ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಶುಕ್ರವಾರ ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ಉತ್ತರಾಧಿಕಾರಿಯಾದ ಶ್ರೀಗಳು ಪೂರ್ವಾಶ್ರಮದಲ್ಲಿ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಶಿವಮೂರ್ತಯ್ಯ ದಂಪತಿಗಳ ಪುತ್ರ ಬಸವಾದಿತ್ಯ ಎಂದು ತಿಳಿಸಿದ್ದಾರೆ.
ಬಸವಣ್ಣನವರು ಹೇಳುವಂತೆ ಸಂಸಾರವೆಂಬುದು ಗಾಳಿಗಿಟ್ಟ ದೀಪ. ಅದೇ ರೀತಿ ಮಾನವನ ಬದುಕು ಅಸ್ಥಿರವಾಗಿರುತ್ತದೆ. ಬೇರೆಯವರು ಅಪಘಾತ, ಹೃದಯಾಘಾತ ಅಥವಾ ಇನ್ನಿತರೆ ಅವಘಡಗಳಿಂದ ಮಡಿದರೆ ಮನೆಗಳಲ್ಲಿ ಇತರರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ನೂರಾರು ಸಂಘಸಂಸ್ಥೆಗಳು, ಶಾಖಾ ಮಠಗಳು, ಸಂಘಟನೆಗಳು ಇರುವ ಮಠದಲ್ಲಿ ಇಂತಹ ಶೂನ್ಯ ನಿರ್ಮಾಣ ಆಗಬಾರದು. ಶೂನ್ಯವನ್ನು ಭರ್ತಿ ಮಾಡುವ ಸಲುವಾಗಿ ಗರಗುರು ಚರಮೂರ್ತಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುರುಘಾ ಶರಣರು ತಿಳಿಸಿದರು.
ಇದನ್ನೂ ಓದಿ:ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು
ಸಮಕಾಲೀನ ಸಂಧರ್ಭದ ಆಕಸ್ಮಿಕವಾದ ಹಾಗೂ ಅಷ್ಟೇ ಅರ್ಥಪೂರ್ಣವಾದ ನಿರ್ಧಾರವಾಗಿದೆ. ಬಸವಾದಿತ್ಯ ಎಂಬ ಹೆಸರಿನ ಮುರುಘಾ ಮಠದ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿರುವ ಮರಿಯನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದೆ ಅವರ ಶಿಕ್ಷಣ ಎಲ್ಲವನ್ನೂ ಪೂರೈಸಿ ಪಟ್ಟ ಕಟ್ಟಲಾಗುವುದು ಎಂದರು.
ಮುಂದೆ ಯಾವ ಗೊಂದಲವೂ ಆಗಬಾರದು. ನಮ್ಮ ಜೀವನದ ಆತ್ಯಂತಿಕ ಸಮಸ್ಯೆಯನ್ನು ತುಂಬಾ ಸರಳವಾಗಿ ಬಗೆಹರಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.