ಬಸವಕಲ್ಯಾಣ: ಬಡವರು ಮತ್ತು ಹಿಂದುಳಿದ ವರ್ಗದವರಿಗೆ ಉಚಿತ ಆರೋಗ್ಯ ಚಿಕಿತ್ಸೆಗಾಗಿ ಸರ್ಕಾರ ಜಾರಿಗೊಳಿಸಿರುವ ಪ್ರತಿಯೊಂದು ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕೆಲಸವಾಗಿದೆ ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕುರಿತು ನಡೆದ ಪಾಕ್ಷಿಕ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಆರೋಗ್ಯದ ಹಿತದೃಷ್ಟಿಯಿಂದ ಗುಣಮಟ್ಟದ ಆಹಾರ ಸೇವನೆ ಮಾಡುವುದು ಕಲಿಯಬೇಕು ಮತ್ತು ರಸ್ತೆ ಬದಿ ಸಿಗುವ ತಿಂಡಿಗಳ ಸೇವನೆ ತ್ಯಜಿಸಿದಾಗ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ಆರೋಗ್ಯವಂತ ಸಮಾಜ ನಿರ್ಮಿಸಲು ಮೊದಲು ಸ್ವತ್ಛತೆಗೆ ಆದ್ಯತೆ ನೀಡುವುದನ್ನು ಕಲಿಯಬೇಕು. ಹೆಣ್ಣು ಮಕ್ಕಳು ಹುಟ್ಟಿದರೆ ಶಿಶುಗಳನ್ನು ಮುಳ್ಳಿನ ಬೇಲಿಗಳಲ್ಲಿ ಬಿಸಾಡುವುದು, ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿವೆ.
ಮುಂದಿನ ದಿನಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅದರ
ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು. ಆಯುಷ್ಮಾನ್ ಭಾರತ ಜಿಲ್ಲಾ ನೋಡಲ್ ಅಧಿಕಾರಿ ಡಾ| ನಂದಕುಮಾರ ಮಾತನಾಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಿಲ್ಲೆಯಲ್ಲಿ ಬಹಳ ಯಶಸ್ವಿಯಾಗಿ ಒಂದು ವರ್ಷ ಪೂರೈಸುತ್ತಿದೆ. ಜಿಲ್ಲೆಯಲ್ಲಿ 72 ಸರ್ಕಾರಿ ಸಂಸ್ಥೆಗಳಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 29 ಪ್ರಾಥಮಿಕ ಆರೋಗ್ಯ ಕೇಂದ್ರ, 8 ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಯೋಜನೆಯಲ್ಲಿ 1,650 ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಕ್ಲಿಷ್ಟಕರ ದ್ವಿತೀಯ ಹಂತದ 254, ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳನ್ನು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಡಾ| ತಾಜೋದ್ದಿನ್ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ತಾಪಂ ಇಒ ಮಡೋಳಪ್ಪಾ ಪಿ.ಎಸ್., ವೈದ್ಯಾಧಿಕಾರಿ ಡಾ|ಅಪರ್ಣಾ, ಡಾ| ಎಸ್.ಬಿ.ದುರ್ಗೆ, ಸಿಡಿಪಿಒ ಶಾರದಾ ಕಲಮಲಕರ್, ಅಶೋಕ ಸಂಗನೋರೆ, ದಿಲೀಪ, ವಿನೋದ ಕುರಿ ಮತ್ತಿತರರು ಇದ್ದರು. ಡಾ|ಜ್ಯೋತಿ ಖಂಡ್ರೆ ಸ್ವಾಗತಿಸಿದರು. ರಾಜು ಮಡಕೆ ನಿರೂಪಿಸಿದರು.