಳು ಬಿಸಿಲು ಲೆಕ್ಕಿಸದೇ ಪಾದಯಾತ್ರೆ ಮೂಲಕ ಮನೆ-ಮನೆಗೆ ತೆರಳಿ ಭರವಸೆಗಳು ನೀಡುತ್ತ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.
ಪ್ರಚಾರಕ್ಕೆ ಇನ್ನೂ ಮೂರು ದಿನಗಳು ಮಾತ್ರ ಉಳಿದಿರುವುದರಿಂದ ಆಯಾ ಪಕ್ಷದ ಅಭ್ಯರ್ಥಿಗಳು ಹೇಗಾದರೂ ಮಾಡಿ ಗೆಲುವು ಸಾಧಿಸಬೇಕು ಎಂದು ಪಣ ತೊಟ್ಟು, ತಮ್ಮ ಶಕ್ತಿಗೂ ಮೀರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಬೀಸಿದ ಗಾಳಿ ಸ್ಥಳೀಯ ಚುನಾವಣೆಯಲ್ಲಿ ಮುಂದುವರಿಯುತ್ತದೊ ಅಥವಾ ಮತದಾರರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಒಲಿಯುತ್ತಾರೊ ಎಂಬುದನ್ನು ತಿಳಿಯಲು ಮೇ 31ರ ಫಲಿತಾಂಶದ ವರೆಗೆ ಕಾಯಬೇಕಾಗಿದೆ.
ಲೋಕಸಭೆ ಹಾಗೂ ನಗಸಭೆ ಚುನಾವಣೆಗಳಲ್ಲಿ ಬಹಳ ವ್ಯತ್ಯಾಸವಿದೆ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ನಡೆಯುವುದಿಲ್ಲ. ಇದರಿಂದ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಬಹುದು ಎಂಬ ಭರವಸೆ ನನಗಿದೆ.
•
ಶಬ್ಬೀರ್ ಪಾಶಾ,
ಜೆಡಿಎಸ್ ಅಧ್ಯಕ್ಷ ಬಸವಕಲ್ಯಾಣ
ಇಡೀ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದೆ. ಅದು ಸ್ಥಳೀಯ ಚುನಾವಣೆಯಲ್ಲೂ ಮುಂದುವರಿಯಲಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಗೆಲವು ಸಾಧಿಸಿ ನಗಸಭೆಗೆ ಪ್ರವೇಶಿಸಲಿದ್ದಾರೆ ಎಂಬ ನಂಬಿಕೆ ನನಗಿದೆ.
•
ಶಿವಪುತ್ರ ಗೌರ,
ಬಿಜೆಪಿ ಅಧ್ಯಕ್ಷ ಬಸವಕಲ್ಯಾಣ