ಬಸವಕಲ್ಯಾಣ: ಕೃಷಿ ಕೆಲಸ ಬೇರೆಯವರಿಂದ ಮಾಡಿಸುವ ಕಾರ್ಯವಲ್ಲ. ಸ್ವತಃ ರೈತನಾದವನು ದುಡಿಯಬೇಕು. ಆಗ ಮಾತ್ರ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಕಾರ್ಯಕಾರಣಿ ಸದಸ್ಯ ಡಾ| ಶಂಕರ ಜಂಗಣ್ಣನವರ ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ದಶಮಾನೋತ್ಸವ ಸಮಾರಂಭದ ನಿಮಿತ್ತ ಮಂಗಳವಾರ ನಡೆದ ಒಂದು ದಿನದ ರೈತರೊಂದಿಗೆ ಸಂವಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೈಹಿಕವಾಗಿ ಶ್ರಮ ಬಯಸುವ ಜತೆಗೆ ಕೃಷಿಯಲ್ಲಿ ಶ್ರದ್ಧೆಯಿಂದ ದುಡಿಯಬೇಕು. ಸಕಾಲಿಕ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡಾಗ ಮಾತ್ರ ರೈತ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಬಿ. ಕಿವಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಕ್ಷೇತ್ರ ಹೊಸ ಪೀಳಿಗೆಯ ನಿರಾಸಕ್ತಿಯಿಂದ ಇಂದು ಸೊರಗುತ್ತಿದೆ. ಕೃಷಿಕನ ಏಳ್ಗೆಗೆ ತಂತ್ರಜ್ಞಾನ ಅಗತ್ಯ.ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಪ್ರೀತಿ, ಅಭಿಮಾನ, ಮೂಡಿಸುವಲ್ಲಿ ಈ ರೀತಿಯ ಕಾರ್ಯಗಳು ತುಂಬ ಸಹಕಾರಿಯಾಗಲಿವೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಭಿಮನ್ಯು ನಿರಗುಡೆ, ಜಗನ್ನಾಥ ಸಜ್ಜನಶೆಟ್ಟಿ ಭಾಗವಹಿಸಿದರು.
ರೈತ ಸಂಘದ ಕಾರ್ಯದರ್ಶಿ ಸುಭಾಷ ರಗಟೆ, ಡಾ| ಭೀಮಾಶಂಕರ ಬಿರಾದಾರ್, ದೇವಿಂದ್ರ ಬರಗಾಲೆ ಹಾಗೂ ಕಾಲೇಜು ಸಿಬ್ಬಂದಿ ಇದ್ದರು. ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ| ದಯಾನಂದ ಶೀಲವಂತ ಸ್ವಾಗತಿಸಿದರು. ಪ್ರೊ| ಬಾಲಾಜಿ ದೇಶಮುಖ ವಂದಿಸಿದರು. ಪ್ರೊ| ಶರದರೆಡ್ಡಿ ನಿರೂಪಿಸಿದರು.